ನವದೆಹಲಿ, ಸೆಪ್ಟೆಂಬರ್ 15: ಭಾರತೀಯ ರಿಸರ್ವ್ ಬ್ಯಾಂಕ್ ನಿನ್ನೆ (ಸೆ. 14) ಮೇಲಿನ ಹಂತದ ಎನ್ಬಿಎಫ್ಸಿಗಳ ಪಟ್ಟಿಯನ್ನು (NBFCs) ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿರುವ 15 ಹಣಕಾಸು ಸಂಸ್ಥೆಗಳು ಆರ್ಬಿಐನ ಉನ್ನತ ಕಟ್ಟುಪಾಡು ನಿಯಮಗಳನ್ನು (Enhanced Regulatory Requirements) ಪೂರೈಸಬೇಕಾಗುತ್ತದೆ. ಎಲ್ಐಸಿ ಹೌಸಿಂಗ್ ಫೈನಾನ್ಸ್, ಬಜಾಜ್ ಫೈನಾನ್ಸ್, ಶ್ರೀರಾಮ್ ಫೈನಾನ್ಸ್, ಟಾಟಾ ಸನ್ಸ್ ಮೊದಲಾದ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಈ ಪಟ್ಟಿಯಲ್ಲಿವೆ.
ದೇಶದಲ್ಲಿ ಅಂದಾಜು 10,000 ಸಂಖ್ಯೆಯಷ್ಟು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿವೆ. ಆರ್ಬಿಐ ನಿಗದಿ ಮಾಡಿದ ನಿಯಮಗಳಿಗೆ ಇವು ಒಳಪಡಬೇಕಾಗುತ್ತದೆ. ಈ ಎಲ್ಲಾ ಎನ್ಬಿಎಫ್ಸಿಗಳನ್ನು ಆರ್ಬಿಐ ಮೂರು ಹಂತ ಅಥವಾ ಲೇಯರ್ ಆಗಿ ವರ್ಗೀಕರಿಸುತ್ತದೆ. ಬೇಸ್ ಲೇಯರ್ ಅಥವಾ ಕೆಳ ಹಂತದ ಎನ್ಬಿಎಫ್ಸಿ, ಮಿಡಲ್ ಲೇಯರ್ ಅಥವಾ ಮಧ್ಯಮ ಹಂತದ ಎನ್ಬಿಎಫ್ಸಿ, ಹಾಗೂ ಅಪ್ಪರ್ ಲೇಯರ್ ಅಥವಾ ಮೇಲಿನ ಹಂತದ ಎನ್ಬಿಎಫ್ಸಿ ಎಂದು ವರ್ಗೀಕರಣ ಮಾಡಲಾಗುತ್ತದೆ. ಸಾಮಾನ್ಯವಾಗಿ ದೊಡ್ಡ ಗಾತ್ರದ ಎನ್ಬಿಎಫ್ಸಿಗಳನ್ನು ಅಪ್ಪರ್ ಲೇಯರ್ ಎಂದು ಪರಿಗಣಿಸಲಾಗುತ್ತದೆ. ಈ ಉನ್ನತ ವರ್ಗದ ಹಣಕಾಸು ಸಂಸ್ಥೆಗಳಿಗೆ ಹೆಚ್ಚು ಕಟ್ಟುಪಾಡುಗಳು ನಿಗದಿಯಾಗಿರುತ್ತವೆ.
ಇದನ್ನೂ ಓದಿ: ಮುಂಗಡ ತೆರಿಗೆ 2ನೇ ಕಂತಿಗೆ ಇವತ್ತು ಕೊನೆ ದಿನ; ಏನಿದು ಅಡ್ವಾನ್ಸ್ ಟ್ಯಾಕ್ಸ್? ಯಾರು ಕಟ್ಟಬೇಕು?
ಇದನ್ನೂ ಓದಿ: ಇಟಲಿಗೆ ಅಡಿ ಇಟ್ಟ ಅಂಬಾನಿ ಮಾಲಕತ್ವದ ಹ್ಯಾಮ್ಲೀಸ್; ಜಿಯೋಚಿ ಪ್ರೆಜಿಯೋಸಿ ಜೊತೆ ರಿಲಾಯನ್ಸ್ ಒಪ್ಪಂದ
ಎನ್ಬಿಎಫ್ಸಿ ಅನ್ನು ಅಪ್ಪರ್ ಲೇಯರ್ ಆಗಿ ವರ್ಗೀಕರಿಸಲು ಆರ್ಬಿಐ ನಿರ್ದಿಷ್ಟ ಮಾನದಂಡಗಳನ್ನು ನಿಗದಿ ಮಾಡಿದೆ. ಸಂಸ್ಥೆಯ ಗಾತ್ರ ಮತ್ತು ಸ್ಕೋರಿಂಗ್ ವಿಧಾನ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಈ ವರ್ಗೀಕರಣ ನಡೆಯುತ್ತದೆ. ಇದರ ಪ್ರಕಾರ ಟಿಎಂಎಫ್ ಬ್ಯುಸಿನೆಸ್ ಸರ್ವಿಸಸ್ ಲಿ (ಟಾಟಾ ಗ್ರೂಪ್ ಕಂಪನಿ) ಸಂಸ್ಥೆಯನ್ನೂ ಅಪ್ಪರ್ ಲೇಯರ್ ಎನ್ಬಿಎಫ್ಸಿ ಪಟ್ಟಿಗೆ ಸೇರಿಸಬೇಕಿತ್ತು. ಆದರೆ, ಸಂಸ್ಥೆಯ ಪುನಾರಚನೆ ನಡೆಯುತ್ತಿರುವುದರಿಂದ ಪಟ್ಟಿಗೆ ಸೇರ್ಪಡೆಯಾಗಿಲ್ಲ.
ಪಟ್ಟಿಯಲ್ಲಿರುವ ಕಂಪನಿಗಳು ಕನಿಷ್ಠ 5 ವರ್ಷವಾದರೂ ಆರ್ಬಿಐನ ನಿಗದಿತ ಕಟ್ಟುಪಾಡುಗಳಿಗೆ ಒಳಪಡಲೇಬೇಕಾಗುತ್ತದೆ. ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿ ಈ ಐದು ವರ್ಷದಲ್ಲಿ ನಿಗದಿತ ಮಾನದಂಡಗಳಿಗೆ ಅನ್ವಯ ಆಗದೇ ಹೋದರೂ ಕೂಡ ನಿಗದಿತ ಕಟ್ಟುಪಾಡುಗಳಿಗೆ ಒಳಪಡುವುದು ಕಡ್ಡಾಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