ಹಣದುಬ್ಬರ ಕಡಿಮೆ ಆದರೂ ಈ ವರ್ಷ ಬಡ್ಡಿದರ ಇಳಿಕೆ ಸಾಧ್ಯತೆ ಇಲ್ಲವಾ?
RBI repo rate: ಕಳೆದ ಹಲವು ತಿಂಗಳಿಂದ ಇರುವ ಶೇ. 6.5ರ ಬಡ್ಡಿದರವನ್ನು ಅದೇ ಮಟ್ಟದಲ್ಲಿ ಮುಂದುವರಿಸುವ ಸಾಧ್ಯತೆ ಇದೆ. ಹಣದುಬ್ಬರ ಕಡಿಮೆ ಆಗಿದ್ದರೂ ಆರ್ಬಿಐ ಬಡ್ಡಿದರ ಇಳಿಕೆಗೆ ಕೈಹಾಕುವ ಮುನ್ನ ಇನ್ನಷ್ಟು ತಿಂಗಳು ಕಾದು ನೋಡುವ ನಿರ್ಧಾರಕ್ಕೆ ಬರಬಹುದು. ಹಣದುಬ್ಬರ ಸತತವಾಗಿ ಶೇ. 4ರ ಆಸುಪಾಸಿನಲ್ಲಿ ಇದ್ದಲ್ಲಿ ಮುಂದಿನ ವರ್ಷ ಬಡ್ಡಿದರ ಇಳಿಕೆಗೆ ಆರ್ಬಿಐ ಕೈಹಾಕಬಹುದು ಎನ್ನಲಾಗುತ್ತಿದೆ.
ನವದೆಹಲಿ, ಆಗಸ್ಟ್ 15: ಜುಲೈ ತಿಂಗಳಲ್ಲಿ ಹಣದುಬ್ಬರ ತೀವ್ರವಾಗಿ ಇಳಿಕೆಗೊಂಡಿದ್ದರೂ ಆರ್ಬಿಐನಿಂದ ಬಡ್ಡಿದರ ಇಳಿಕೆ ಸದ್ಯಕ್ಕೆ ಇಲ್ಲ ಎಂದು ಹೇಳಲಾಗುತ್ತಿದೆ. ಹಣದುಬ್ಬರ ಮುಂದಿನ ತಿಂಗಳುಗಳಲ್ಲಿ ಯಾವ ಮಟ್ಟದಲ್ಲಿ ಇರುತ್ತದೆ ಎಂದು ಕಾದು ನೋಡಿ ಆ ಬಳಿಕವಷ್ಟೇ ಬಡ್ಡಿದರ ಯಥಾಸ್ಥಿತಿ ಮುಂದುವರಿಸಿಬೇಕೋ ಅಥವಾ ಬಡ್ಡಿ ಕಡಿಮೆಗೊಳಿಸಬೇಕೋ ಎಂದು ನಿರ್ಧರಿಸುವ ಸಾಧ್ಯತೆ ಇದೆ. ಕಳೆದ ವಾರ ನಡೆದ ಎಂಪಿಸಿ ಸಭೆ ನಂತರದ ಪತ್ರಿಕಾಗೋಷ್ಠಿಯಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಬಗ್ಗೆ ಸುಳಿವು ನೀಡಿದ್ದರು. ಹಣದುಬ್ಬರ ದರ ನಿಗದಿತ ಗುರಿಯಲ್ಲಿ ಸತತವಾಗಿ ಇರುವವರೆಗೂ ಆರ್ಬಿಐನ ಪ್ರಸಕ್ತ ನೀತಿಯನ್ನು ಮುಂದುವರಿಸಲಿದ್ದೇವೆ ಎಂದು ದಾಸ್ ಹೇಳಿದ್ದರು.
ಮೊನ್ನೆ ಸರ್ಕಾರದಿಂದ ಬಿಡುಗಡೆ ಆದ ದತ್ತಾಂಶದ ಪ್ರಕಾರ, ಜುಲೈ ತಿಂಗಳಲ್ಲಿ ಗ್ರಾಹಕ ಬೆಲೆ ಅನುಸೂಚಿ ಆಧಾರಿತ ರೀಟೇಲ್ ಹಣದುಬ್ಬರ ದರ ಶೇ. 3.45ರಷ್ಟಿತ್ತು. ಜೂನ್ ತಿಂಗಳಲ್ಲಿ ಶೇ. 5.08ರಷ್ಟಿದ್ದ ಹಣದುಬ್ಬರ ಗಣನೀಯವಾಗಿ ಇಳಿಕೆಯಾಗಿದೆ. ಹಿಂದಿನ ವರ್ಷದ ಜುಲೈನಲ್ಲಿ ಹಣದುಬ್ಬರ ದೊಡ್ಡ ಮಟ್ಟದಲ್ಲಿ ಇದ್ದುದ್ದರಿಂದ ಬೇಸ್ ಎಫೆಕ್ಟ್ ಪರಿಣಾಮವಾಗಿ ಈ ಜುಲೈನಲ್ಲಿ ಹಣದುಬ್ಬರ ಕಡಿಮೆ ಮಟ್ಟದಲ್ಲಿದೆ. 2019ರಿಂದ ಈಚೆ ಹಣದುಬ್ಬರ ಮಟ್ಟ ಇಷ್ಟು ಕಡಿಮೆ ಇರುವುದು ಇದೇ ಮೊದಲು.
