Pallonji Mistry: ಶತಕೋಟ್ಯಧಿಪತಿ ಉದ್ಯಮಿ, ಟಾಟಾ ಸಮೂಹದ ಪ್ರಮುಖ ಷೇರುದಾರರು ಪಲ್ಲೋಂಜಿ ಮಿಸ್ತ್ರಿ 93ನೇ ವಯಸ್ಸಿನಲ್ಲಿ ನಿಧನ

ದಕ್ಷಿಣ ಮುಂಬೈನ ತಮ್ಮ ನಿವಾಸದಲ್ಲಿ ಶಾಪೂರ್​ಜೀ ಪಲ್ಲೋಂಜಿ ಸಮೂಹದ ಪಲ್ಲೋಂಜಿ ಮಿಸ್ತ್ರಿ ಅವರು ತಮ್ಮ 93ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

Pallonji Mistry: ಶತಕೋಟ್ಯಧಿಪತಿ ಉದ್ಯಮಿ, ಟಾಟಾ ಸಮೂಹದ ಪ್ರಮುಖ ಷೇರುದಾರರು ಪಲ್ಲೋಂಜಿ ಮಿಸ್ತ್ರಿ 93ನೇ ವಯಸ್ಸಿನಲ್ಲಿ ನಿಧನ
ಪಲ್ಲೋಂಜಿ ಮಿಸ್ತ್ರಿ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on:Jun 28, 2022 | 11:01 AM

ಶಾಪೂರ್​ಜೀ ಪಲ್ಲೋಂಜಿ (Shapoorji Pallonji) ಸಮೂಹದ ಅಧ್ಯಕ್ಷ ಮತ್ತು ಶತಕೋಟ್ಯಧಿಪತಿ ಉದ್ಯಮಿ ಪಲ್ಲೋಂಜಿ ಮಿಸ್ತ್ರಿ ಅವರು ಮುಂಬೈನಲ್ಲಿ ನಿಧನರಾಗಿದ್ದಾರೆ ಎಂದು ಕಂಪೆನಿಯ ಅಧಿಕಾರಿಗಳು ಹೇಳಿದ್ದಾರೆ. ದಕ್ಷಿಣ ಮುಂಬೈನ ಅವರ ನಿವಾಸದಲ್ಲಿ ಸೋಮವಾರ ಮಧ್ಯರಾತ್ರಿ ಮತ್ತು ಮಂಗಳವಾರದ ಮಧ್ಯೆ ನಿದ್ದೆಯಲ್ಲೇ ಮೃತಪಟ್ಟಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಬ್ಲೂಮ್​ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ ಮಿಸ್ತ್ರಿ ಅವರ ಆಸ್ತಿ ಮೌಲ್ಯ 2900 ಕೋಟಿ ಅಮೆರಿಕದನ್ ಡಾಲರ್ ಇದೆ. ಇದರೊಂದಿಗೆ ಭಾರತದ ಅತಿ ಶ್ರೀಮಂತರ ಪಟ್ಟಿಯಲ್ಲಿ ಅವರೂ ಒಬ್ಬರಾಗಿದ್ದರು. ಅಂದಹಾಗೆ ಈ ಕುಟುಂಬದ ಬಹುತೇಕ ಆಸ್ತಿ ಏನೆಂದರೆ ಟಾಟಾ ಸನ್ಸ್​ನಲ್ಲಿನ ಅತಿ ದೊಡ್ಡ ಪ್ರಮಾಣದ ಷೇರುಗಳು. ಹಾಗಂತ ಶಾಪೂರ್​ಜೀ ಪಲ್ಲೋಂಜೀ ಏನೂ ಕಡಿಮೆ ಸಮೂಹವಲ್ಲ.

ಎಂಜಿನಿಯರಿಂಗ್ ಮತ್ತು ನಿರ್ಮಾಣ, ಮೂಲಸೌಕರ್ಯ, ರಿಯಲ್ ಎಸ್ಟೇಟ್, ನೀರು, ಇಂಧನ ಮತ್ತು ಹಣಕಾಸು ಸೇವೆಗಳು ಹೀಗೆ ವಿವಿಧ ವಲಯಗಳಲ್ಲಿ ಇದೆ. ಈ ಸಮೂಹದಲ್ಲಿ 50 ಸಾವಿರದಷ್ಟು ಮಂದಿ ಕೆಲಸ ಮಾಡುತ್ತಾರೆ. ಈ ಸಮೂಹವು ಸುಮಾರು 50 ದೇಶಗಳಲ್ಲಿ ಎಲ್ಲ ಬಗೆಯ ಸಲ್ಯೂಷನ್​ಗಳನ್ನು ಒದಗಿಸುತ್ತದೆ ಎಂಬುದು ವೆಬ್​ಸೈಟ್​ನಲ್ಲಿನ ಮಾಹಿತಿಯಿಂದ ತಿಳಿದುಬರುತ್ತದೆ.

