
ನವದೆಹಲಿ, ಆಗಸ್ಟ್ 19: ಭಾರತದಲ್ಲಿ ರೈಲ್ವೆ ಹಳಿಗಳ ಮಧ್ಯೆ ಸೋಲಾರ್ ಪ್ಯಾನಲ್ ಅಳವಡಿಸುವ ಪ್ರಯೋಗ ನಡೆದಿದೆ. ವಾರಾಣಸಿಯಲ್ಲಿ ಬನಾರಸ್ ಲೋಕೋಮೋಟಿವ್ ವರ್ಕ್ಸ್ (ಬಿಎಲ್ಡಬ್ಲ್ಯು) ವಾರಾಣಸಿಯಲ್ಲಿ ರೈಲ್ವೆ ಟ್ರ್ಯಾಕ್ಗಳ ಮಧ್ಯೆ ಸೋಲಾರ್ ಪ್ಯಾನಲ್ ಸಿಸ್ಟಂ ಅಳವಡಿಸಿದೆ. ಭಾರತೀಯ ರೈಲ್ವೇಸ್ (Indian Railways) ಸದ್ಯ 70 ಮೀಟರ್ ಟ್ರ್ಯಾಕ್ನಲ್ಲಿ ಈ ಪ್ರಯೋಗ ನಡೆಸಿದೆ. ಈ 70 ಮೀಟರ್ ದೂರದ ಹಳಿಯಲ್ಲಿ 28 ಸೋಲಾರ್ ಪ್ಯಾನಲ್ಗಳನ್ನು ಅಳವಡಿಸಿದೆ. ಇದರಲ್ಲಿ 15 KWp ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಇರುತ್ತದೆ.
ಭಾರತದಲ್ಲಿ ಇಂಥದ್ದೊಂದು ಪ್ರಯೋಗ ನಡೆದಿರುವುದು ಇದೇ ಮೊದಲು. ಈ ಸೋಲಾರ್ ಪ್ಯಾನಲ್ಗಳನ್ನು ತೆಗೆದು ಮತ್ತು ಹಾಕುವ ರೀತಿಯಲ್ಲಿ ನಿರ್ಮಿಸಲಾಗಿದೆ. ಟ್ರ್ಯಾಕ್ ಮೈಂಟೆನೆನ್ಸ್ ವೇಳೆ ಸೋಲಾರ್ ಪ್ಯಾನಲ್ಗಳನ್ನು ತೆಗೆಯಬಹುದು.
ರೈಲ್ವೆ ಹಳಿಗಳನ್ನು ಸೋಲಾರ್ ವಿದ್ಯುತ್ ಉತ್ಪಾದನೆಗೆ ಬಳಸುವ ಪ್ರಯೋಗ ಈಗೀಗ ನಡೆಯುತ್ತಿದೆ. ಇಟಲಿಯಲ್ಲಿ ಒಂದು ರೈಲು ಮಾರ್ಗದಲ್ಲಿ ಸೋಲಾರ್ ಪ್ಯಾನಲ್ ಹಾಕಲಾಗಿದೆ. ಇದೂ ಕೂಡ ಇನ್ನೂ ಪರೀಕ್ಷಾ ಹಂತದಲ್ಲಿದೆ.
ಇದನ್ನೂ ಓದಿ: ಒಂದು ವರ್ಷ, 3,000 ರೂ, 200 ಟ್ರಿಪ್; ಬಂದಿದೆ ಫಾಸ್ಟ್ಯಾಗ್ ವಾರ್ಷಿಕ ಪಾಸ್; ಪಡೆಯುವ ಕ್ರಮ ತಿಳಿದಿರಿ
ಬ್ರಿಟನ್ ದೇಶದಲ್ಲಿ ರೈಲುಗಳಿಗೆ ಸೌರ ವಿದ್ಯುತ್ ಬಳಸಲಾಗುತ್ತಿದೆಯಾದರೂ ಅದಕ್ಕಾಗಿ ಸೌರಫಲಕಗಳನ್ನು ರೈಲು ಹಳಿಗಳಲ್ಲಿ ಹಾಕಲಾಗಿಲ್ಲ. ಬೇರೆಡೆ ಸೋಲಾರ್ ಫಾರ್ಮ್ಗಳನ್ನು ಮಾಡಿ ಅದರಿಂದ ವಿದ್ಯುತ್ ಪಡೆಯಲಾಗುತ್ತಿದೆ.
