Wikipedia Edit Policy: ವಿಕಿಪಿಡಿಯಾ ಲೇಖನವನ್ನು ಯಾರು ಬೇಕಾದರೂ ತಿದ್ದಬಹುದೇ? ಇಲ್ಲಿದೆ ನಿಯಮಗಳ ವಿವರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 07, 2022 | 5:47 AM

ವಿಕಿಪಿಡಿಯಾ ತನ್ನ ವಿಶ್ವಾಸಾರ್ಹತೆ ಕಾಪಾಡಿಕೊಳ್ಳಲು ಅನುಸರಿಸುತ್ತಿರುವ ಶಿಷ್ಟಾಚಾರಗಳು ಸಾಕಾಗುತ್ತದೆಯೇ ಎಂಬ ಪ್ರಶ್ನೆಯನ್ನೂ ಅರ್ಷದೀಪ್ ಸಿಂಗ್ ಪ್ರಕರಣ ಹುಟ್ಟುಹಾಕಿದೆ.

Wikipedia Edit Policy: ವಿಕಿಪಿಡಿಯಾ ಲೇಖನವನ್ನು ಯಾರು ಬೇಕಾದರೂ ತಿದ್ದಬಹುದೇ? ಇಲ್ಲಿದೆ ನಿಯಮಗಳ ವಿವರ
ವಿಕಿಪಿಡಿಯ ಎಂಬ್ಲೆಮ್
Follow us on

ಕ್ರಿಕೆಟ್ ಆಟಗಾರ ಅರ್ಷದೀಪ್ ಸಿಂಗ್​ ವಿಕಿಪಿಡಿಯಾ ಪುಟವನ್ನು ಬೇಕಾಬಿಟ್ಟಿಯಾಗಿ ಎಡಿಟ್ ಮಾಡಿ ತಪ್ಪು ಮಾಹಿತಿಯನ್ನು ತುಂಬಲಾಗಿತ್ತು. ಈ ಬೆಳವಣಿಗೆಯು ವಿಕಿಪಿಡಿಯಾದ ನಿರ್ದಿಷ್ಟ ಪುಟವನ್ನು ಯಾರು ಬೇಕಾದರೂ, ಹೇಗೆ ಬೇಕಾದರೂ ಎಡಿಟ್ ಮಾಡಬಹುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಟೆಲಿಕಾಂ ಸಚಿವಾಲಯವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದ ನಂತರ ಈ ಬೆಳವಣಿಗೆ ಗಂಭೀರ ಸ್ವರೂಪ ಪಡೆಯಿತು. ‘ಭಾರತದಲ್ಲಿ ಕಾರ್ಯನಿರ್ವಹಿಸುವ ಯಾವುದೇ ವೇದಿಕೆ (intermediary) ಇಂಥ ತಪ್ಪು ಮಾಹಿತಿ ಪ್ರಕಟವಾಗಲು ಅವಕಾಶ ಕೊಡುವಂತಿಲ್ಲ’ ಎಂದು ಕೇಂದ್ರ ಸರ್ಕಾರವು ಎಚ್ಚರಿಸಿತು.

