ಬಂಗಾರದ ದರ 1 ಕಿಲೋಗೆ 8-9 ಕೋಟಿ ರೂಗೆ ಏರುತ್ತಾ? ಯಾಕಿಷ್ಟು ಏರುತ್ತಿದೆ ಬೆಲೆ?

Gold rates prediction: ಚಿನ್ನದ ಬೆಲೆ ಮೊದಲ ಬಾರಿಗೆ ಒಂದು ಔನ್ಸ್​ಗೆ 5,000 ಡಾಲರ್ ದಾಟಿದೆ. ಒಂದು ಗ್ರಾಮ್ ಚಿನ್ನದ ಬೆಲೆ 16,400 ರೂಗಿಂತ ಹೆಚ್ಚಾಗಿದೆ. ದುರ್ಬಲ ಡಾಲರ್, ಸೆಂಟ್ರಲ್ ಬ್ಯಾಂಕುಗಳ ಚಿನ್ನದ ಖರೀದಿ, ಗೋಲ್ಡ್ ಇಟಿಎಫ್ ಹೂಡಿಕೆ ಹೆಚ್ಚಳ ಇತ್ಯಾದಿ ಕಾರಣಗಳಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಿದೆ. ಕೆಲ ಏಜೆನ್ಸಿಗಳ ಪ್ರಕಾರ ಚಿನ್ನದ ಬೆಲೆ ಈ ವರ್ಷಾಂತ್ಯದಲ್ಲಿ 5,500 ಡಾಲರ್ ಮುಟ್ಟಬಹುದು.

ಬಂಗಾರದ ದರ 1 ಕಿಲೋಗೆ 8-9 ಕೋಟಿ ರೂಗೆ ಏರುತ್ತಾ? ಯಾಕಿಷ್ಟು ಏರುತ್ತಿದೆ ಬೆಲೆ?
ಚಿನ್ನ

Updated on: Jan 26, 2026 | 1:31 PM

ನವದೆಹಲಿ, ಜನವರಿ 26: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold Rate) ಒಂದು ಔನ್ಸ್​ಗೆ 5,000 ಡಾಲರ್ ದಾಟಿ ಹೋಗಿದೆ. ಈ ಮೈಲಿಗಲ್ಲು ಮುಟ್ಟಿದ್ದು ಬಂಗಾರದ ಇತಿಹಾಸದಲ್ಲೇ ಇದು ಪ್ರಥಮ ಬಾರಿಗೆ. ಸ್ಪಾಟ್ ಗೋಲ್ಡ್ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ ಸೋಮವಾರ 5,092 ಡಾಲರ್​ವರೆಗೂ ಏರಿದೆ. ಒಂದು ಔನ್ಸ್ ಎಂದರೆ 28.3495 ಗ್ರಾಮ್. ಅಂದರೆ, ಒಂದು ಗ್ರಾಮ್ ಚಿನ್ನದ ಬೆಲೆ ಸ್ಪಾಟ್ ಮಾರ್ಕೆಟ್​ನಲ್ಲಿ 16,410 ರೂಗಿಂತ ಹೆಚ್ಚಾಗಿದೆ.

ಚಿನ್ನದ ಬೆಲೆ ಏರಲು ಕಾರಣಗಳೇನು?

  • ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿ ಭರಾಟೆಯಲ್ಲಿರುವುದು
  • ಗೋಲ್ಡ್ ಇಟಿಎಫ್​ಗಳಲ್ಲಿ ಹೂಡಿಕೆ ಬಹಳ ಹೆಚ್ಚಿರುವುದು
  • ಅಮೆರಿಕದ ಡಾಲರ್ ದುರ್ಬಲಗೊಳ್ಳುತ್ತಿರುವುದು
  • ಅಮೆರಿಕದ ಟ್ಯಾರಿಫ್​ನ ಪರಿಣಾಮ ಬೀರುತ್ತಿರುವುದು
  • ಯುದ್ಧ ಭೀತಿಯಿಂದ ಜಾಗತಿಕ ರಾಜಕೀಯ ಅನಿಶ್ಚಿತತೆ ಹೆಚ್ಚಿರುವುದು.

