
ನವದೆಹಲಿ, ನವೆಂಬರ್ 27: ದಶಕಗಳ ಕಾಲ ಜಾಗತಿಕ ಬೆಳವಣಿಗೆಗೆ ಪೆಟ್ರೋಲಿಯಂ ಪುಷ್ಟಿ ಕೊಟ್ಟಂತೆ, ಮುಂದಿನ ಹಂತದ ವಿಶ್ವ ಏಳ್ಗೆಗೆ ವಿರಳ ಭೂ ಖನಿಜಗಳು (Rare Earth Minerals) ಕಾರಣವಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಈಗ ವಿರಳ ಭೂ ಖನಿಜಗಳಿಗೆ ಇಡೀ ಜಗತ್ತು ಬಹುತೇಕ ಚೀನಾ (China) ಮೇಲೆ ಅವಲಂಬಿತವಾಗಿವೆ. ಅಮೆರಿಕದಂಥ ಅಮೆರಿಕವೇ ಚೀನಾವನ್ನು ಮುಟ್ಟಲು ಹೆದರುವಂತಾಗಿದೆ. ಇದಕ್ಕೆ ಕಾರಣವೇ ಚೀನಾ ಬಳಿ ಇರುವ ವಿರಳ ಭೂ ಖನಿಜಗಳ ಸಂಪತ್ತು. ಈ ರೇರ್ ಅರ್ಥ್ ಮಿನರಲ್ ಅಥವಾ ಮ್ಯಾಗ್ನೆಟ್ ಇಲ್ಲದಿದ್ದರೆ ಅಮೆರಿಕದ ಸ್ಮಾರ್ಟ್ಫೋನೂ ಕೆಲಸ ಮಾಡಲ್ಲ, ಲ್ಯಾಪ್ಟಾಪ್ ಕೂಡ ಕೆಲಸ ಮಾಡಲ್ಲ. ಎದುರಾಳಿಗಳನ್ನು ನಡುಕ ಹುಟ್ಟಿಸಬಲ್ಲ ಎಫ್-35ನಂತಹ ಯುದ್ಧ ವಿಮಾನವೂ ಸದ್ದು ಮಾಡಲ್ಲ. ಆ ಮಟ್ಟಿಗೆ ವಿಶ್ವದ ತಂತ್ರಜ್ಞಾನ ಲೋಕವು ವಿರಳ ಭೂ ಖನಿಜಗಳ ಮೇಲೆ ಅವಲಂಬಿತವಾಗಿದೆ.
ವಿರಳ ಭೂ ಖನಿಜಗಳು ವಿಶ್ವಾದ್ಯಂತ ಲಭ್ಯ ಇವೆ. ಆದರೆ, ಅದನ್ನು ಹೆಕ್ಕಿ ತೆಗೆಯುವುದೇ ಬಹಳ ಕಷ್ಟದ ಕೆಲಸ. ಬೆಟ್ಟ ಅಗೆದು ಇಲಿ ಹಿಡಿದಂತೆ. ಇದರ ಗಣಿಗಾರಿಕೆಯಿಂದ ಪರಿಸರಕ್ಕೆ ತೀವ್ರ ಮಾಲಿನ್ಯ ಹರಡುತ್ತದೆ. ಹೀಗಾಗಿ, ಮುಂದುವರಿದ ದೇಶಗಳು ಈ ಕೆಲಸವನ್ನು ತೃತೀಯ ಜಗತ್ತಿಗೆ ವರ್ಗಾಯಿಸಿದಂತಿವೆ. ಚೀನಾ ತನ್ನ ವಿನೂತನ ತಂತ್ರಜ್ಞಾನಗಳನ್ನು ಬಳಸಿ ವಿರಳ ಭೂ ಖನಿಜಗಳನ್ನು ಹೊರತೆಗೆಯುವ ಕಾರ್ಯದಲ್ಲಿ ಪರಿಣಿತಿ ಗಳಿಸಿದೆ. ಹಲವು ದಶಕಗಳ ಅನುಭವದಿಂದ ಇವತ್ತು ಶೇ. 90ರಷ್ಟು ವಿರಳ ಭೂ ಖನಿಜ ಮಾರುಕಟ್ಟೆ ಚೀನಾ ಹಿಡಿತದಲ್ಲಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ 9 ಜಿಲ್ಲೆಗಳಲ್ಲಿ ಕೈಗಾರಿಕಾ ಪಾರ್ಕ್ ನಿರ್ಮಿಸುವ ಎಚ್ಡಿಕೆ ಪ್ರಸ್ತಾಪ ಪರಿಗಣಿಸಿದ ಕೇಂದ್ರ ಸರ್ಕಾರ
ಸ್ಕ್ಯಾಂಡಿಯಂ, ವೈಟ್ರಿಯಂ, ಲ್ಯಾಂಥಾನಂ, ನಿಯೋಡೈಮಿಯಂ, ಗ್ಯಾಡೋಲಿನಿಯಂ, ಲುಟೇಟಿಯಂ ಇತ್ಯಾದಿ 17 ಮೂಲವಸ್ತುಗಳನ್ನು ರೇರ್ ಅರ್ಥ್ ಮಿನರಲ್ ಎಂದು ವರ್ಗೀಕರಿಸಲಾಗಿದೆ. ಇವು ಬಹಳ ವ್ಯಾಪಕವಾಗಿ ಲಭ್ಯ ಇರುತ್ತವೆ. ಆದರೆ, ಸ್ವತಂತ್ರವಾಗಿ ಇವು ಇರುವುದಿಲ್ಲ. ಬೇರೆ ವಸ್ತುಗಳೊಂದಿಗೆ ಬೆರೆತು ಹೋಗಿರುತ್ತವೆ. ಇವುಗಳನ್ನು ಬೇರ್ಪಡಿಸುವ ಕಾರ್ಯ ಬಹಳ ಸಂಕೀರ್ಣವಾದುದು.
