ನವದೆಹಲಿ, ಅಕ್ಟೋಬರ್ 6: ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿಯ (RBI MPC Meeting) ದ್ವೈಮಾಸಿಕ ಸಭೆಯ ನಿರ್ಧಾರಗಳು ಇಂದು ಪ್ರಕಟವಾಗಲಿವೆ. ಮೊನ್ನೆ (ಅಕ್ಟೋಬರ್ 4ರಂದು) ಆರಂಭವಾದ ಕಮಿಟಿ ಸಭೆ ಇಂದು ಮುಕ್ತಾಯಗೊಳ್ಳುತ್ತದೆ. ಸಭೆ ಬಳಿಕ ಬೆಳಗ್ಗೆ 10 ಗಂಟೆಗೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ. ಸಭೆಯಲ್ಲಿ ಚರ್ಚಿಸಲಾದ ವಿಚಾರಗಳು ಹಾಗು ನಿರ್ಧಾರಗಳನ್ನು ಬಹಿರಂಗಪಡಿಸಲಾಗುತ್ತದೆ. ಬಡ್ಡಿದರದಿಂದ ಹಿಡಿದು ಭಾರತದ ಆರ್ಥಿಕ ಮತ್ತು ಹಣಕಾಸು ಪರಿಸ್ಥಿತಿ ಬಗ್ಗೆ ಆರ್ಬಿಐ ನೀಡುವ ಹೇಳಿಕೆ ಮತ್ತು ನಿರ್ಧಾರಗಳ ಮೇಲೆ ಎಲ್ಲರ ಚಿತ್ತ ನೆಟ್ಟಿರುತ್ತದೆ.
ಇದನ್ನೂ ಓದಿ: ಜೆಪಿ ಮಾರ್ಗನ್ ಬಾಂಡ್ ಮಾರುಕಟ್ಟೆಗೆ ಭಾರತದ ಸೇರ್ಪಡೆಯಿಂದ 23 ಬಿಲಿಯನ್ ಡಾಲರ್ ಬಂಡವಾಳ: ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ
ರೆಪೋ ದರ ಎಂಬುದು ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲಕ್ಕೆ ಆರ್ಬಿಐ ವಿಧಿಸುವ ಬಡ್ಡಿದರವಾಗಿದೆ. ಕಳೆದ ಒಂದು ವರ್ಷದಿಂದಲೂ ರೆಪೋ ದರ ಶೇ. 6.5ರಷ್ಟಿದೆ. ಈ ಬಾರಿಯೂ ಅದರಲ್ಲಿ ಬದಲಾವಣೆ ಆಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಆರ್ಬಿಐ ಎಂಪಿಸಿ ಸಭೆ ಎಂದರೆ ಸಾಮಾನ್ಯವಾಗಿ ರೆಪೋ ದರದ ಬಗ್ಗೆ ಎಲ್ಲರ ಗಮನ ನೆಟ್ಟಿರುತ್ತದೆ. ಈ ಬಾರಿ ಹಣದುಬ್ಬರ ಪರಿಸ್ಥಿತಿ ಬಗ್ಗೆ ಅವಲೋಕನವೇನು ಎಂಬುದರ ಮೇಲೆ ಆಸಕ್ತಿ ಮೂಡಿದೆ. ಹಣದುಬ್ಬರ ನಿಯಂತ್ರಣಕ್ಕೆ ಆರ್ಬಿಐ ಬೇರೆ ತಂತ್ರ ಅನುಸರಿಸಬಹುದು. ಅದರಲ್ಲಿ ಹಣಕಾಸು ಹರಿವು ಹಿಂಪಡೆಯುವುದು (Accommodative stance) ಒಂದು ಕ್ರಮ. ಹಣಕಾಸು ಹರಿವನ್ನು ಹಿಂಪಡೆಯಲು ಕಳೆದ ಬಾರಿ ನಿರ್ಧರಿಸಲಾಗಿತ್ತು. ಈ ಬಾರಿಯೂ ಅದೇ ನಿಲುವು ಮುಂದುವರಿಯಬಹುದು.
ಸದ್ಯ, ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ. 6.83ರಷ್ಟಿದೆ. ಇದನ್ನು ಶೇ. 4ಕ್ಕೆ ಹಿಡಿದು ನಿಲ್ಲಿಸುವುದು ಆರ್ಬಿಐನ ಗುರಿಯಾಗಿದೆ. ಕಡೇಪಕ್ಷ ಹಣದುಬ್ಬರ ತಾಳಿಕೆ ಮಿತಿಯಾದ ಶೇ. 6ರೊಳಗೆ ಅದನ್ನು ತರುವ ಸಂಕಲ್ಪ ಇದೆ. ಟೊಮೆಟೋ ಮತ್ತಿತರ ತರಕಾರಿಗಳ ಬೆಲೆ ಏರಿಕೆಯಿಂದಾಗಿ ಜುಲೈನಲ್ಲಿ ಹಣದುಬ್ಬರ ಶೇ. 7.44ಕ್ಕೆ ಜಿಗಿದಿತ್ತು. ಆಗಸ್ಟ್ನಲ್ಲಿ ತುಸು ಕಡಿಮೆ ಆಗಿದೆ. ಸೆಪ್ಟೆಂಬರ್ನಲ್ಲಿ ಇದು ಇನ್ನೂ ಸ್ವಲ್ಪ ಕಡಿಮೆ ಆಗಬಹುದಾದರೂ ತಾಳಿಕೆ ಮಿತಿಯಾದ ಶೇ. 6ಕ್ಕಿಂತಲೂ ಹೆಚ್ಚೇ ಇರಬಹುದು ಎಂದು ನಿರೀಕ್ಷಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