ಐತಿಹಾಸಿಕವಾಗಿ ಚಿನ್ನವು ಸೇಫ್ ಹೇವನ್ ಅಥವಾ ಭದ್ರತಾ ಲೋಹವಾಗಿ ಪರಿಗಣಿತವಾಗಿದೆ. ಅನಿಶ್ಚಿತ ಸಂದರ್ಭ ಎದುರಾಗಬಹುದು ಎಂದಾಗ ಜನರು ಚಿನ್ನದಂತಹ ನೈಜ ಮತ್ತು ಅಮೂಲ್ಯ ವಸ್ತುಗಳನ್ನು ತೆಗೆದಿರಿಸಿಕೊಳ್ಳುವುದುಂಟು. ಈಗಲೂ ಕೂಡ ಆ ಪ್ರವೃತ್ತಿ ಮುಂದುವರಿದಿದೆ.

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; ಇಲ್ಲಿದೆ ದರಪಟ್ಟಿ

ಚಿನ್ನದ ಬೆಲೆ ಎಷ್ಟಾಗುತ್ತೆ?

ಗೋಲ್ಡ್​ಮನ್ ಸ್ಯಾಕ್ಸ್ ವರದಿ ಪ್ರಕಾರ ಈ ವರ್ಷಾಂತ್ಯದೊಳಗೆ (2026ರ ಡಿಸೆಂಬರ್) ಚಿನ್ನದ ಬೆಲೆ ಒಂದು ಔನ್ಸ್​ಗೆ 5,400 ಡಾರ್ ಮುಟ್ಟಬಹುದು. ಅಂದರೆ, ಒಂದು ಗ್ರಾಮ್ ಚಿನ್ನದ ಬೆಲೆ 17,430 ರೂಗೆ ಏರಬಹುದು. ಈಗ ನಡೆಯುತ್ತಿರುವ ಏರಿಕೆಯ ಗತಿ ಗಮನಿಸಿದರೆ ಇನ್ನೆರಡು ತಿಂಗಳಲ್ಲೇ ಈ ಬೆಲೆ ಬಂದುಬಿಡಬಹುದು. ಮೆಟಲ್ಸ್ ಫೋಕಸ್ ಎನ್ನುವ ಕಂಪನಿ ಮಾಡಿರುವ ಅಂದಾಜು ಪ್ರಕಾರ ಈ ವರ್ಷಾಂತ್ಯದಲ್ಲಿ ಚಿನ್ನದ ಬೆಲೆ ಔನ್ಸ್​ಗೆ 5,500 ಡಾಲರ್ ಆಗಬಹುದು. ಅಂದರೆ, ಒಂದು ಗ್ರಾಮ್ ಚಿನ್ನದ ಬೆಲೆ 17,753 ರೂ ಆಗಬಹುದು.

ರಾಬರ್ಟ್ ಕಿಯೋಸಾಕಿ ಭಯಾನಕ ಭವಿಷ್ಯ

ಹಣಕಾಸು ತಜ್ಞ ಹಾಗು ರಿಚ್ ಡ್ಯಾಡ್ ಪೂರ್ ಡ್ಯಾಡ್ ಪುಸ್ತಕದ ಕರ್ತೃ ರಾಬರ್ಟ್ ಕಿಯೋಸಾಕಿ ಅವರು ಚಿನ್ನದ ಬೆಲೆ ಒಂದು ಔನ್ಸ್​ಗೆ 27,000 ಡಾಲರ್ ಆಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಅಂದರೆ, ಈಗಿರುವ ಬೆಲೆಗಿಂತ ಐದು ಪಟ್ಟು ಹೆಚ್ಚು ಬೆಲೆಯಾಗಬಹುದು. ಅವರ ಭವಿಷ್ಯ ನಿಜವಾದರೆ ಒಂದು ಗ್ರಾಮ್ ಚಿನ್ನದ ಬೆಲೆ 87,154 ರೂ ಆಗುತ್ತದೆ. ಅಂದರೆ ಒಂದು ಕಿಲೋ ಚಿನ್ನದ ಬೆಲೆ 8,71,54,000 (8.71 ಕೋಟಿ) ರೂ ಆಗಬಹುದು. ಇಷ್ಟು ಅಗಾಧ ಚಿನ್ನದ ಬೆಲೆ ಯಾವಾಗ ಆಗುತ್ತೆ ಎಂದು ಕಿಯೋಸಾಕಿ ಟೈಮ್​ಲೈನ್ ಕೊಟ್ಟಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