ಈ ವಿರಳ ಭೂ ಖನಿಜಗಳನ್ನು ಶಕ್ತಿಶಾಲಿ ಮ್ಯಾಗ್ನೆಟ್ ತಯಾರಿಸಲು ಬಳಸಲಾಗುತ್ತದೆ. ಬಹಳ ಪುಟ್ಟ ಗಾತ್ರದ ಆದರೆ, ಅಗಾಧ ಶಕ್ತಿಯ ಮ್ಯಾಗ್ನೆಟ್ ತಯಾರಿಸಲು ಸಾಧ್ಯ. ಲೇಸರ್, ಮೋಟಾರು ಇತ್ಯಾದಿ ಬಹುತೇಕ ಎಲ್ಲಾ ತಂತ್ರಜ್ಞಾನ ಅಪ್ಲಿಕೇಶನ್ಗಳಿಗೆ ಈ ಮ್ಯಾಗ್ನೆಟ್ಗಳು ಅತ್ಯಗತ್ಯ ಎನಿಸುತ್ತವೆ. ಹೀಗಾಗಿ, ವಿರಳ ಭೂ ಖನಿಜಗಳಿಗೆ ಜಾಗತಿಕವಾಗಿ ವಿಪರೀತ ಬೇಡಿಕೆ ಇದೆ.
ಇದನ್ನೂ ಓದಿ: ಅಪರೂಪದ ಮ್ಯಾಗ್ನೆಟ್ ಉತ್ಪಾದನೆ ಉತ್ತೇಜಿಸಲು 7,280 ಕೋಟಿ ರೂ. ಯೋಜನೆಗೆ ಸಂಪುಟ ಅನುಮೋದನೆ
ಅತಿಹೆಚ್ಚು ವಿರಳ ಭೂ ಖನಿಜ ಇರುವ ದೇಶಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನ ಪಡೆಯುತ್ತದೆ. ಆದರೆ, ಈ ಖನಿಜ ಉತ್ಪಾದನೆಯಲ್ಲಿ ಭಾರತದ ಕೊಡುಗೆ ಶೇ. 1 ಮಾತ್ರವೇ ಇರುವುದು. ಈಗ ಇವುಗಳನ್ನು ಭಾರತದಲ್ಲೇ ಹೆಚ್ಚೆಚ್ಚು ಉತ್ಪಾದಿಸಲು ಸರ್ಕಾರ ಉತ್ತೇಜನ ಕೊಡಲು ನಿರ್ಧರಿಸಿದೆ. ಭಾರತಕ್ಕೆ ಅಗತ್ಯ ಇರುವ ರೇರ್ ಅರ್ಥ್ ಮ್ಯಾಗ್ನೆಟ್ಗಳ ಸರಬರಾಜು ಸರಪಳಿ ಭಾರತದೊಳಗೇ ಇರಲಿ ಎಂಬುದು ಸರ್ಕಾರದ ಗುರಿ.
ಕೇರಳ, ಒಡಿಶಾ, ಆಂಧ್ರ ಮೊದಲಾದ ರಾಜ್ಯಗಳಲ್ಲಿ ಸಾಕಷ್ಟು ಪ್ರಮಾಣದ ವಿರಳ ಭೂ ಖನಿಜಗಳು ಇವೆ. ರಾಜಸ್ಥಾನ್, ಬಿಹಾರ್, ಜಾರ್ಖಂಡ್ ಮೊದಲಾದ ಕೆಲ ರಾಜ್ಯಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಈ ಖನಿಜಗಳಿವೆ. ಇವುಗಳನ್ನು ಬಳಸಿಕೊಳ್ಳುವುದರಿಂದ ಚೀನಾ ಮೇಲಿನ ಅವಲಂಬನೆಯನ್ನು ಭಾರತ ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