ಮುಂಬೈ, ಡಿಸೆಂಬರ್ 10: ಆರ್ಬಿಐ ಗವರ್ನರ್ ಶಕ್ತಿಕಾಂತದಾಸ್ ತಮ್ಮ ಅಧಿಕಾರಾವಧಿಯ ಕೊನೆಯ ದಿನವಾದ ಇಂದು ರಿಸರ್ವ್ ಬ್ಯಾಂಕ್ನ ಹಿಂದಿನ ಸಾಧನೆಗಳು ಹಾಗು ಮುಂದಿನ ಸವಾಲುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಕ್ತಿಕಾಂತ ದಾಸ್, ಹಣದುಬ್ಬರವನ್ನು ನಿಯಂತ್ರಿಸುವುದು ಮುಂದಿನ ಆರ್ಬಿಐ ಗವರ್ನರ್ ಬಳಿ ಇರುವ ಅತಿದೊಡ್ಡ ಸವಾಲು ಎಂದು ಅಭಿಪ್ರಾಯಪಟ್ಟಿದ್ದಾರೆ. ‘ರಿಸರ್ವ್ ಬ್ಯಾಂಕ್ ವಿಚಾರಕ್ಕೆ ಬಂದರೆ ಅತಿಮುಖ್ಯ ಕೆಲಸ ಎಂದರೆ ಹಣದುಬ್ಬರದ ಸಮತೋಲನ ಸಾಧಿಸುವುದು. ಹೊಸ ಗವರ್ನರ್ ನೇತೃತ್ವದಲ್ಲಿ ಟೀಮ್ ಆರ್ಬಿಐ ಈ ಸವಾಲನ್ನು ಯಶಸ್ವಿಯಾಗಿ ಎದುರಿಸಬಲ್ಲುದು ಎಂದು ಭಾವಿಸಿದ್ದೇನೆ’ ಎಂದು ಶಕ್ತಿಕಾಂತ ದಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆ ನಡುವೆ ಸಮತೋಲನ ಸಾಧಿಸುವುದು ಬಹಳ ಮುಖ್ಯ. ಹಣದುಬ್ಬರ ನಿಯಂತ್ರಣ ಎಷ್ಟು ಮುಖ್ಯವೋ ಆರ್ಥಿಕ ಪ್ರಗತಿಯ ಸಂಗತಿಯನ್ನೂ ಗಮನಿಸುವುದು ಮುಖ್ಯ. ಹೀಗಾಗಿ, ಪರಿಸ್ಥಿತಿಗನುಗುಣವಾಗಿ ಹಣದುಬ್ಬರ ದರದ ಗುರಿ ಇರಬೇಕು ಎಂದ ಹೃತ್ಪೂರ್ವಕ ಆರ್ಬಿಐ ಗವರ್ನರ್, ತಮ್ಮ ಅವಧಿಯಲ್ಲಿ ಈ ಸಮತೋಲನ ಸಾಧಿಸಲು ಪ್ರಯತ್ನಿಸಿದ್ದಾಗಿ ಹೇಳಿದ್ದಾರೆ.
ಇದನ್ನೂ ಓದಿ: ವಿಶ್ವಾಸಾರ್ಹತೆಯಲ್ಲಿ ಆರ್ಬಿಐ ಇನ್ನೂ ಎತ್ತರಕ್ಕೇರಲಿ: ಭಾವನಾತ್ಮಕ ಸಂದೇಶ ಬರೆದ ಶಕ್ತಿಕಾಂತದಾಸ್
ಇದನ್ನೂ ಓದಿ: ಸಂಜಯ್ ಮಲ್ಹೋತ್ರಾ ಹೊಸ ಆರ್ಬಿಐ ಗವರ್ನರ್ ಆಗಿ ನೇಮಕ; ಶಕ್ತಿಕಾಂತ ದಾಸ್ ಅವಧಿ ಡಿ. 10ಕ್ಕೆ ಅಂತ್ಯ
ಶಕ್ತಿಕಾಂತ ದಾಸ್ 2018ರ ಡಿಸೆಂಬರ್ 18ರಂದು ಆರ್ಬಿಐನ 25ನೇ ಗವರ್ನರ್ ಆಗಿ ಪದಗ್ರಹಣ ಮಾಡಿದ್ದರು. ಮೂರು ವರ್ಷಗಳಿಗೆ ಇದ್ದ ಅವರ ಅಧಿಕಾರಾವಧಿ ಒಮ್ಮೆ ವಿಸ್ತರಣೆ ಆಗಿದೆ. ಒಟ್ಟು ಆರು ವರ್ಷ ಸುದೀರ್ಘ ಕಾಲ ಆರ್ಬಿಐ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಡಿಸೆಂಬರ್ 11, ನಾಳೆ ಸಂಜಯ್ ಮಲ್ಹೋತ್ರಾ ಅವರು 26ನೇ ಆರ್ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