ಬೆಂಗಳೂರು, ಅಕ್ಟೋಬರ್ 10: ನಿನ್ನೆ ಸಂಜೆ ವಿಧಿವಶರಾದ ಟಾಟಾ ಗ್ರೂಪ್ ಮಾಜಿ ಛೇರ್ಮನ್ ರತನ್ ಟಾಟಾ ಕರ್ನಾಟಕದ ಬಗ್ಗೆ, ಅದರಲ್ಲೂ ಬೆಂಗಳೂರಿನ ಬಗ್ಗೆ ಅಪಾರ ಒಲವು ಹೊಂದಿದ್ದರು. ಬಾಂಬೆಯಲ್ಲಿ (ಇಂದಿನ ಮುಂಬೈ) ಹುಟ್ಟಿದ್ದ 87 ವರ್ಷದ ರತನ್ಜಿಗೆ ಬೆಂಗಳೂರಿನ ಸಂಬಂಧ ವ್ಯಾವಹಾರಿಕವೂ ಆಗಿತ್ತು, ಭಾವನಾತ್ಮಕವೂ ಆಗಿತ್ತು. ಫಿಲಾಂತ್ರೋಫಿ (ಸಮಾಜ ಸೇವೆ) ಕೆಲಸಗಳಿಂದ ಹಿಡಿದು ವಿವಿಧ ಉದ್ದಿಮೆಗಳವರೆಗೆ ರಾಜ್ಯದಲ್ಲಿ ಅವರ ಹೆಜ್ಜೆ ಗುರುತುಗಳಿವೆ.
ರತನ್ ಟಾಟಾ ಅವರಿಗೆ ಬೆಂಗಳೂರಿನಲ್ಲಿ ನಡೆಯುವ ಏರೋಶೋಗಳೆಂದರೆ ಬಹಳ ಪ್ರಿಯ. ಯಲಹಂಕದ ವಾಯು ನೆಲೆಯಲ್ಲಿ ನಡೆಯುವ ಈ ಏರೋ ಶೋನಲ್ಲಿ ಅವರು ಫೈಟರ್ ಜೆಟ್ಗಳನ್ನು ಏರಿ ಹೋಗುತ್ತಿದ್ದರು. ಇಳಿವಯಸ್ಸಿನಲ್ಲೂ ಅವರು ಸಮರ ಸೇನಾನಿಯಂತೆ ಭಾಸವಾಗುತ್ತಿತ್ತು. ಫೈಟರ್ ಜೆಟ್ನಲ್ಲಿ ಕೂತು ಅದನ್ನು ಚಲಾಯಿಸುವುದಕ್ಕೆ ಚಾಲಾಕಿತನದ ಜೊತೆಗೆ ಗಂಡೆದೆಯೂ ಬೇಕು. ರತನ್ ಟಾಟಾ ಇಂಥ ರೈಡ್ಗಳನ್ನು ಬಹಳ ಇಷ್ಟಪಡುತ್ತಿದ್ದರು.
ಇಂಥದ್ದೇ ಒಂದು ಶೋನಲ್ಲಿ ಅವರು ಎಫ್18 ಸೂಪರ್ ಹಾರ್ನೆಟ್ ಫೈಟರ್ ಜೆಟ್ ಅನ್ನು ಚಲಾಯಿಸಿದ್ದರು. ಅದು 2011ರಲ್ಲಿ ಆದ ಘಟನೆ. 2020ರಲ್ಲಿ ಅವರು ಈ ಸಂದರ್ಭವನ್ನು ಮೆಲುಕು ಹಾಕುತ್ತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಒಂಬತ್ತು ವರ್ಷದ ಹಿಂದಿನ ಆ ಘಟನೆ ಈ ದಶಕದ ತನ್ನ ಅವಿಸ್ಮರಣೀಯ ಸಂದರ್ಭ ಎಂದು ಹೇಳಿದ್ದರು.
ಇದನ್ನೂ ಓದಿ: Tata Family Tree: ನುಸ್ಸರ್ವಾಂಜಿಯಿಂದ ರತನ್ ಟಾಟಾವರೆಗೆ ಪ್ರತಿಷ್ಠಿತ ಟಾಟಾ ಕುಟುಂಬದ ವಂಶವೃಕ್ಷ ಇಲ್ಲಿದೆ
ರತನ್ ಟಾಟಾ ಭಾರತ ಕಂಡ ಅತ್ಯಂತ ಯಶಸ್ವಿ ಉದ್ಯಮಿಯಷ್ಟೇ ಅಲ್ಲ, ಶ್ರೇಷ್ಠ ದಾನಿ, ಸಮಾಜಸೇವಕರೂ ಹೌದು. ಟಾಟಾ ಟ್ರಸ್ಟ್ಸ್ ಮೂಲಕ ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲಿ 10 ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿದ್ದರು. ಈ ಆಸ್ಪತ್ರೆಗಳಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಉತ್ಕೃಷ್ಟವಾದ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತಿದೆ.