ಏಷ್ಯಾ ಕಪ್ ಫೈನಲ್ಸ್​ನಲ್ಲಿ ಅರ್ಷದೀಪ್ ಸಿಂಘ್ ಅತಿಮುಖ್ಯ ಕ್ಯಾಚ್ ಒಂದನ್ನು ಕೈಬಿಟ್ಟಿದ್ದರು. ಭಾರತದ ಸೋಲಿಗೆ ಇದು ಮುಖ್ಯಕಾರಣವಾಗಿತ್ತು. ಈ ಬೆಳವಣಿಗೆಯ ನಂತರ ಅರ್ಷದೀಪ್ ಅವರ ವಿಕಿಪಿಡಿಯಾ ಪುಟದಲ್ಲಿ ಇಂಡಿಯಾ ಜಾಗದಲ್ಲಿ ಖಾಲಿಸ್ತಾನ್ ಎಂಬ ಪದವನ್ನು ಅನಾಮಿಕನೊಬ್ಬ ಅಪ್​ಡೇಟ್ ಮಾಡಿದ್ದ. ನಂತರ ಮತ್ತೊಬ್ಬರ ಎಡಿಟರ್ ಈ ಪುಟವನ್ನು ಸರಿಪಡಿಸಿದ್ದರು. ಅರ್ಷದೀಪ್ ಅವರನ್ನು ವ್ಯಾಪಕವಾಗಿ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಟ್ರೋಲ್ ಮಾಡಲಾಗಿತ್ತು. ಅರ್ಷದೀಪ್​ ವಿಕಿಪಿಡಿಯಾ ಪುಟದಲ್ಲಿ ಲಭ್ಯವಾದ ಮಾಹಿತಿ ಪ್ರಕಾರ ಈ ಬದಲಾವಣೆಗಳನ್ನು ಮಾಡಿದ ವಿಕಿಪಿಡಿಯಾ ಬಳಕೆದಾರ ನೋಂದಾಯಿಸಿಕೊಂಡಿಲ್ಲ. ಆತನ ಐಪಿ ಅಡ್ರೆಸ್ 39.41.171.125 ಆಗಿತ್ತು. ಈ ಐಪಿ ಅಡ್ರೆಸ್ ಟ್ರ್ಯಾಕ್ ಮಾಡಿದಾಗ ಅದು ‘ಪಾಕಿಸ್ತಾನ್ ಟೆಲಿಕಮ್ಯುನಿಕೇಶನ್ ಕಂಪನಿ ಲಿಮಿಟೆಡ್​’ಗೆ ಅಲಾಟ್​ ಆಗಿದ್ದ ಐಪಿ ಎಂದು ತಿಳಿದುಬಂತು.

ಈ ಬೆಳವಣಿಗೆಯು ವಿಕಿಪಿಡಿಯಾ ಹೇಗೆ ಕೆಲಸ ಮಾಡುತ್ತದೆ? ವಿಕಿಪಿಡಿಯಾದಲ್ಲಿ ಎಡಿಟ್ ಮಾಡಲು ಏನು ಮಾಡಬೇಕು ಎಂಬ ಬಗ್ಗೆ ಎಲ್ಲರ ಗಮನ ಸೆಳೆದಿದೆ. ಈ ಬಗ್ಗೆ ನೀವು ತಿಳಿಯಲು ಇಚ್ಛಿಸುವ ಅತಿಮುಖ್ಯ ಮಾಹಿತಿ ಇದು.

ವಿಕಿಪಿಡಿಯಾ ಲೇಖನಗಳನ್ನು ಯಾರು ಎಡಿಟ್ ಮಾಡಬಹುದು?

ವಿಕಿಪಿಡಿಯಾ ಲೇಖನಗಳನ್ನು ಯಾರು ಬೇಕಾದರೂ ಎಡಿಟ್ ಬಟನ್ ಕ್ಲಿಕ್ ಮಾಡಿ ಎಡಿಟ್ ಮಾಡಬಹುದು. ಪ್ರತಿ ಸಬ್​ಹೆಡ್​ಗಳ ಪಕ್ಕದಲ್ಲಿ ಎಡಿಟ್ ಬಟನ್ ಇರುತ್ತದೆ. ಈ ಬದಲಾವಣೆಗಳನ್ನು ಮಾಡಲು ಯಾರಿಗೂ ವಿಕಿಪಿಡಿಯಾ ಅಕೌಂಟ್​ ಸಹ ಬೇಕಿಲ್ಲ. ‘ಯಾರು ಬೇಕಾದರೂ ಈಗಾಗಲೇ ಅಸ್ತಿತ್ವದಲ್ಲಿರುವ ಲೇಖನದಲ್ಲಿ ಬದಲಾವಣೆ ತರಬಹುದು ಅಥವಾ ಹೊಸದನ್ನು ಹಾಕಬಹುದು. ವಿಕಿಪಿಡಿಯಾಕ್ಕೆ ಸ್ವಪ್ರೇರಣೆಯಿಂದ ಕೆಲಸ ಮಾಡಲು ಇಚ್ಛಿಸುವ ಸ್ವಯಂಸೇವಕರಿಗೆ ಔಪಚಾರಿಕ ತರಬೇತಿಯೂ ಬೇಕಿಲ್ಲ. ವಿಕಿಪಿಡಿಯಾದಲ್ಲಿ ಲೇಖನವನ್ನು ಕ್ರಿಯೇಟ್ ಮಾಡುವವರು ಮತ್ತು ಎಡಿಟ್ ಮಾಡುವವರು ಹಲವು ದೇಶಗಳಿಗೆ ಸೇರಿದವರಾಗಿರುತ್ತಾರೆ. ಇದಕ್ಕಿರಬೇಕಾದ ಒಂದೇ ಗುಣವೆಂದರೆ ಸಹಾಯ ಮಾಡುವ ಆಸಕ್ತಿ ಮಾತ್ರ’ ಎಂದು ವಿಕಿಪಿಡಿಯಾದ ಪುಟ ಹೇಳುತ್ತದೆ.