ಪಲ್ಲೋಂಜಿ ಕುಟುಂಬವು ಟಾಟಾ ಸನ್ಸ್​ನಲ್ಲಿ ಶೇ 18.4ರಷ್ಟು ಪಾಲನ್ನು ಹೊಂದಿದೆ. ಈ ಟಾಟಾ ಸನ್ಸ್​ ಎಂಬುದು ಟಾಟಾ ಸಮೂಹದ ಹೋಲ್ಡಿಂಗ್ ಕಂಪೆನಿ. 1865ನೇ ಇಸವಿಯಲ್ಲಿ ಆರಂಭವಾದ ಶಾಪೂರ್​ಜೀ ಪಲ್ಲೋಂಜಿ ಸಮೂಹವು ಮುಂಬೈನಲ್ಲಿ ಬಹಳ ಮುಖ್ಯವೆನಿಸಿದ ಕಟ್ಟಡಗಳನ್ನು ನಿರ್ಮಾಣ ಮಾಡಿದೆ. ಅದರಲ್ಲಿ ಭಾರತೀಯ ರಿಸರ್ವ್​ ಬ್ಯಾಂಕ್, ದ ತಾಜ್​ಮಹಲ್ ಪ್ಯಾಲೇಸ್ ಹೋಟೆಲ್ ಸಹ ಸೇರಿಕೊಂಡಿವೆ.

ಪಲ್ಲೋಂಜಿ ಮಿಸ್ತ್ರಿ ನೇತೃತ್ವದಲ್ಲಿ ಸಮೂಹವ ಮಧ್ಯಪ್ರಾಚ್ಯಕ್ಕೂ ವ್ಯಾಪಿಸಿತು. 1970ರಲ್ಲಿ ಅಬು ಧಾಬಿ, ಕತಾರ್ ಮತ್ತು ದುಬೈಗೆ ರೆಕ್ಕೆ ಚಾಚಿತು. 1971ರಲ್ಲಿ ಒಮನ್​ನ ಸುಲ್ತಾನ್​ರ ಅರಮನೆ ನಿರ್ಮಾಣದ ಕಾಂಟ್ರ್ಯಾಕ್ಟ್​ ಪಡೆಯಿತು. ಅಷ್ಟೇ ಅಲ್ಲ, ಇನ್ನೂ ಹಲವು ಸಚಿವಾಲಯ ಕಟ್ಟಡಗಳ ನಿರ್ಮಾಣ ಮಾಡಿತು. ಪಲ್ಲೋಂಜಿ ಅವರ ನೇತೃತ್ವದಲ್ಲೇ ಕಂಪೆನಿಯು ದೊಡ್ಡ ಸಮೂಹವಾಗಿ ಬೆಳೆಯಿತು. ಅಷ್ಟೇ ಅಲ್ಲ, ರಿಯಲ್ ಎಸ್ಟೇಟ್, ನೀರು, ಇಂಧನ ಮತ್ತು ಹಣಕಾಸು ಸೇವೆಗೆ ಸಹ ವಿಸ್ತರಣೆ ಆಯಿತು.

ಯಾವಾಗ ಹಿರಿಮಗ ಶಾಪೂರ್​ ಅವರು 2004ರಲ್ಲಿ ಎಸ್​ಪಿ ಸಮೂಹ ಕಂಪೆನಿಗಳ ಮುಂದಾಳತ್ವ ವಹಿಸಿಕೊಂಡರೋ ಆಗ ಮಿಸ್ತ್ರಿ ಸ್ವಲ್ಪ ಮಟ್ಟಿಗೆ ಹಿಂದೆ ಸರಿದರು. ಕಳೆದ ವರ್ಷ ಶಾಪೂರ್​ಜೀ ಪಲ್ಲೋಂಜಿ ಸಮೂಹವು ಗ್ರಾಹಕ ಬಳಕೆ ಉದ್ಯಮವನ್ನು ಮಾರಾಟ ಮಾಡಿತು. ಯುರೇಕಾ ಫೋರ್ಬ್ಸ್​ ಲೇಬಲ್​ನ ಉದ್ಯಮವನ್ನು ಅಮೆರಿಕನ್ ಖಾಸಗಿ ಈಕ್ವಿಟಿ ಫಂಡ್ ಅಡ್ವೆಂಟ್ ಇಂಟರ್​ನ್ಯಾಷನಲ್​ಗೆ ಮಾರಲಾಯಿತು. ಯುರೇಕಾ ಫೋರ್ಬ್ಸ್ ಬ್ರ್ಯಾಂಡ್ ಆಕ್ವಾಗಾರ್ಡ್ ಮತ್ತು ಫೋರ್ಬ್ಸ್​ನಂಥದ್ದರ ಜತೆ ಕಾರ್ಯ ನಿರ್ವಹಿಸುತ್ತದೆ.

