ವಿಶ್ವದ ಮೊದಲ ಬಿಲಿಯನೇರ್ ಜಾನ್ ರಾಕೆಫೆಲ್ಲರ್; ಯಾರಾಗ್ತಾರೆ ಮೊದಲ ಟ್ರಿಲಿಯನೇರ್? ಮಸ್ಕ್ vs ಅದಾನಿ

|

Updated on: Sep 10, 2024 | 6:00 PM

Race to become world's first trillionaire: 1916ರಲ್ಲಿ ಅಮೆರಿಕನ್ ಉದ್ಯಮಿ ಜಾನ್ ಡೇವಿಸನ್ ರಾಕೆಫೆಲ್ಲರ್ ವಿಶ್ವದ ಮೊದಲ ಬಿಲಿಯನೇರ್ ಎನಿಸಿದ್ದರು. ಈಗ ವಿಶ್ವದ ಮೊದಲ ಟ್ರಿಲಿಯನೇರ್ ಯಾರಾಗಬಹುದು ಎನ್ನುವ ಕುತೂಹಲ ಇದೆ. ಇನ್ಫಾರ್ಮ ಕನೆಕ್ಟ್ ಅಕಾಡೆಮಿ ಸಂಸ್ಥೆಯ ಅಂದಾಜಿನ ಪ್ರಕಾರ ಇಲಾನ್ ಮಸ್ಕ್ ಮೊದಲ ಟ್ರಿಲಿಯನೇರ್ ಪಟ್ಟ ಗಿಟ್ಟಿಸಬಹುದು. ಗೌತಮ್ ಅದಾನಿ ಎರಡನೆಯವರಾಗಬಹುದು.

ವಿಶ್ವದ ಮೊದಲ ಬಿಲಿಯನೇರ್ ಜಾನ್ ರಾಕೆಫೆಲ್ಲರ್; ಯಾರಾಗ್ತಾರೆ ಮೊದಲ ಟ್ರಿಲಿಯನೇರ್? ಮಸ್ಕ್ vs ಅದಾನಿ
ಗೌತಮ್ ಅದಾನಿ, ಇಲಾನ್ ಮಸ್ಕ್
Follow us on

ನವದೆಹಲಿ, ಸೆಪ್ಟೆಂಬರ್ 10: ಹಲವು ಉದ್ಯಮಗಳ ಒಡೆಯ ಇಲಾನ್ ಮಸ್ಕ್ ಅವರು ಈಗಿನಂತೆಯೇ ಸಂಪತ್ತು ಕಲೆಹಾಕುತ್ತಾ ಹೋದರೆ ಅವರು ವಿಶ್ವದ ಮೊದಲ ಟ್ರಿಲಿಯನೇರ್ ಆಗುವ ದಿನ ದೂರ ಇಲ್ಲ. ಹಾಗಂತ ಹೇಳುತ್ತಿದೆ ಇನ್ಫಾರ್ಮ ಕನೆಕ್ಟ್ ಅಕಾಡೆಮಿ. ಇಲಾನ್ ಮಸ್ಕ್ 2027ರಲ್ಲಿ ಟ್ರಿಲಿಯನೇರ್ ಎನಿಸಬಹುದು. ಭಾರತದ ಗೌತಮ್ ಅದಾನಿ ವಿಶ್ವದ ಎರಡನೇ ಟ್ರಿಲಿಯನೇರ್ ಎನಿಸಬಹುದು. ಅವರು 2028ಕ್ಕೆ ಆ ಮೈಲಿಗಲ್ಲು ಮುಟ್ಟುವ ಸಾಧ್ಯತೆ ಇದೆ. ಅದೂ ಅವರ ಸಂಪತ್ತು ಈಗಿನ ದರದಲ್ಲಿ ಮುಂದುವರಿದರೆ ಮಾತ್ರ. ಜೆನ್ಸೆನ್ ಹುವಾಂಗ್, ಬರ್ನಾರ್ಡ್ ಆರ್ನಾಲ್ಟ್, ಸೆರ್ಗೇ ಬ್ರಿನ್, ಜೆಫ್ ಬೇಜೋಸ್ ಮೊದಲಾದವರೂ ಕೂಡ ಟ್ರಿಲಿಯನೇರ್ಸ್ ಎನಿಸುವ ಸಾಮರ್ಥ್ಯ ಮತ್ತು ಸಾಧ್ಯತೆ ಹೊಂದಿದ್ದಾರೆ.

ಟ್ರಿಲಿಯನೇರ್ ಎಂದರೆ ಎಷ್ಟು ಆಸ್ತಿ ಹೊಂದಿರಬೇಕು?

