ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಠೇವಣಿ ಬೆಳವಣಿಗೆ ಕುಂಠಿತಗೊಂಡಿರುವ ಬಗ್ಗೆ ಆರ್ಬಿಐ (RBI) ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಬುಧವಾರ ಬ್ಯಾಂಕ್ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ (ಸಿಇಒ) ಜತೆ ಸಭೆ ನಡೆಸಲಿದ್ದಾರೆ. ಸಾಲದ ಬೇಡಿಕೆ ಹೆಚ್ಚುತ್ತಿರುವುದು ಮತ್ತು ಠೇವಣಿ ಬೆಳವಣಿಗೆ ಗಣನೀಯವಾಗಿ ಕುಂಠಿತಗೊಂಡಿರುವ ಬಗ್ಗೆ ಅವರು ಸಿಇಒಗಳ ಜತೆ ಮಾತುಕತೆ ನಡೆಸಲಿದ್ದಾರೆ. ಆರ್ಬಿಐ ದತ್ತಾಂಶಗಳ ಪ್ರಕಾರ, ಠೇವಣಿ ಬೆಳವಣಿಗೆ ಪ್ರಮಾಣ ಈ ವರ್ಷ ಶೇಕಡಾ 9.6ರಷ್ಟಿದೆ. ಕಳೆದ ವರ್ಷ ಇದು ಶೇಕಡಾ 10.2ರಷ್ಟಿತ್ತು. ಆದರೆ ಸಾಲ ಪಡೆಯುವಿಕೆ ಪ್ರಮಾಣ ಶೇಕಡಾ 17.9ಕ್ಕೆ ಜಿಗಿದಿದೆ. ಕಳೆದ ವರ್ಷ ಇದು ಶೇಕಡಾ 6.5ರಷ್ಟಿತ್ತು.
ಸುಸ್ಥಿರತೆ, ದರ ನಿಗದಿ ಹಾಗೂ ಠೇವಣಿ ಬೆಳವಣಿಗೆ ಪ್ರಮಾಣದಲ್ಲಿ ಇಳಿಕೆ ಸಭೆಯಲ್ಲಿ ಚರ್ಚೆಗೆ ಬರಲಿರುವ ಮುಖ್ಯ ಅಂಶಗಳು ಎಂದು ಆರ್ಬಿಐ ಪ್ರಕಟಣೆ ತಿಳಿಸಿದೆ. ಚಿಲ್ಲರೆ ಮತ್ತು ಎಂಎಸ್ಎಂಇಗಳ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು) ಸ್ವತ್ತು ಗುಣಮಟ್ಟಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: eRupee: ಬಂತು ಇ-ರೂಪಾಯಿ; ಕ್ರಿಪ್ಟೋ ಕರೆನ್ಸಿ ಮೇಲೆ ತೂಗುಗತ್ತಿ
ಇದಲ್ಲದೆ, ಡಿಜಿಟಲ್ ಬ್ಯಾಂಕಿಂಗ್ ಘಟಕಗಳ ಕಾರ್ಯನಿರ್ಬಹಣೆ ಬಗ್ಗೆಯೂ ಮಾತುಕತೆ ನಡೆಯಲಿದೆ. ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿಯವರು ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಲೋಕಾರ್ಪಣೆಗೊಳಿಸಿದ್ದರು.
ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ದೇಶದಲ್ಲಿ ದೃಢವಾದ ಬೆಳವಣಿಗೆ ದಾಖಲಾಗಿತ್ತು. ಇದಕ್ಕೆ ಉತ್ತಮ ಬಂಡವಾಳದ ಬ್ಯಾಂಕಿಂಗ್ ವ್ಯವಸ್ಥೆಯಿಂದ ಸಮರ್ಥವಾಗಿ ಬೆಂಬಲ ನೀಡಿತ್ತು. ಇದು ಚಿಲ್ಲರೆ, ಉದ್ಯಮ ಮತ್ತು ಸೇವಾ ವಿಭಾಗಗಳಿಗೆ ಸಾಲ ವಿತರಣೆಯಲ್ಲಿ ಏರಿಕೆಗೆ ಕಾರಣವಾಗಿತ್ತು.
ಆಹಾರೇತರ ಸಾಲದ ಪ್ರಮಾಣ 2022ರ ಮಾರ್ಚ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದ್ವಿಗುಣಗೊಂಡು ಶೇಕಡಾ 8.7ರಿಂದ ಶೇಕಡಾ 16.4ಕ್ಕೆ ತಲುಪಿತ್ತು. ಇದು ಪ್ರಸ್ತುತ ಆರ್ಥಿಕ ಚಟುವಟಿಕೆಗಳ ಬೆಳವಣಿಗೆಯಲ್ಲಿನ ವೇಗವರ್ಧನೆಯನ್ನು ಪ್ರತಿಬಿಂಬಿಸಿದ್ದರ ಜತೆಗೆ ಭವಿಷ್ಯದಲ್ಲಿ ಇನ್ನಷ್ಟು ವೇಗವರ್ಧನೆಯ ನಿರೀಕ್ಷೆಯನ್ನು ಪ್ರತಿಬಿಂಬಿಸಿದೆ ಎಂದು ಮೂಲಗಳು ಹೇಳಿವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