ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ನ (Reserve Bank of India – RBI) ಹಣಕಾಸು ನಿರ್ವಹಣಾ ಸಮಿತಿಯು (Monetary Policy Committee – MPC) ದ್ವೈಮಾಸಿಕ ಸಭೆಯ ನಂತರ ಪ್ರಕಟವಾಗಿ ರೆಪೊ ದರಗಳನ್ನು ಇಡೀ ಜಗತ್ತು ಕಾತರದಿಂದ ನಿರೀಕ್ಷಿಸುತ್ತಿರುತ್ತದೆ. ರೆಪೊ ದರಗಳನ್ನು ಪ್ರಕಟಿಸಲೆಂದು ಆರ್ಬಿಐ ಗವರ್ನರ್ ನಡೆಸುವ ಸುದ್ದಿಗೋಷ್ಠಿಯಲ್ಲಿ ಆರ್ಥಿಕತೆಗೆ ಸಂಬಂಧಿಸಿದ ಹಲವು ಮಾಹಿತಿ ಇರುತ್ತದೆ. ಆರ್ಬಿಐನ ಆರ್ಥಿಕ ಪರಿಣಿತರ ಒಳನೋಟದೊಂದಿಗೆ ಸಿದ್ಧವಾಗುವ ಈ ವರದಿಯು ಭಾರತ ಸರ್ಕಾರದ ಹಣಕಾಸು ಇಲಾಖೆಯ ಮುಂದಿನ ನಡೆಗಳ ಬಗ್ಗೆ ಇಣುಕುನೋಟ ನೀಡುವುದರೊಂದಿಗೆ ದೇಶದ ಸದ್ಯದ ಆರ್ಥಿಕ ಪರಿಸ್ಥಿತಿಗೂ ಕನ್ನಡಿ ಹಿಡಿಯುತ್ತದೆ.
ನೆರೆಯ ಶ್ರೀಲಂಕಾ, ನೇಪಾಳ ಮತ್ತು ಪಾಕಿಸ್ತಾನಗಳಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಭಾರತದ ಆರ್ಥಿಕ ಸ್ಥಿತಿಗತಿಯ ಬಗ್ಗೆಯೂ ಜನರಲ್ಲಿ ಆತಂಕ ಮೂಡಿತ್ತು. ಬಹುಶಃ ಇದನ್ನು ಗಮನದಲ್ಲಿ ಇರಿಸಿಕೊಂಡೇ ಇರಬಹುದು, ಆರ್ಬಿಐ ಗವರ್ನರ್ ದೇಶದ ವಿದೇಶಿ ಮೀಸಲು ನಿಧಿಯ ಬಗ್ಗೆಯೂ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ‘ಭಾರತದ ಬ್ಯಾಂಕ್ಗಳು ಸದೃಢವಾಗಿವೆ’ ಎಂದು ಘೋಷಿಸುವ ಮೂಲಕ ಭಾರತಕ್ಕೆ ತಕ್ಷಣದ ಆತಂಕ ಇಲ್ಲ ಎಂದು ಸಾರಿ ಹೇಳಿದ್ದಾರೆ. ಈ ಘೋಷಣೆಗಳು ದೇಶದ ಆರ್ಥಿಕ ವಲಯದಲ್ಲಿ ಆಶಾಭಾವನೆ ಹುಟ್ಟುಹಾಕಿದ್ದು, ಷೇರುಪೇಟೆಯ ಪ್ರಾತಿನಿಧಿಕ ಸೂಚ್ಯಂಕಗಳಾದ ಎನ್ಎಸ್ಇ ಮತ್ತು ಬಿಎಸ್ಇ ಏರಿಕೆ ಕಂಡಿವೆ.
ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನಿರ್ವಹಣಾ ಸಮಿತಿಯು ರೆಪೊ ದರಗಳನ್ನು ಹೆಚ್ಚಿಸಲು ತೀರ್ಮಾನಿಸಿದೆ. ಈ ವಿಷಯವನ್ನು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ (ಆಗಸ್ಟ್ 5) ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ರೆಪೊ ದರವನ್ನು 50 ಮೂಲಾಂಶಗಳಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ಲೆಂಡಿಂಗ್ ದರವು ಶೇ 5.4ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ ಸಮಗ್ರ ರಾಷ್ಟ್ರೀಯ ಉತ್ಪನ್ನದ (Gross Domestic Product – GDP) ಶೇ 7.2ರ ಬೆಳವಣಿಗೆಯ ನಿರೀಕ್ಷೆಯನ್ನು ಆರ್ಬಿಐ ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದೆ. ಜಾಗತಿಕ ಆರ್ಥಿಕ ವಿದ್ಯಮಾನಗಳ ಪ್ರಭಾವ ಭಾರತವನ್ನು ಪ್ರಭಾವಿಸುತ್ತಿದೆ. ಈ ನಡುವೆಯೂ ಆರ್ಬಿಐ ಉತ್ತಮ ಜಿಡಿಪಿ ಮುನ್ನೋಟದ ಸಾಧ್ಯತೆ ತೋರಿಸಿರುವುದು ಜನರಲ್ಲಿ ಆಶಾಭಾವನೆ ಹುಟ್ಟುಹಾಕಿದೆ.
ಉಕ್ರೇನ್-ರಷ್ಯಾ ಸಂಘರ್ಷ, ಚೈನಾ-ಅಮೆರಿಕ ನಡುವೆ ಸಂಬಂಧ ಹದಗೆಡುತ್ತಿರುವುದು ಹಾಗೂ ಆರ್ಥಿಕ ಹಿಂಜರಿತದ ಭೀತಿಯ ಹಿನ್ನೆಲೆಯಲ್ಲಿ ಭಾರತದ ಜಿಡಿಪಿ ಮುನ್ನೋಟವನ್ನು ಆರ್ಬಿಐ ತಗ್ಗಿಸಬಹುದು ಎಂದು ವಿಶ್ಲೇಷಿಸಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಬಿಐ ಗವರ್ನರ್, ‘ಭಾರತದಲ್ಲಿ ಆರ್ಥಿಕ ಸುಧಾರಣೆಯ ನಿಚ್ಚಳ ಲಕ್ಷಣಗಳು ಕಾಣಿಸುತ್ತಿವೆ. ಸುಧಾರಣೆಯಾಗುತ್ತಿರುವ ವಲಯಗಳ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ಹೇಳಿದರು. ಕಳೆದ ಮೂರು ತಿಂಗಳಿನಿಂದ ಭಾರತದ ಹಣದುಬ್ಬರ ಪ್ರಮಾಣವು ಶೇ 7ಕ್ಕಿಂತಲೂ ಹೆಚ್ಚಾಗಿಯೇ ಇದೆ. ಆದರೆ ಇಳಿಕೆ ದಾಖಲಿಸುತ್ತಿರುವುದು ಆಶಾದಾಯ ಬೆಳವಣಿಗೆಯಾಗಿದೆ. ಕಳೆದ ಏಪ್ರಿಲ್ನಲ್ಲಿ ಹಣದುಬ್ಬರ ಪ್ರಮಾಣವು ಶೇ 7.79 ಇತ್ತು. ರೆಪೊ ದರ ಹೆಚ್ಚಿಸುವ ನಿರ್ಧಾರ ಪ್ರಕಟವಾದ ನಂತರ ಆರ್ಬಿಐ ಬಾಂಡ್ಗಳ ಯೀಲ್ಡ್ ಹೆಚ್ಚಾಗಿದೆ. ದರ ಹೆಚ್ಚಳಕ್ಕೆ ಮೊದಲು ಶೇ 7.10 ಇದ್ದ ಯೀಲ್ಡ್ ಪ್ರಮಾಣ, ಘೋಷಣೆಯ ನಂತರ ಶೇ 7.23ಕ್ಕೆ ಏರಿಕೆಯಾಗಿದೆ.
Statement by Shri Shaktikanta Das, Governor – MPC Aug 05, 2022 https://t.co/DGjb6UsfN5
— ReserveBankOfIndia (@RBI) August 5, 2022
ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿಯ 10 ಮುಖ್ಯಾಂಶಗಳಿವು…
Published On - 11:26 am, Fri, 5 August 22