2023-24ರಲ್ಲಿ ರೀಟೇಲ್ ಹಣದುಬ್ಬರ ಶೇ. 5.4 ಸಾಧ್ಯತೆ; ಹೆಡ್​ಲೈನ್ ಇನ್​ಫ್ಲೇಶನ್ ಬಗ್ಗೆ ಆರ್​​ಬಿಐ ಸಮಾಧಾನ

Inflation of India: ಈ ಹಣಕಾಸು ವರ್ಷದಲ್ಲಿ ಭಾರತದ ಹಣದುಬ್ಬರ ಶೇ. 5.4ರಷ್ಟು ಇರಬಹುದು ಎಂದು ಆರ್​ಬಿಐ ತನ್ನ ಹಿಂದಿನ ಅಂದಾಜನ್ನು ಮುಂದುವರಿಸಿದೆ. ಕಳೆದ ವರ್ಷ ಹೆಚ್ಚಿನ ಮಟ್ಟದಲ್ಲಿದ್ದ ಹೆಡ್​ಲೈನ್ ಇನ್​ಫ್ಲೇಶನ್ ಈಗ ಸಾಕಷ್ಟು ಕಡಿಮೆ ಆಗಿದೆ ಎಂದು ಆರ್​ಬಿಐ ಸಮಾಧಾನಪಟ್ಟಿದೆ. ಭಾರತದ ಫಾರೆಕ್ಸ್ ರಿಸರ್ವ್ಸ್ ಡಿಸೆಂಬರ್ 1ರಂದು ಅಂತ್ಯಗೊಂಡ ವರದಲ್ಲಿ 604 ಬಿಲಿಯನ್ ಡಾಲರ್ ತಲುಪಿದೆ.

2023-24ರಲ್ಲಿ ರೀಟೇಲ್ ಹಣದುಬ್ಬರ ಶೇ. 5.4 ಸಾಧ್ಯತೆ; ಹೆಡ್​ಲೈನ್ ಇನ್​ಫ್ಲೇಶನ್ ಬಗ್ಗೆ ಆರ್​​ಬಿಐ ಸಮಾಧಾನ
ಹಣದುಬ್ಬರ

Updated on: Dec 08, 2023 | 11:43 AM

ನವದೆಹಲಿ, ಡಿಸೆಂಬರ್ 8: ಈ ಹಣಕಾಸು ವರ್ಷಕ್ಕೆ ಹಣದುಬ್ಬರ (India Inflation) ಶೇ. 5.4ರಷ್ಟಿರಬಹುದು ಎಂದು ಈ ಹಿಂದೆ ಮಾಡಿದ್ದ ಅಂದಾಜನ್ನು ಆರ್​ಬಿಐ ಪುನರುಚ್ಚರಿಸಿದೆ. ಆದರೆ, ಆಹಾರವಸ್ತುಗಳ ಬೆಲೆ ಏರಿಕೆ ಆಗದೇ ಹೋಗಿದ್ದರೆ ಹಣದುಬ್ಬರ ದರ ಕಡಿಮೆ ಆಗುವ ಸಾಧ್ಯತೆ ಇತ್ತು ಎಂಬುದನ್ನು ಆರ್​ಬಿಐ (RBI MPC Meeting) ಪರೋಕ್ಷವಾಗಿ ತಿಳಿಸಿದೆ. ಆಹಾರ ಬೆಲೆ, ಕಚ್ಛಾ ತೈಲ ಬೆಲೆಗಳಲ್ಲಿ ಅನಿಶ್ಚಿತ ಪರಿಸ್ಥಿತಿ ಇದೆ. ಆಂತರಿಕವಾಗಿ ಆರ್ಥಿಕತೆ ವಿಸ್ತರಿಸುತ್ತಿದೆ. ಈ ಅಂಶಗಳು ಹಣದುಬ್ಬರದ ಮೇಲೆ ಒತ್ತಡ ಬೀರಬಹುದು ಎಂಬುದು ಆರ್​ಬಿಐ ಆತಂಕ. ಆದರೂ ಕೂಡ ರೆಪೋ ದರವನ್ನು ಏರಿಸದೇ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ.

