ಮುಂಬೈ: ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇದೀಗ ಸೌರವಿದ್ಯುತ್ ಕ್ಷೇತ್ರದಲ್ಲಿ ಅಂಥದ್ದೇ ಪ್ರಯತ್ನಕ್ಕೆ ಮುನ್ನುಡಿ ಬರೆದಿದೆ. ಸೌರವಿದ್ಯುತ್ ಉತ್ಪಾದಕ ಕಂಪನಿಗಳಿಗೆ ಸಾಫ್ಟ್ವೇರ್ ಸೇವೆ ಒದಗಿಸುವ ಅಮೆರಿಕದ ಸೆನ್ಸ್ಹಾಕ್ (SenseHawk) ಕಂಪನಿಯಲ್ಲಿ ಶೇ 79.4ರ ಪಾಲು ಖರೀದಿಸಲು ರಿಲಯನ್ಸ್ ಇಂಡಸ್ಟ್ರೀಸ್ (Reliance Industries – RIL) ಮುಂದಾಗಿದೆ. ಈ ಸಂಬಂಧ ಸೆನ್ಸ್ಹಾಕ್ ಕಂಪನಿಯ ಪ್ರವರ್ತಕರೊಂದಿಗೆ ರಿಯಲನ್ಸ್ ಒಪ್ಪಂದ ಮಾಡಿಕೊಂಡಿದ್ದು, ಇದಕ್ಕಾಗಿ ರಿಲಯನ್ಸ್ 3.2 ಕೋಟಿ ಅಮೆರಿಕನ್ ಡಾಲರ್ ವ್ಯಯಿಸಲಿದೆ. 2018ರಲ್ಲಿ ಆರಂಭವಾದ ಸೆನ್ಸ್ಹಾಕ್ ಕ್ಯಾಲಿಫೋರ್ನಿಯಾ ಮೂಲದ ಸಾಫ್ಟ್ವೇರ್ ಕಂಪನಿ. ಇದು ಸೌರಶಕ್ತಿ ಕಂಪನಿಗಳಿಗೆ ದೈನಂದಿನ ಕಾರ್ಯನಿರ್ವಹಣೆಯ ಸಾಫ್ಟ್ವೇರ್ ಟೂಲ್ಗಳನ್ನು ಒದಗಿಸುತ್ತದೆ.
ರಿಲಯನ್ಸ್ ಕಂಪನಿಯು ಈ ಸಂಬಂಧ ಸೋಮವಾರ ಅಧಿಕೃತವಾಗಿ ಭಾರತದ ಸರ್ಕಾರದ ಅಧೀನದಲ್ಲಿರುವ ವಿವಿಧ ನಿಯಂತ್ರಣ ಸಂಸ್ಥೆಗಳಿಗೆ ಮಾಹಿತಿ ನೀಡಿದೆ. ಭವಿಷ್ಯದ ಪ್ರಗತಿ, ಸಾಫ್ಟ್ವೇರ್ ಮತ್ತು ಇತರ ಟೂಲ್ಗಳ ವಾಣಿಜ್ಯ ಬಳಕೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಸೆನ್ಸ್ಹಾಕ್ ಕಂಪನಿಯು ರಿಲಯನ್ಸ್ ನೀಡುವ ಹಣವನ್ನು ಬಳಸಲಿದೆ.
ಸೆನ್ಸ್ಹಾಕ್ ಕಂಪನಿಯ 2021-2022ನೇ ಆರ್ಥಿಕ ವರ್ಷದ ವಹಿವಾಟು 2.32 ಕೋಟಿ ಅಮೆರಿಕನ್ ಡಾಲರ್ ಇದೆ. 2020-21ರಲ್ಲಿ 1.16 ಕೋಟಿ ಅಮೆರಿಕನ್ ಡಾಲರ್, 2019-20ರಲ್ಲಿ 1.29 ಕೋಟಿ ಅಮೆರಿಕನ್ ಡಾಲರ್ ವಹಿವಾಟನ್ನು ಸೆನ್ಸ್ಹಾಕ್ ಕಂಪನಿ ನಡೆಸಿತ್ತು.