ಭಾರತದ ರೀತಿಯಲ್ಲಿ ಸ್ವಿಟ್ಜರ್ಲ್ಯಾಂಡ್ನಲ್ಲಿ 100 ಮೀಟರ್ ರೈಲು ಹಳಿಗಳ ಮಧ್ಯೆ ಸೋಲಾರ್ ಪ್ಯಾನಲ್ಗಳನ್ನು ಪ್ರಯೋಗಾರ್ಥವಾಗಿ ಹಾಕಲಾಗಿದೆ.
ಭಾರತೀಯ ರೈಲ್ವೆ ಸಂಪೂರ್ಣ ಇಂಗಾಲ ಮುಕ್ತ ಆಗಬೇಕು ಎನ್ನುವ ಗುರಿ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಹಳಿಗಳ ಮಧ್ಯೆ ಸೋಲಾರ್ ಪ್ಯಾನಲ್ ಹಾಕುವ ಕಾರ್ಯವು ಮಹತ್ವದ ಹೆಜ್ಜೆ ಎನಿಸಿದೆ.
ಇದನ್ನೂ ಓದಿ: ಜಿಎಸ್ಟಿಯಿಂದ ಹಿಡಿದು ರುಪಾಯಿವರೆಗೆ ಷೇರು ಮಾರುಕಟ್ಟೆಗೆ ಉತ್ಸಾಹ ಹೆಚ್ಚಿಸಿದ ಅಂಶಗಳು
ಈ ರೀತಿ ಹಳಿಗಳ ಮಧ್ಯೆ ಸೋಲಾರ್ ಪ್ಯಾನಲ್ ಅಳವಡಿಸಿದರೆ ಒಂದು ವರ್ಷದಲ್ಲಿ ಒಂದು ಕಿಮೀಗೆ 3.21 ಲಕ್ಷ ಯುನಿಟ್ಗಳಷ್ಟು ವಿದ್ಯುತ್ ಉತ್ಪಾದನೆ ಸಾಧ್ಯ ಎಂದು ಅಂದಾಜಿಸಲಾಗಿದೆ. ಭಾರತೀಯ ರೈಲ್ವೇಸ್ ದೇಶಾದ್ಯಂತ 1.2 ಲಕ್ಷ ಕಿಮೀ ರೈಲು ಜಾಲ ಹೊಂದಿದೆ. ಇಲ್ಲೆಲ್ಲಾ ಸೋಲಾರ್ ಪ್ಯಾನಲ್ ಅಳವಡಿಸಿದರೆ ವರ್ಷದಲ್ಲಿ 38 ಟಿಡಬ್ಲ್ಯುಎಚ್ ಸೋಲಾರ್ ಪವರ್ ಪಡೆಯಲು ಸಾಧ್ಯ. ಭಾರತೀಯ ರೈಲ್ವೆಗೆ ಅಗತ್ಯವಾದ ವಿದ್ಯುತ್ಗಿಂತ ಕನಿಷ್ಠ ಎರಡು ಪಟ್ಟು ಹೆಚ್ಚು ವಿದ್ಯುತ್ ಅನ್ನು ತಯಾರಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ರೈಲ್ವೇಸ್ ಪೂರ್ಣವಾಗಿ ವಿದ್ಯುತ್ ಸ್ವಾವಲಂಬನೆ ಸಾಧಿಸಲು ಅವಕಾಶ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