ಪಲ್ಲೋಂಜೀ ಮಿಸ್ತ್ರಿ ಅವರ ಕುಟುಂಬದ ಬಗ್ಗೆ ಹೆಚ್ಚು ಚರ್ಚೆ ಶುರುವಾದದ್ದು 2012ರಲ್ಲಿ. ಯಾವಾಗ ಅವರ ಕಿರಿಯ ಮಗ ಸೈರಸ್ ಮಿಸ್ತ್ರಿ ಟಾಟಾ ಸಮೂಹವನ್ನು ಮುನ್ನಡೆಸಲು ಆಯ್ಕೆಗೊಂಡರೋ ಆಗ. ರತನ್ ಟಾಟಾ ಅವರು ನಿವೃತ್ತಿ ಘೋಷಣೆ ಮಾಡಿದ ಮೇಲೆ ಸೈರಸ್​ ಮಿಸ್ತ್ರಿ 2012ರಲ್ಲಿ ಅಧ್ಯಕ್ಷರಾದರು. ಆದರೆ 2016ರ ಅಕ್ಟೋಬರ್​ನಲ್ಲಿ ಸೈರಸ್​ ಮಿಸ್ತ್ರಿ ಅವರನ್ನು ಹುದ್ದೆಯಿಂದ ಪದಚ್ಯುತಿಗೊಳಿಸಲಾಯಿತು. ಇದು ಭಾರತದ ಕಾರ್ಪೊರೇಟ್ ಇತಿಹಾಸದಲ್ಲೇ ಕೆಟ್ಟ ಬೆಳವಣಿಗೆ ಎನಿಸಿಕೊಂಡಿತು.

ಆ ನಂತರ ಅದು ಕೋರ್ಟ್​ ಮೆಟ್ಟಿಲು ಸಹ ಏರಿತು. ಕಳೆದ ವರ್ಷ ಟಾಟಾ ಸನ್ಸ್​ ಪ್ರೈವೇಟ್ ಲಿಮಿಟೆಡ್ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ಬಂತು. ದೇಶದ ಅತಿ ದೊಡ್ಡ ಸಮೂಹದಲ್ಲಿ ಶೇ 18ರಷ್ಟು ಪಾಲನ್ನು ಹೊಂದಿರುವ ಮಿಸ್ತ್ರಿ ಕುಟುಂಬಕ್ಕೆ ಕೋರ್ಟ್​ನ ಈ ತೀರ್ಪು ದೊಡ್ಡ ಹಿನ್ನಡೆ ಆಯಿತು. 2016ರಲ್ಲಿ ಸೈರಸ್ ಪಿ. ಮಿಸ್ತ್ರಿ ಅವರನ್ನು ಟಾಟಾ ಅಧ್ಯಕ್ಷ ಹುದ್ದೆಯಿಂದ ಪದಚ್ಯುತಗೊಳಿಸಿದ್ದು ಕಾನೂನು ಬದ್ಧವಾಗಿಯೇ ಇದೆ ಎಂದು ಕೋರ್ಟ್ ಹೇಳಿತು.

ಈ ವರ್ಷದ ಮೇ ತಿಂಗಳಲ್ಲಿ ಟಾಟಾ ವರ್ಸಸ್ ಮಿಸ್ತ್ರಿ ಕಾನೂನು ಪ್ರಕರಣದ ಪುನರ್​ ಪರಿಶೀಲನೆ ಅರ್ಜಿ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಸದ್ಯಕ್ಕೆ ಟಾಟಾ ಸನ್ಸ್​ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಎನ್​. ಚಂದ್ರಶೇಖರನ್ ಇದ್ದಾರೆ.

ಪಲ್ಲೋಂಜಿ ಮಿಸ್ತ್ರಿ ಅವರಿಗೆ ಇಬ್ಬರು ಗಂಡು ಮಕ್ಕಳ ಜತೆಗೆ ಇಬ್ಬರು ಹೆಣ್ಣು ಮಕ್ಕಳು ಸಹ ಇದ್ದಾರೆ. ಲೈಲಾ ಹಾಗೂ ಅಲೂ ಎಂಬುದು ಅವರ ಹೆಸರು.

ಇದನ್ನೂ ಓದಿ: Top 10 Richest Indians: ಫೋರ್ಬ್ಸ್​ ಇಂಡಿಯಾ ಭಾರತದ ಅತಿ ಶ್ರೀಮಂತರ ಟಾಪ್​ 10 ಪಟ್ಟಿ ಇಲ್ಲಿದೆ; ಯಾರಿಗೆ ಯಾವ ಸ್ಥಾನ?

Published On - 11:01 am, Tue, 28 June 22