ಸೆನ್ಸ್ಹಾಕ್ ಕಂಪನಿಯನ್ನು ರಿಲಯನ್ಸ್ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಪ್ರಕ್ರಿಯೆಗೆ ಇನ್ನೂ ಕೆಲ ತಿಂಗಳು ಬೇಕಾಗಬಹುದು. ಎರಡೂ ದೇಶಗಳ ಹಲವು ನಿಯಮಗಳು ಹಾಗೂ ಶಿಷ್ಟಾಚಾರಗಳನ್ನು ಎರಡೂ ಕಂಪನಿಗಳು ಪೂರೈಸಬೇಕಾಗಿದೆ. ಬಹುತೇಕ ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಅಂತ್ಯದ ಹೊತ್ತಿಗೆ ಈ ವಹಿವಾಟು ಪೂರ್ಣಗೊಳ್ಳುವ ನಿರೀಕ್ಷೆಯಿದೆ.
‘ಸೆನ್ಸ್ಹಾಕ್ ಕಂಪನಿಯು ಸೋಲಾರ್ ಯೋಜನೆಗಳನ್ನು ರೂಪಿಸಲು, ಸ್ಥಾಪಿಸಲು ಮತ್ತು ಸೌರವಿದ್ಯುತ್ ಉತ್ಪಾದಿಸಲು ನೆರವಾಗುತ್ತದೆ. ಸೌರಶಕ್ತಿಯು ಉತ್ಪಾದನೆ ಮತ್ತು ಸರಬರಾಜನ್ನು ಸ್ವಯಂಚಾಲಿಕಗೊಳಿಸಲು ಹಲವು ಟೂಲ್ಗಳನ್ನು ಸೆನ್ಸ್ಹಾಕ್ ಒದಗಿಸುತ್ತದೆ’ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತ ಸರ್ಕಾರಕ್ಕೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ.
‘ಸೌರ ವಿದ್ಯುತ್ ಯೋಜನೆಗಳ ಗ್ರಾಹಕರಿಗೆ ನೆರವಾಗಲು ಸೆನ್ಸ್ಹಾಕ್ ಒದಗಿಸುವ ಸೇವೆಗಳೂ ಸೇರಿದಂತೆ ವಿವಿಧ ರೀತಿಯ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಮ್ಮ ಕುಟುಂಬಕ್ಕೆ ಸೆನ್ಸ್ಹಾಕ್ನ ಪ್ರತಿಭಾವಂತ ತಂಢವನ್ನು ಸ್ವಾಗತಿಸುತ್ತೇವೆ. ಹಸಿರು ಇಂಧನ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ರಿಲಯನ್ಸ್ ಇಂಡಸ್ಟ್ರೀಸ್ ಬದ್ಧವಾಗಿದೆ. 2030ರ ಹೊತ್ತಿಗೆ 100 ಗಿಗಾವಾಟ್ನಷ್ಟು ಸೌರವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ’ ಎಂದು ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ತಿಳಿಸಿದ್ದಾರೆ.
‘ಮುಂದಿನ ದಿನಗಳಲ್ಲಿ ಸೌರವಿದ್ಯುತ್ ಉತ್ಪಾದನಾ ವೆಚ್ಚ ತಗ್ಗಿಸಲು ಸೆನ್ಸ್ಹಾಕ್ನೊಂದಿಗಿನ ಸಹಯೋಗದ ಕೆಲಸವು ನೆರವಾಗಲಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಪಡೆಯಲು ಸೌರಶಕ್ತಿಯೇ ಮೊದಲ ಆಯ್ಕೆಯನ್ನಾಗಿಸುವುದು ನಮ್ಮ ಮುಖ್ಯ ಉದ್ದೇಶವಾಗಲಿದೆ. ಇದು ಹಲವು ಸಾಧ್ಯತೆಗಳಿರುವ ಪ್ರಬಲ ಕ್ಷೇತ್ರವಾಗಿದೆ. ನನಗೆ ಈ ಕ್ಷೇತ್ರದ ಬೆಳವಣಿಗೆಯ ಬಗ್ಗೆ ವಿಶ್ವಾಸವಿದೆ’ ಎಂದು ಅವರು ಹೇಳಿದ್ದಾರೆ.
ಸೆನ್ಸ್ಹಾಕ್ ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಸ್ವರೂಪ್ ಮಾವನೂರ್ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ‘ಮುಂದಿನ ದಿನಗಳಲ್ಲಿ ರಿಲಯನ್ಸ್ ಕಂಪನಿಯೊಂದಿಗೆ ಹೊಸ ಎತ್ತರವನ್ನು ನಾವು ಮುಟ್ಟುತ್ತೇವೆ’ ಎಂದು ಅವರು ವಿಶ್ವಾಸದ ಮಾತು ಆಡಿದ್ದಾರೆ.