ಹೊಸದಾಗಿ ಮಾಹಿತಿ ಸೇರ್ಪಡೆಯಾದಾಗ ಯಾರಾದರೂ ಆ ಪುಟವನ್ನು ಪರಿಶೀಲಿಸುತ್ತಾರೆಯೇ?

ಯಾವುದೇ ಮಾಹಿತಿ ಹೊಸದಾಗಿ ಸೇರ್ಪಡೆಯಾದಾಗ ಅದು ಅಧಿಕೃತ ಎಂದು ಖಾತ್ರಿಪಡಿಸಿಕೊಳ್ಳಲು ವಿಕಿಪಿಡಿಯಾ ಕೆಲ ಶಿಷ್ಟಾಚಾರಗಳನ್ನು ಅನುಸರಿಸುತ್ತದೆ ಎಂದು ವಿಕಿಪಿಡಿಯಾದ ವೆಬ್​ಸೈಟ್​ ಹೇಳುತ್ತದೆ. ಸಂಪಾದಕರು ಯಾವ ಪುಟದಲ್ಲಿ ಏನಾಗುತ್ತಿದೆ? ಜನರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ? ಸಮಸ್ಯೆಗಳಿರುವ ಲೇಖನಗಳು ಇವೆಯೇ ಎಂಬುದನ್ನು ಪರಿಶೀಲಿಸುತ್ತಿರುತ್ತಾರೆ. ತಮ್ಮ ಬಳಗದಲ್ಲಿ ಇಂಥ ವಿದ್ಯಮಾನಗಳನ್ನು ಚರ್ಚಿಸಿ, ಅಗತ್ಯವಿದ್ದಾಗ ಬದಲಾವಣೆ ಮಾಡುತ್ತಾರೆ ಎಂದು ವಿಕಿಪಿಡಿಯಾ ಹೇಳುತ್ತದೆ. ಬದಲಾವಣೆ ಮಾಡಿದ ಕ್ರಮ ಸರಿಯಿಲ್ಲ ಎಂದು ಸಂಪಾದಕರಿಗೆ ಅನ್ನಿಸಿದರೆ ಅದನ್ನು ವೆಬ್​ಸೈಟ್​ನಿಂದ ತೆಗೆದುಹಾಕಬಹುದು. ಅಗತ್ಯವೆನಿಸಿದರೆ ಹಳೆಯ ಆವೃತ್ತಿಯನ್ನೇ ಉಳಿಸಬಹುದು ಎನ್ನುತ್ತದೆ ವಿಕಿಪಿಡಿಯಾ.

ಅರ್ಷದೀಪ್ ಪ್ರಕರಣದಲ್ಲಿಯೂ ಇದೇ ಆಯಿತು. ಸಮಸ್ಯೆಯಿದೆ ಎಂದು ಕೆಲವರು ಪ್ರಸ್ತಾಪಿಸಿದಾಗ, ವಿಕಿಪಿಡಿಯಾ ಎಡಿಟ್ ಆದ ಆವೃತ್ತಿಯನ್ನು ತೆಗೆದುಹಾಕಿ, ಹಳೆಯ ಲೇಖನವನ್ನು ಮತ್ತೆ ಪ್ರಕಟಿಸಿತು.

ತಪ್ಪು ಮಾಹಿತಿ ಹಾಕಿದವರ ವಿರುದ್ಧ ಕ್ರಮ ತೆಗೆದುಕೊಂಡರೇ?

