ನವದೆಹಲಿ, ಆಗಸ್ಟ್ 10: ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ಯತ್ನದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ (Repo Rate) ಏರಿಕೆ ಮಾಡದೇ ಸಿಆರ್ಆರ್ ದರದಲ್ಲಿ ವ್ಯತ್ಯಯ ತಂದಿದೆ. ಇಂಕ್ರಿಮೆಂಟಲ್ ಅಥವಾ ಹೆಚ್ಚುವರಿ ಕ್ಯಾಷ್ ರಿಸರ್ವ್ ರೇಷಿಯೋವನ್ನು (Additional Cash Reserve Ratio) ಶೇ 10ಕ್ಕೆ ಹೆಚ್ಚಿಸಿದೆ. ಆಗಸ್ಟ್ 12ರಿಂದ ಬ್ಯಾಂಕುಗಳು ಹೆಚ್ಚುವರಿ ಸಿಆರ್ಆರ್ ಅನ್ನು ಶೇ. 10ರಷ್ಟು ಇಡಬೇಕು ಎಂದು ತಿಳಿಸಲಾಗಿದೆ. ಬ್ಯಾಂಕುಗಳ ಒಟ್ಟಾರೆ ಠೇವಣಿಗಳಲ್ಲಿ (NDTL- Net Demand and Time Liabilities) ಗಮನಾರ್ಹ ಹೆಚ್ಚಳ ಕಂಡ ಹಿನ್ನೆಲೆಯಲ್ಲಿ ಆರ್ಬಿಐ ಹೆಚ್ಚುವರಿ ಸಿಆರ್ಆರ್ ಅನ್ನು ಹೆಚ್ಚಿಸಲು ನಿರ್ಧರಿಸಿದೆ. ಆದರೆ, ಸಿಆರ್ಆರ್ ಅಥವಾ ಕ್ಯಾಷ್ ರಿಸರ್ವ್ ರೇಷಿಯೋ ಶೇ. 4.5ರ ದರದಲ್ಲೇ ಮುಂದುವರಿಯಲಿದೆ. ಹೆಚ್ಚುವರಿ ಸಿಆರ್ಆರ್ ಅನ್ನು ತಾತ್ಕಾಲಿಕವಾಗಿ ನಿಗದಿ ಮಾಡಲಾಗಿದೆ. ಹಣದುಬ್ಬರಕ್ಕೆ ಕಡಿವಾಣ ಹಾಕುವ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕ್ಯಾಷ್ ರಿಸರ್ವ್ ರೇಷಿಯೋ ಎಂಬುದು ಬ್ಯಾಂಕುಗಳು ಹೊಂದಿರುವ ಹಣದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ನಗದು ಹಣ ಇಟ್ಟಿರಬೇಕು. ಈಗ ಸಿಆರ್ಆರ್ ಶೇ. 4.5ರಷ್ಟಿದೆ ಎಂದರೆ ಒಂದು ಬ್ಯಾಂಕ್ ಬಳಿ 1 ಲಕ್ಷಕೋಟಿ ರೂನಷ್ಟು ಗ್ರಾಹಕರ ಠೇವಣಿ ಮೊತ್ತ ಬಂದಿದ್ದರೆ ಕ್ಯಾಷ್ ರೂಪದಲ್ಲಿ ಶೇ. 4.5ರಷ್ಟನ್ನು ಹಣ ಇಟ್ಟಿರಬೇಕು. ಅಂದರೆ 1 ಲಕ್ಷ ಕೋಟಿ ರೂನಲ್ಲಿ 4,500 ಕೋಟಿ ರೂನಷ್ಟು ಹಣವು ಕ್ಯಾಷ್ ರೂಪದಲ್ಲಿ ಇರಬೇಕು.
ಇದನ್ನೂ ಓದಿ: ರೆಪೋ ದರದಲ್ಲಿ ಬದಲಾವಣೆ ಇಲ್ಲ; ಯಥಾಸ್ಥಿತಿ ಮುಂದುವರಿಸಲು ಆರ್ಬಿಐ ನಿರ್ಧಾರ
ಗ್ರಾಹಕರಿಂದ ಠೇವಣಿಯಾಗಿ ಬರುವ ಹಣವನ್ನು ಬ್ಯಾಂಕುಗಳು ಸಾಲ ನೀಡಿ ಅದರಿಂದ ಲಾಭ ಮಾಡುತ್ತವೆ. ಅದೇ ಬ್ಯಾಂಕುಗಳಿಗೆ ಪ್ರಮುಖ ಆದಾಯಮೂಲ. ಆದರೆ, ಸಿಆರ್ಆರ್ನಲ್ಲಿರುವ ನಗದು ಹಣದಿಂದ ಬ್ಯಾಂಕುಗಳಿಗೆ ಏನೂ ಲಾಭ ಇರುವುದಿಲ್ಲ. ಇದು ಒಂದು ರೀತಿಯಲ್ಲಿ ನಮ್ಮ ಮನೆಗಳಲ್ಲಿ ಕ್ಯಾಷ್ ಇಟ್ಟುಕೊಂಡಂತೆ.