ಬಿಲಿಯನೇರ್ ಎನಿಸಬೇಕಾದರೆ ಕನಿಷ್ಠ ಒಂದು ಬಿಲಿಯನ್ ಡಾಲರ್ (100 ಕೋಟಿ ಡಾಲರ್), ಅಂದರೆ 8,500 ಕೋಟಿ ರುಪಾಯಿ ಮೌಲ್ಯದ ಆಸ್ತಿ ಹೊಂದಿರಬೇಕು. ಅದೇ ಟ್ರಿಲಿಯನೇರ್ ಎಂದರೆ ಒಂದು ಲಕ್ಷ ಕೋಟಿ ಡಾಲರ್ ಶ್ರೀಮಂತರಾಗಿರುತ್ತಾರೆ. ಅಂದರೆ ಸುಮಾರು 85 ಲಕ್ಷ ಕೋಟಿ ರುಪಾಯಿ ಮೌಲ್ಯದ ಸಂಪತ್ತು ಹೊಂದಿರುವವರು ಟ್ರಿಲಿಯನೇರ್ ಎನಿಸುತ್ತಾರೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಿಂದ ಸರ್ಕಾರಕ್ಕೆ ಸಿಗುವ ಜಿಎಸ್​ಟಿ ಮೊತ್ತ 400 ಕೋಟಿ ರೂ?

ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಇಲಾನ್ ಮಸ್ಕ್ ಸದ್ಯ 251 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರ ಸಂಪತ್ತು ಶೇ. 110ರ ವಾರ್ಷಿಕ ಸರಾಸರಿ ದರದಲ್ಲಿ ಬೆಳೆಯುತ್ತಿದೆ. ಇದೇ ವೇಗದಲ್ಲಿ ಸಂಪತ್ತು ಹೆಚ್ಚಾದರೆ 2027ಕ್ಕೆ ಅವರ ಸಂಪತ್ತಿನ ಮೌಲ್ಯ 1,000 ಬಿಲಿಯನ್ ಡಾಲರ್ ಅಥವಾ ಒಂದು ಟ್ರಿಲಿಯನ್ ಡಾಲರ್ ಮಟ್ಟ ಮುಟ್ಟಬಹುದು. ಇನ್ನೂ ವೇಗದಲ್ಲಿ ಅವರು ಸಂಪತ್ತು ವೃದ್ಧಿಸಿಕೊಂಡರೆ ಒಂದು ಅಥವಾ ಎರಡು ವರ್ಷದಲ್ಲಿ ಟ್ರಿಲಿಯನೇರ್ ಅನಿಸಿದರೂ ಅಚ್ಚರಿ ಇಲ್ಲ.

ಗೌತಮ್ ಅದಾನಿ ಅವರ ಷೇರು ಸಂಪತ್ತು ಸದ್ಯ 100 ಬಿಲಿಯನ್ ಡಾಲರ್ ಕೂಡ ಇಲ್ಲ. ಶ್ರೀಮಂತಿಕೆಯಲ್ಲಿ 13ನೇ ಸ್ಥಾನದಲ್ಲಿದ್ದಾರೆ. ಆದರೂ ಕೂಡ ಅವರ ಸಂಪತ್ತು 123 ಪ್ರತಿಶತದ ವೇಗದಲ್ಲಿ ಹೆಚ್ಚುತ್ತಿದೆ. ಇದೇ ರೀತಿ ಹೆಚ್ಚಾದಲ್ಲಿ 2028ಕ್ಕೆ ಟ್ರಿಲಿಯನೇರ್ ಎನಿಸುತ್ತಾರೆ. ಇಲಾನ್ ಮಸ್ಕ್ ನಂತರದ ಸ್ಥಾನ ಅದಾನಿಯದ್ದಾಗಬಹುದು.

ಭಾರತದ ನಂಬರ್ ಒನ್ ಶ್ರೀಮಂತ ಎನಿಸಿರುವ ಮುಕೇಶ್ ಅಂಬಾನಿ ಅವರ ಸಂಪತ್ತು ವಾರ್ಷಿಕ ಸರಾಸರಿ 28.25ರ ದರದಲ್ಲಿ ಹೆಚ್ಚುತ್ತಿದೆ. ಅವರು ಟ್ರಿಲಿಯನೇರ್ ಗುಂಪು ಸೇರಬೇಕಾದರೆ 2033 ಆಗಬಹುದು.

ಇದನ್ನೂ ಓದಿ: ವಿದೇಶಗಳಿಗೆ ಹೋಗಲಿವೆ ಮಾರುತಿ ಸುಜುಕಿಯ ಎಲೆಕ್ಟ್ರಿಕ್ ಕಾರುಗಳು; ಬಯೋಫುಯಲ್, ಹೈಡ್ರೋಜನ್ ಕಾರುಗಳ ತಯಾರಿಕೆಗೂ ಆಲೋಚನೆ

1916ರಲ್ಲಿ ಅಮೆರಿಕದ ಶ್ರೀಮಂತ ಜಾನ್ ಡಿ ರಾಕೆಫೆಲ್ಲರ್ ಅವರು ವಿಶ್ವದ ಮೊದಲ ಬಿಲಿಯನೇರ್ ಪಟ್ಟ ಪಡೆದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಬಹಳಷ್ಟು ಬಿಲಿಯನೇರ್​ಗಳು ಬಂದು ಹೋಗಿದ್ದಾರೆ. ಟ್ರಿಲಿಯನೇರ್ ಎನಿಸಿದ ವ್ಯಕ್ತಿಗಳು ಯಾರೂ ಇಲ್ಲ. ಇಲಾನ್ ಮಸ್ಕ್ ಆ ಮೈಲಿಗಲ್ಲು ಮುಟ್ಟುತ್ತಾರಾ ನೋಡಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