ದೇಶದ ಕಾರು ಮಾರುಕಟ್ಟೆಯಲ್ಲಿ ದಶಕಗಳ ಕಾಲ ಪ್ರಸಿದ್ಧಿಪಡೆದಿದ್ದ ಟಾಟಾ ಇಂಡಿಕಾ ಕಾರು (Tata Indica car) ಮಾರುಕಟ್ಟೆ ಪ್ರವೇಶಿಸಿ 25 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಉದ್ಯಮಿ, ಟಾಟಾ ಸಮೂಹದ (Tata Group) ಮಾಜಿ ಅಧ್ಯಕ್ಷ ರತನ್ ಟಾಟಾ (Ratan Tata) 25 ವರ್ಷಗಳ ಹಿಂದಿನ ದಿನವನ್ನು ನೆನಪಿಸಿಕೊಂಡು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಸಂದೇಶ ಪ್ರಕಟಿಸಿದ್ದಾರೆ. 1998ರಲ್ಲಿ ಬಿಡುಗಡೆಯಾಗಿದ್ದ ಟಾಟಾ ಇಂಡಿಯಾ ಕಾರು ಮೊದಲ ದೇಶೀಯ ಪ್ರಯಾಣಿಕ ಕಾರು ಆಗಿತ್ತಲ್ಲದೆ, ಟಾಟಾ ಮೋಟರ್ಸ್ ಬಿಡುಗಡೆ ಮಾಡಿದ ಮೊದಲ ಕಾರೂ ಆಗಿತ್ತು. ಡೀಸೆಲ್ ಎಂಜಿನ್ ಹೊಂದಿರುವ ಇಂಡಿಕಾ ಕಾರು ಆಗ ಮಾರುಕಟ್ಟೆ ಪ್ರವೇಶಿಸಿತ್ತು.
‘25 ವರ್ಷಗಳ ಹಿಂದೆ ಟಾಟಾ ಇಂಡಿಕಾ ಅನಾವರಣಗೊಳಿಸಲಾಯಿತು. ಅದರೊಂದಿಗೆ ದೇಶೀಯ ಪ್ರಯಾಣಿಕ ಕಾರು ತಯಾರಿಕಾ ಉದ್ಯಮ ಜನ್ಮತಾಳಿತು. ಇದು ನನ್ನ ಅಚ್ಚುಮೆಚ್ಚಿನ ನೆನಪುಗಳನ್ನು ಮೆಲುಕುಹಾಕುವಂತೆ ಮಾಡಿದೆ ಮತ್ತು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ’ ಎಂದು ರತನ್ ಟಾಟಾ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ಇದರ ಜತೆಗೆ ಇಂಡಿಕಾ ಕಾರಿನೊಂದಿಗೆ ನಿಂತುಕೊಂಡಿರುವ ಫೋಟೊವನ್ನೂ ಅವರು ಹಂಚಿಕೊಂಡಿದ್ದಾರೆ.
ರತನ್ ಟಾಟಾ ಅವರ ಸಂದೇಶವನ್ನು ಮಂಗಳವಾರ ಬೆಳಗ್ಗಿನ ವೇಳೆಗೆ (ಜನವರಿ 17) 35 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಅನೇಕರು ಟಾಟಾ ಇಂಡಿಕಾ ಜತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಬಿಡುಗಡೆಯಾದ ಮೊದಲ ಎರಡು ವರ್ಷಗಳಲ್ಲೇ ಟಾಟಾ ಇಂಡಿಕಾ ಕಾರು ದೇಶದ ಕಾರು ಮಾರುಕಟ್ಟೆಯಲ್ಲಿ ಗಮನಾರ್ಹ ಸಾಧನೆ ಮಾಡಿತ್ತು. ಇದು ಟಾಟಾ ಸಮೂಹದ ನಂತರದ ಬ್ರ್ಯಾಂಡ್ಗಳಿಗೆ ಉತ್ತಮ ತಳಪಾಯವನ್ನೂ ಹಾಕಿಕೊಟ್ಟಿತು. ನಂತರ ಎರಡು ದಶಕಗಳ ಕಾಲ ದೇಶದ ಕಾರು ಮಾರುಕಟ್ಟೆಯಲ್ಲಿ, ಪ್ರಯಾಣಿಕರ ಮನದಲ್ಲಿ ಅಚ್ಚಳಿಯದೇ ಉಳಿದ ಟಾಟಾ ಇಂಡಿಕಾ ಕಾರು ತಯಾರಿಯನ್ನು 2018ರ ಏಪ್ರಿಲ್ನಲ್ಲಿ ಸ್ಥಗಿತಗೊಳಿಸಲಾಗಿತ್ತು.
Published On - 10:42 am, Tue, 17 January 23