ಆಗಲೇ ತಿಳಿಸಿದಂತೆ, ಗ್ರಾಹಕರಿಂದ ಬರುವ ಠೇವಣಿಗಳನ್ನು ಬ್ಯಾಂಕುಗಳು ಸಾಲವಾಗಿ ಕೊಟ್ಟು ಆದಾಯ ಮಾಡಿಕೊಳ್ಳುತ್ತವೆ. ಇದರಿಂದ ಆರ್ಥಿಕತೆಗೆ ಹೆಚ್ಚು ಹಣದ ಓಡಾಟವಾಗುತ್ತದೆ. ಹಣದ ಹರಿವು ಹೆಚ್ಚಾದಾಗ ಹಣದುಬ್ಬರ ಆಗುತ್ತದೆ. ಹೆಚ್ಚಿನ ಮಟ್ಟದಲ್ಲಿ ಸಿಆರ್ಆರ್ ಇದ್ದಾಗ ಬ್ಯಾಂಕುಗಳ ಬಳಿ ಸಾಲ ಕೊಡಲು ಹೆಚ್ಚು ಹಣ ಇರುವುದಿಲ್ಲ. ಇದರಿಂದ ಆರ್ಥಿಕತೆಗೆ ಹಣದ ಹರಿವು ಕಡಿಮೆ ಆಗುತ್ತದೆ. ಅ ಮೂಲಕ ಹಣದುಬ್ಬರ ನಿಯಂತ್ರಣಕ್ಕೆ ಬರಬಹುದು ಎಂಬುದು ಆರ್ಬಿಐನ ಆಲೋಚನೆ.
ಇದನ್ನೂ ಓದಿ: ಕಡಿಮೆ ಆಗುತ್ತಾ ಬ್ಯಾಂಕ್ ಸಾಲದ ಬಡ್ಡಿದರ? ಆರ್ಬಿಐ ಎಂಪಿಸಿ ಸಭೆಯ ನಿರ್ಧಾರದಿಂದ ಸಾಲದ ಇಎಂಐ ಮೇಲೇನು ಪರಿಣಾಮ?
ರೈಟ್ ರಿಸರ್ಚ್ ಎಂಬ ಹಣಕಾಸು ಸಲಹಾ ಸಂಸ್ಥೆಯ ಸ್ಥಾಪಕ ಸೋನಮ್ ಶ್ರೀವಾಸ್ತವ ಅವರು ಶೇ. 10ರ ಹೆಚ್ಚುವರಿ ಸಿಆರ್ಆರ್ ನಿಗದಿ ಮಾಡಿದ ಆರ್ಬಿಐನ ಕ್ರಮವನ್ನು ಸ್ವಾಗತಿಸಿದ್ದಾರೆ. ಬ್ಯಾಂಕಿಂಗ್ ವಲಯದಲ್ಲಿರುವ ಹೆಚ್ಚುವರಿ ಹಣದ ಹರಿವನ್ನು ನಿಯಂತ್ರಿಸಲು ಇದು ಸರಿಯಾದ ಕ್ರಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆರ್ಬಿಐ ಎಂಪಿಸಿ ಸಭೆಯಿಂದ ಸಿಆರ್ಆರ್ ಏರಿಸುವ ನಿರ್ಧಾರ ಹೊರಬಂದ ಬಳಿಕ ಷೇರುಮಾರುಕಟ್ಟೆಯಲ್ಲಿ ತುಸು ಕುಸಿತ ಉಂಟಾಗಿದೆ. ಅದರಲ್ಲೂ ಬ್ಯಾಂಕಿಂಗ್ ಸೆಕ್ಟರ್ನ ಸೂಚ್ಯಂಕಗಳು ಕಡಿಮೆ ಆಗಿವೆ. ಹೆಚ್ಚುವರಿ ಸಿಆರ್ಆರ್ನಿಂದ ಬ್ಯಾಂಕುಗಳ ಲಾಭಕ್ಕೆ ಕೊಕ್ಕೆ ಬೀಳುವುದರಿಂದ ಹೂಡಿಕೆದಾರರನ್ನು ಅಧೈರ್ಯಗೊಳಿಸಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