ಇದನ್ನೂ ಓದಿ: ಒಳ್ಳೆಯ ದೇಶದಲ್ಲಿ, ಒಳ್ಳೆಯ ಕಾಲಘಟ್ಟದಲ್ಲಿ ಹುಟ್ಟಿರುವ ನೀವು ನಾವೇ ಪುಣ್ಯವಂತರು: ಡಾ. ದೇವಿಶೆಟ್ಟಿ
ಆರ್ಬಿಐ ಹಣದುಬ್ಬರಕ್ಕೆ ಮಧ್ಯಮಾವಧಿ ಗುರಿಯಾಗಿ ಶೇ. 4 ಎಂದಿಟ್ಟಿದೆ. ಇದಕ್ಕೆ ತಾಳಿಕೆ ಮಿತಿಯಾಗಿ ಶೇ. 2ರಿಂದ 6ರ ಶ್ರೇಣಿಯನ್ನು ನಿಗದಿ ಮಾಡಿದೆ. ಅಂದರೆ ಹಣದುಬ್ಬರ ಶೇ. 2ಕ್ಕಿಂತ ಕಡಿಮೆ ಆಗದಂತೆ ಮತ್ತು ಶೇ. 6ಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳುವುದು ಆರ್ಬಿಐನ ಗುರಿಯಾಗಿದೆ. 2023ರ ಸೆಪ್ಟಂಬರ್ನಿಂದೀಚೆ ಹಣದುಬ್ಬರ ಶೇ. 6ಕ್ಕಿಂತ ಕಡಿಮೆ ಮಟ್ಟದಲ್ಲೇ ಇದೆ.
ಕೆಲ ತಜ್ಞರ ಪ್ರಕಾರ ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರ ಕಡಿತ ಮಾಡಿದ್ದೇ ಆದಲ್ಲಿ ಅದರ ಪ್ರಭಾವ ಆರ್ಬಿಐ ನಿರ್ಧಾರದ ಮೇಲಾಗಬಹುದು. ಅಮೆರಿಕದ ನಿರ್ಧಾರಕ್ಕೂ ತಮಗೂ ಸಂಬಂಧ ಇಲ್ಲ ಎಂದು ಆರ್ಬಿಐ ಗವರ್ನರ್ ಹೇಳಿದ್ದಾರಾದರೂ ಜಾಗತಿಕ ಪರಿಣಾಮಗಳು ಭಾರತದ ಮೇಲಾಗುವ ಸಾಧ್ಯತೆಯಂತೂ ಇರುತ್ತದೆ.
ಇದನ್ನೂ ಓದಿ: ಹಣಕಾಸು ಸ್ವಾತಂತ್ರ್ಯ ಕಲ್ಪಿಸುವ FIRE ಪ್ಲಾನ್; ಜೀವನ ಆನಂದಿಸಲು ಇದು ಸೂಪರ್ ಸೂತ್ರವಾ?
ಆದರೆ, ಹೆಚ್ಚಿನ ತಜ್ಞರು ಈ ವರ್ಷಾಂತ್ಯದವರೆಗೂ ಆರ್ಬಿಐ ಕಾದು ನೋಡಲು ನಿರ್ಧರಿಸಬಹುದು. ಸದ್ಯ ಬಡ್ಡಿದರ ಅಥವಾ ರಿಪೋ ದರ ಶೇ. 6.5ರಷ್ಟಿದೆ. ಬಹಳಷ್ಟು ಬ್ಯಾಂಕುಗಳು ಠೇವಣಿ ದರಗಳನ್ನು ಹೆಚ್ಚಿಸಿವೆ. ಒಂದು ವೇಳೆ ಆರ್ಬಿಐ ಬಡ್ಡಿದರ ಇಳಿಸಿದರೂ ಬ್ಯಾಂಕುಗಳು ಠೇವಣಿ ದರ ಕಡಿಮೆಗೊಳಿಸಲು ಕಷ್ಟವಾಗಬಹುದು. ಹೀಗಾಗಿ, ಆರ್ಬಿಐ ಎಲ್ಲಾ ಲೆಕ್ಕಾಚಾರ ಹಾಕಿ ರಿಪೋ ದರ ವ್ಯತ್ಯಯಕ್ಕೆ ಮುಂದಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