2000 ರೂ. ನೋಟು ಬದಲಾವಣೆಗೆ ಫಾರ್ಮ್​​ ಬಿಡುಗಡೆ: ಇಲ್ಲಿದೆ ಭರ್ತಿ ಪ್ರಕ್ರಿಯೆ

|

Updated on: May 21, 2023 | 7:36 AM

2016ರಲ್ಲಿ ಜಾರಿಗೆ ಬಂದಿದ್ದ 2000 ರೂ. ನೋಟು ವಾಪಸ್​​ ಘೋಷಣೆ ಹೊರಬಿದ್ದ ಹಿನ್ನೆಲೆ ಇದರ ಬದಲಾವಣೆಗೆ ನಾಳೆ (ಮೇ.22) ಸೋಮವಾರ ಚಾಲನೆ ದೊರೆಯಲಿದೆ. ಜನರು ನೋಟು ಬದಲಾಯಿಸಿಕೊಳ್ಳಲು ಆರ್​​ಬಿಐ, ನಿಗದಿತ 'ರಿಕ್ವೆಸ್ಟ್ ಫಾರ್ಮ್' ಬಿಡುಗಡೆ ಮಾಡಿದೆ.

2000 ರೂ. ನೋಟು ಬದಲಾವಣೆಗೆ ಫಾರ್ಮ್​​ ಬಿಡುಗಡೆ: ಇಲ್ಲಿದೆ ಭರ್ತಿ ಪ್ರಕ್ರಿಯೆ
2000 ರೂ. ನೋಟು
Follow us on

ನವದೆಹಲಿ: 2016ರಲ್ಲಿ ಜಾರಿಗೆ ಬಂದಿದ್ದ 2000 ರೂ. ನೋಟು ವಾಪಸ್​​ ಘೋಷಣೆ ಹೊರಬಿದ್ದ ಹಿನ್ನೆಲೆ ಇದರ ಬದಲಾವಣೆಗೆ ನಾಳೆ (ಮೇ.22) ಸೋಮವಾರ ಚಾಲನೆ ದೊರೆಯಲಿದೆ. ಜನರು ನೋಟು ಬದಲಾಯಿಸಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್‌ (RBI) , ನಿಗದಿತ ‘ರಿಕ್ವೆಸ್ಟ್ ಫಾರ್ಮ್’ ಬಿಡುಗಡೆ ಮಾಡಿದ್ದು, ಅದನ್ನು ಭರ್ತಿ ಮಾಡಿ ಬ್ಯಾಂಕ್‌ಗೆ ಸಲ್ಲಿಸುವ ಮೂಲಕ ನೋಟುಗಳ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಈ ಫಾರ್ಮ್ ವಿನಿಮಯ ಮಾಡಿಕೊಳ್ಳುವವರಿಗೆ ಮಾತ್ರ ಸಂಬಂಧಿಸಿದ್ದಾಗಿದೆ. ಅ೦ದರೆ ಬ್ಯಾಂಕ್‌ ಶಾಖೆಗೆ ತೆರಳಿ ವಿನಿಮಯಮಾಡಿಕೊಳ್ಳಲು ಬಯಸುವವರಿಗೆ ಮಾತ್ರ ಅನ್ವಯವಾಗಲಿದೆ.

ಖಾತೆದಾರರು ತಮ್ಮ ನಿರ್ದಿಷ್ಟ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಕೊಳ್ಳಲು ಇದು ಅನ್ವಯಿಸುವುದಿಲ್ಲ. ಅವರು ಎಂದಿನಂತೆ ತಮ್ಮ ಬ್ಯಾಂಕಿನ ಚಲನ್‌ನಲ್ಲಿ 2000 ರೂ. ನೋಟಿನ ವಿವರ ಬರೆದು ಜಮೆ ಮಾಡಿಕೊಳ್ಳಬಹುದಾಗಿದೆ. ಶುಕ್ರವಾರ ಭಾರತೀಯ ರಿಸರ್ವ್ ಬ್ಯಾಂಕ್‌ (RBI), ನೋಟು ರದ್ದತಿ ಪ್ರಕಟಿಸಿತ್ತು. ಅಲ್ಲದೆ, ತಕ್ಷಣದಿಂದಲೇ 2000 ರೂ. ನೋಟುಗಳ ಬದಲು ಬೇರೆ ನೋಟುಗಳನ್ನು ಜನರಿಗೆ ವಿತರಿಸಲು ಇಲ್ಲವೇ, ಅದನ್ನು ಖಾತೆದಾರರ ಖಾತೆಗೆ ಠೇವಣಿಯಾಗಿ ಜಮೆ ಮಾಡಿಸಿಕೊಳ್ಳಲು ಸೂಚನೆ ನೀಡಿತ್ತು. ಇದಕ್ಕೆ ಸೆ.30ರ ಗಡುವು ವಿಧಿಸಿತ್ತು.