ವಿಕಿಪಿಡಿಯಾ ವೆಬ್​ಸೈಟ್ ನಿಯಮಗಳ ಪ್ರಕಾರ, ಒಂದು ವೇಳೆ ಬಳಕೆದಾರ ತಪ್ಪಾಗಿ ನಡೆದುಕೊಳ್ಳುತ್ತಿದ್ದಾನೆ ಅಥವಾ ತಪ್ಪು ಮಾಹಿತಿಯನ್ನು ಪದೇಪದೆ ಪ್ರಕಟಿಸುತ್ತಿದ್ದಾನೆ ಎಂದು ತಿಳಿದುಬಂದರೆ, ಅಂಥವರ ಅಕೌಂಟ್ ಅಮಾನತು ಮಾಡಬಹುದು. ಅಂಥವರು ಮತ್ತೊಮ್ಮೆ ಅದೇ ಐಪಿ ವಿಳಾಸದಿಂದ ಮತ್ತೊಂದು ಅಕೌಂಟ್ ಕ್ರಿಯೇಟ್ ಮಾಡಲು ಅಗುವುದಿಲ್ಲ. ಪದೇಪದೆ ಯಾವುದಾದರೂ ಪುಟದಲ್ಲಿ ಅನಗತ್ಯ ಚಟುವಟಿಕೆ ಕಂಡು ಬಂದರೆ ಅಂಥ ಪುಟಗಳಿಗೆ ಎಡಿಟ್​ ಆಪ್ಷನ್ ನಿರ್ಬಂಧಿಸಲಾಗುತ್ತದೆ.

ಇಷ್ಟು ಸಾಕೆ?

ವಿಕಿಪಿಡಿಯಾ ತನ್ನ ವಿಶ್ವಾಸಾರ್ಹತೆ ಕಾಪಾಡಿಕೊಳ್ಳಲು ಅನುಸರಿಸುತ್ತಿರುವ ಶಿಷ್ಟಾಚಾರಗಳು ಸಾಕಾಗುತ್ತದೆಯೇ ಎಂಬ ಪ್ರಶ್ನೆಯನ್ನೂ ಅರ್ಷದೀಪ್ ಸಿಂಗ್ ಪ್ರಕರಣ ಹುಟ್ಟುಹಾಕಿದೆ. ಈ ಪ್ರಕರಣದ ಬಗ್ಗೆ ವಿಕಿಪಿಡಿಯಾದ ಅಗತ್ಯ ಕ್ರಮ ತೆಗೆದುಕೊಂಡು, ಸಮಸ್ಯೆ ಪರಿಹರಿಸಿತು. ಆದರೆ ಅಷ್ಟು ಹೊತ್ತಿಗೆ ತುಂಬಾ ತಡವಾಗಿತ್ತು. ಅಗಬೇಕಾದ ಹಾನಿ ಆಗಿಹೋಗಿತ್ತು. ಮುಖ್ಯ ದಿನಪತ್ರಿಕೆಯು ಈ ಬಗ್ಗೆ ಸುದ್ದಿ ಪ್ರಕಟಿಸಿದ ನಂತರವಷ್ಟೇ ವಿಕಿಪಿಡಿಯಾ ಅತ್ತ ಗಮನ ಹರಿಸಿತು. ಆದರೆ ಸಂಸ್ಥೆಯ ಕಡೆಯಿಂದ ತೆಗೆದುಕೊಳ್ಳಾದಷ್ಟು ಶಿಸ್ತುಕ್ರಮ ತೆಗೆದುಕೊಳ್ಳಲಿಲ್ಲ.

ನಂತರ ಟೆಲಿಕಾಂ ಸಚಿವಾಲಯ ವಿಕಿಪಿಡಿಯಾ ಪ್ರತಿನಿಧಿಗಳನ್ನು ಕಚೇರಿಗೆ ಕರೆಸಿಕೊಂಡು ಬುದ್ಧಿ ಹೇಳಬೇಕಾಯಿತು. ಸಚಿವ ರಾಜೀವ್ ಚಂದ್ರಶೇಖರ್ ಈ ಕುರಿತು ಪ್ರತಿಕ್ರಿಯಿಸಿ, ‘ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಮಾಧ್ಯಮವು ಇಂಥ ತಪ್ಪು ಮಾಹಿತಿ ಹರಡುವುದನ್ನು ಸಹಿಸಲು ಆಗುವುದಿಲ್ಲ. ಸರ್ಕಾರವು ಸುರಕ್ಷಿತ ಮತ್ತು ವಿಶ್ವಾಸಾರ್ಹ ಇಂಟರ್ನೆಟ್​ ಇರಬೇಕು ಎಂದು ಬಯಸುತ್ತದೆ. ಈ ಆಶಯವನ್ನು ಯಾರೂ ಉಲ್ಲಂಘಿಸಬಾರದು’ ಎಂದು ಹೇಳಿದ್ದರು.