ಪಾರ್ಸಿ ಜನಾಂಗಕ್ಕೆ ಸೇರಿದರೂ ಅವರು ಯಾವತ್ತೂ ತಮ್ಮ ಸಮುದಾಯಕ್ಕೆ ಸೀಮಿತರಾದವರಲ್ಲ. ಸಾಕಷ್ಟು ಆದಾಯವನ್ನು ಅವರು ಫಿಲಾಂತ್ರೋಪಿ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದರು.
ಭಾರತದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರಿನಲ್ಲಿದೆ. ಇದನ್ನು ಸ್ಥಾಪಿಸಿದ್ದು ಜಮ್ಶೆಡ್ಜಿ ಟಾಟಾ. ಮೂಲತಃ ಇದು ಟಾಟಾ ಇನ್ಸ್ಟ್ಯೂಟ್. ಈಗ ಐಐಎಸ್ಸಿ ಎಂದು ಬದಲಾದರೂ ಟಾಟಾ ಇನ್ಸ್ಟಿಟ್ಯೂಟ್ ಗುರುತು ಈಗಲೂ ಇದೆ. ಟಾಟಾ ಗ್ರೂಪ್ನಿಂದ ಈ ಸಂಸ್ಥೆಗೆ ಈಗಲೂ ಫಂಡಿಂಗ್ ಸಿಗುತ್ತದೆ.
ಬೆಂಗಳೂರಿನ ಏರ್ಪೋರ್ಟ್ನಲ್ಲಿ ಟಾಟಾ ಗ್ರೂಪ್ನಿಂದ ಹಲವು ಯೋಜನೆಗಳು ಚಾಲನೆಯಲ್ಲಿವೆ. ಏರ್ ಇಂಡಿಯಾ ಸಂಸ್ಥೆಯ ಎಂಆರ್ಒ ಘಟಕವು ಏರ್ಪೋರ್ಟ್ನಲ್ಲಿ ಸ್ಥಾಪನೆ ಆಗುತ್ತಿದೆ.
ಇದನ್ನೂ ಓದಿ: Ratan Tata: ಸಾಕು ನಾಯಿಗೋಸ್ಕರ ಬ್ರಿಟನ್ ರಾಜಮನೆತನದ ಪ್ರತಿಷ್ಠಿತ ಪ್ರಶಸ್ತಿ ತಿರಸ್ಕರಿಸಿದ್ದ ರತನ್ ಟಾಟಾ
ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಸಂಸ್ಥೆಗಳು ಏರ್ಪೋರ್ಟ್ನಲ್ಲಿ ವಿವಿಧ ಯೋಜನೆಗಳಿಗೆ ಇತ್ತೀಚೆಗೆ ಎಂಒಯು ಮಾಡಿಕೊಂಡಿವೆ. ಅದರಲ್ಲಿ ಎಂಆರ್ಒ ಘಟಕ ಸ್ಥಾಪನೆಯೂ ಸೇರಿದೆ. ಏರ್ಕ್ರಾಫ್ಟ್ ಕನ್ವರ್ಷನ್, ಗನ್ ತಯಾರಿಕೆ, ಏರೋಸ್ಪೇಸ್ ಮತ್ತು ಡಿಫೆನ್ಸ್ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ ಸ್ಥಾಪನೆ ಇತ್ಯಾದಿ ಹಲವು ಯೋಜನೆಗಳು ಒಳಗೊಂಡಿವೆ.
ಟಾಟಾ ಗ್ರೂಪ್ ಸಂಸ್ಥೆಗಳು ಯಾವುದೇ ಒಂದು ರಾಜ್ಯ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ. ದೇಶದ ಹಲವೆಡೆ ಅದರ ಉದ್ದಿಮೆಗಳು ಹರಡಿವೆ. ಆದರೂ ಕೂಡ ರತನ್ ಟಾಟಾ ಅವರಿಗೆ ಹೂಡಿಕೆ ವಿಚಾರದಲ್ಲಿ ಕರ್ನಾಟಕದ ಬಗ್ಗೆ ಒಲವು ಇತ್ತು. ಹಿಂದೊಮ್ಮೆ ರಾಜ್ಯದಲ್ಲಿ ನಡೆದ ಗ್ಲೋಬಲ್ ಇನ್ವೆಸ್ಟರ್ಸ್ ಸಮಾವೇಶದಲ್ಲಿ ಮಾತನಾಡುತ್ತಾ, ಹೂಡಿಕೆಗೆ ಕರ್ನಾಟಕ ಪ್ರಶಸ್ತ ಸ್ಥಳ ಎಂದಿದ್ದರು. ಕರ್ನಾಟಕದಲ್ಲಿ ಉನ್ನತ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಲಭ್ಯತೆ ಇದೆ ಎಂಬುದು ಅವರು ನೀಡುತ್ತಿದ್ದ ಒಂದು ಕಾರಣ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:27 am, Thu, 10 October 24