ಇದರ ಬೆನ್ನಲ್ಲೇ ಸೋಮವಾರದಿಂದ ನೋಟು ಬದಲಾವಣೆಗೆ ಹಾಗೂ ಜಮೆಗೆ ಚಾಲನೆ ದೊರಕಲಿದೆ. ಆರ್‌ಬಿಐನ ನಿರ್ಧಾರದ ಅನ್ವಯ ಸಾರ್ವಜನಿಕರು ಒ೦ದು ದಿನಕ್ಕೆ ಗರಿಷ್ಠ 20 ಸಾವಿರ ರೂ. ಅಂದರೆ 10 ನೋಟುಗಳನ್ನು ಇತರೆ ಮೌಲ್ಯದ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ ಎಂಬ ಪರತ್ತು ವಿಧಿಸಲಾಗಿದೆ. ಅಲ್ಲದೆ, ನಿಯಮಗಳಿಗೆ ಒಳಪಟ್ಟು ಖಾತೆದಾರರು ತಮ್ಮ ಖಾತೆಗೆ 2 ಸಾವಿರ ರೂ. ನೋಟುಗಳನ್ನು ಖಾತೆಗೆ ಜಮೆ ಮಾಡಬಹುದಾಗಿದೆ.

ಇದನ್ನೂ ಓದಿ: Rs. 2,000 ನೋಟು ಹಿಂಪಡೆದ ಆರ್​ಬಿಐ; ನಿಮ್ಮಲ್ಲಿ ಆ ನೋಟಿದ್ದರೆ ಏನು ಕಥೆ? ಇಲ್ಲಿದೆ ಡೀಟೇಲ್ಸ್

ನೋಟು ಬದಲಾವಣೆ ಹೇಗೆ?

1. 2000 ರು. ನೋಟು ವಿನಿಮಯ ಫಾರ್ಮ್‌ನಲ್ಲಿ ನೋಟುಗಳನ್ನು ಜಮೆ ಮಾಡುವ ಬ್ಯಾಂಕ್‌ ಹಾಗೂ ಶಾಖೆಯ ಹೆಸರನ್ನು ಬರೆಯಬೇಕು. ತಮ್ಮ ಸನಿಹದ ಯಾವುದಾದರೂ ಬ್ಯಾಂಕ್​ಗೆ ಹೋಗಿ ನೋಟು ವಿನಿಮಯ ಮಾಡಿಕೊಳ್ಳಬಹುದು.

2. ನಂತರ ಖಾತೆದಾರರು ತಮ್ಮ ಖಾತೆ ಯಾವುದೇ ಬ್ಯಾಂಕ್‌ನಲ್ಲಿದ್ದರೂ ನಮೂದಿಸಬೇಕು.

3. ಖಾತೆದಾರರು ತಮ್ಮ ಸಂಪೂರ್ಣ ಹೆಸರನ್ನು ಇಂಗ್ಲಿಷ್ ಕ್ಯಾಪಿಟಲ್ ಅಕ್ಷರಗಳಲ್ಲಿ ಬರೆಯಬೇಕು.

4. 6 ನಿರ್ದಿಷ್ಟ ಐಡಿ ಪ್ರೊಫ್ ನಿಗದಿಪಡಿಸಿದ್ದು, ಅದರಲ್ಲಿ ಐಡಿ ಪ್ರೊಫ್ ನೀಡುತ್ತಿದ್ದೇವೆ ಎಂಬುದನ್ನು ಅಲ್ಲಿರುವ ಬಾಕ್ಸ್‌ನಲ್ಲಿ “ಟಿಕ್ ಮಾರ್ಕ್” ಮಾಡಬೇಕು. ಉದಾ: ಡಿಎಲ್‌, ಆಧಾರ್ ಕಾರ್ಡ್, ವೋಟರ್ ಐಡಿ, ನರೇಕಾರ್ಡ್​​, ಪಾಸ್​​​ಪೋರ್ಟ್​​ ಇತ್ಯಾದಿ

5. ಐಡಿ ಪ್ರೊಫ್‌ನ ನಂಬರ್ ಅನ್ನು ಫಾಮ್‌ನಲ್ಲಿ ದಾಖಲಿಸಬೇಕು. ಟಿಕ್ ಮಾಡಿದ ಐಡಿ ಪ್ರೂಫ್ ಅನ್ನು ಕೌಂಟರ್​​ನಲ್ಲಿ ತೋರಿಸಬೇಕು.

6. ಎಷ್ಟು 2000 ರೂ. ನೋಟಿನ ವಿನಿಮಯ ಮಾಡಿಕೊಳ್ಳುತ್ತಿದ್ದೇವೆ? ಅದರ ಒಟ್ಟಾರೆ ಮೌಲ್ಯ ಎಷ್ಟು ಎಂಬುದನ್ನು ಬರೆಯಬೇಕು. ಫಾರ್ಮ್​​ಗೆ ಸಹಿ ಹಾಕಬೇಕು.

7. ಸ್ಥಳ ಹಾಗೂ ದಿನಾಂಕ ಬರೆದು ಬ್ಯಾಂಕ್ ಸಿಬ್ಬಂದಿಗೆ ನೀಡಬೇಕು, ಬಳಿಕ ನೋಟಿನ ಮೌಲ್ಯವನ್ನು ಬ್ಯಾಂಕ್ ಸಿಬ್ಬಂದಿ ಎಣಿಸಿ, ಬದಲಿ​ ನೋಟನ್ನು ನೀಡುತ್ತಾರೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​  ಮಾಡಿ

Published On - 7:34 am, Sun, 21 May 23