‘ಕಳೆದ ವರ್ಷ ಹೆಚ್ಚಿನ ಮಟ್ಟದಲ್ಲಿದ್ದ ಸಮಗ್ರ ಹಣದುಬ್ಬರ (ಹೆಡ್​ಲೈನ್ ಇನ್​ಫ್ಲೇಶನ್) ಇದೀಗ ಕಡಿಮೆ ಆಗಿದೆ. ಹೆಚ್ಚಿನ ದೇಶಗಳಲ್ಲಿ ಇದು ಗುರಿಗಿಂತ ಮೇಲೆಯೇ ಇದೆ,’ ಎಂದೂ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: RBI MPC Meet: ಶೇ. 6.5ರಷ್ಟು ಬಡ್ಡಿದರ ಮುಂದುವರಿಸಿದ ಆರ್​ಬಿಐ; ಸತತ ಆರನೇ ಬಾರಿ ಬಡ್ಡಿದರ ಯಥಾಸ್ಥಿತಿ

2023-24ರಲ್ಲಿ ಗ್ರಾಹಕ ಬೆಲೆ ಅನುಸೂಚಿ (ಸಿಪಿಐ) ಆಧಾರಿತ ಹಣದುಬ್ಬರ ಶೇ. 5.4ರಷ್ಟು ಇರಬಹುದು ಎಂದು ಆರ್​ಬಿಐ ಭವಿಷ್ಯ ನುಡಿದಿದೆ. ಸಿಪಿಐ ಹಣದುಬ್ಬರ ಎಂದರೆ ರೀಟೇಲ್ ಇನ್​ಫ್ಲೇಶನ್. ಆಹಾರವಸ್ತು ಸೇರಿದಂತೆ ಗ್ರಾಹಕ ಬಳಕೆಯ ವಸ್ತುಗಳು ಮತ್ತು ಸರಕುಗಳ ಬೆಲೆಯಲ್ಲಿ ಒಂದು ವರ್ಷದಲ್ಲಿ ಆಗಿರುವ ವ್ಯತ್ಯಾಸವೇ ರೀಟೇಲ್ ಹಣದುಬ್ಬರ.

ಇನ್ನು, ಹೆಡ್​ಲೈನ್ ಇನ್​ಫ್ಲೇಶನ್ ಅಥವಾ ಸಮಗ್ರ ಹಣದುಬ್ಬರವು ಒಟ್ಟಾರೆ ಆರ್ಥಿಕತೆಯ ಹಣದುಬ್ಬರ ಅಳತೆಯಾಗಿದೆ. ಆಹಾರ ಮತ್ತು ಇಂಧನ ವಸ್ತುಗಳ ಬೆಲೆಯೂ ಇದರಲ್ಲಿ ಒಳಗೊಂಡಿರುತ್ತದೆ.

ಇದನ್ನೂ ಓದಿ: GDP forecast: ಈ ಹಣಕಾಸು ವರ್ಷ ಭಾರತದ ಜಿಡಿಪಿ ಶೇ. 7ರಷ್ಟಾಗಬಹುದು: ನಿರೀಕ್ಷೆ ಹೆಚ್ಚಿಸಿದ ಆರ್​ಬಿಐ

604 ಬಿಲಿಯನ್ ಡಾಲರ್ ಮುಟ್ಟಿದ ಫಾರೆಕ್ಸ್ ರಿಸರ್ವ್ಸ್

ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (ಫಾರೆಕ್ಸ್ ರಿಸರ್ವ್ಸ್) ಡಿಸೆಂಬರ್ 1ರಂದು ಅಂತ್ಯಗೊಂಡ ವಾರದಲ್ಲಿ 2.54 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿದೆ. ಇದರೊಂದಿಗೆ ಫಾರೆಕ್ಸ್ ರಿಸರ್ವ್ಸ್ 604 ಬಿಲಿಯನ್ ಡಾಲರ್ ಮುಟ್ಟಿದೆ. 2022ರಲ್ಲಿ ಇದು 645 ಬಿಲಿಯನ್ ಡಾಲರ್​ನಷ್ಟು ಗರಿಷ್ಠ ಮಟ್ಟ ಮುಟ್ಟಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us