ಅಮೆರಿಕವೇ ಗತಿ ಅಲ್ಲ… ಮೀನು ರಫ್ತಿಗೆ ಜಪಾನ್, ಚೀನಾ, ಬ್ರಿಟನ್ ಮಾರುಕಟ್ಟೆಗಳತ್ತ ಭಾರತ
India finding alternative markets for its seafood exports: ಅಮೆರಿಕದ ಟ್ಯಾರಿಫ್ಗಳಿಂದಾಗಿ ಹಿನ್ನಡೆ ಕಂಡ ಭಾರತದ ಹಲವು ಉದ್ಯಮಗಳಲ್ಲಿ ಸಮುದ್ರಾಹಾರ ಮಾರುಕಟ್ಟೆಯೂ ಒಂದು. ಭಾರತದ ಶೇ. 40ರಷ್ಟು ಸೀಗಡಿ ರಫ್ತು ಅಮೆರಿಕಕ್ಕೆ ಹೋಗುತ್ತಿತ್ತು. ಈಗ ಅದು ತಪ್ಪಿದೆ. ಅದಕ್ಕೆ ಪರ್ಯಾಯವಾಗಿ ಬ್ರಿಟನ್, ಯೂರೋಪಿಯನ್ ಒಕ್ಕೂಟ, ಜಪಾನ್, ಚೀನಾ ಮೊದಲಾದ ದೇಶಗಳತ್ತ ಭಾರತ ಗಮನ ಹೆಚ್ಚಿಸುತ್ತಿದೆ.

ನವದೆಹಲಿ, ಆಗಸ್ಟ್ 19: ಅಮೆರಿಕಕ್ಕೆ ಸಾಕಷ್ಟು ಸಮುದ್ರ ಆಹಾರ ವಸ್ತುಗಳನ್ನು ರಫ್ತು (seafood exports) ಮಾಡುತ್ತಿದ್ದ ಭಾರತ ಈಗ ಶೇ. 50 ಟ್ಯಾರಿಫ್ ಕಾರಣಕ್ಕೆ ಪರ್ಯಾಯ ಮಾರ್ಗಗಳತ್ತ ಹೆಜ್ಜೆ ಹಾಕುತ್ತಿದೆ. ಜಪಾನ್, ಚೀನಾ (china), ಬ್ರಿಟನ್ ಮತ್ತು ಯೂರೋಪಿಯನ್ ಒಕ್ಕೂಟಗಳತ್ತ ಹೆಚ್ಚು ಗಮನ ಹರಿಸಲು ನಿರ್ಧರಿಸಿದೆ. ಕೇಂದ್ರ ಮೀನುಗಾರಿಕೆ ಖಾತೆ ರಾಜ್ಯ ಸಚಿವ ಜಾರ್ಜ್ ಕುರಿಯನ್ (George Kurien) ಅವರು ರಾಜ್ಯಸಭೆಗೆ ನೀಡಿದ ಮಾಹಿತಿ ಪ್ರಕಾರ ಭಾರತವು ಐರೋಪ್ಯ ಒಕ್ಕೂಟದ ದೇಶಗಳು, ಬ್ರಿಟನ್, ಜಪಾನ್ ಮೊದಲಾದ ದೇಶಗಳಿಗೆ ಹೆಚ್ಚಿನ ಸಮುದ್ರ ಆಹಾರಗಳನ್ನು ಸರಬರಾಜು ಮಾಡುವ ಅವಕಾಶ ಸೃಷ್ಟಿಸಲು ಯತ್ನಿಸುತ್ತಿದೆ.
‘ನಾವು ವಿವಿಧ ಮಾರ್ಗಗಳನ್ನು ಅವಲೋಕಿಸುತ್ತಿದ್ದೇವೆ. ಜಪಾನ್, ಚೀನಾ, ಬ್ರಿಟನ್ನಂತಹ ದೇಶಗಳು ಭಾರತದಿಂದ ಹೆಚ್ಚಿನ ಸಮುದ್ರ ಆಹಾರ ವಸ್ತುಗಳನ್ನು ಪಡೆಯಲು ಸಿದ್ಧವಿವೆ. ಈ ದೇಶಗಳೊಂದಿಗೆ ಈಗಾಗಲೇ ನಾವು ಟ್ರೇಡಿಂಗ್ ಮಾಡುತ್ತಿದ್ದೇವೆ. ಆದರೆ, ಮತ್ತಷ್ಟು ರಫ್ತು ಹೆಚ್ಚಿಸುವ ಅವಕಾಶ ಇದೆ’ ಎಂದು ರಾಜ್ಯಸಭೆಯಲ್ಲಿ ಸಚಿವ ಕುರಿಯನ್ ತಿಳಿಸಿದ್ದಾರೆ.
ಕೇರಳ, ಆಂಧ್ರ ಮೊದಲಾದ ಕರಾವಳಿ ರಾಜ್ಯಗಳ ಆರ್ಥಿಕತೆಯಲ್ಲಿ ಸಮುದ್ರ ಆಹಾರ ವಸ್ತುಗಳ ರಫ್ತು ಪ್ರಮುಖ ಪಾತ್ರ ವಹಿಸುತ್ತದೆ. ಶ್ರಿಂಪ್, ಪ್ರಾನ್ಸ್ (ಸಿಗಡಿ- Prawns), ಸ್ಕ್ವಿಡ್ಸ್ ಇತ್ಯಾದಿ ಮೀನುಗಳನ್ನು ಭಾರತ ಹೆಚ್ಚಾಗಿ ರಫ್ತು ಮಾಡುತ್ತದೆ. ಅದರಲ್ಲೂ ಸೀಗಡಿ ಮೀನುಗಳು ಅತ್ಯಧಿಕ ರಫ್ತಾಗುತ್ತವೆ.
2023-24ರ ಹಣಕಾಸು ವರ್ಷದಲ್ಲಿ ಭಾರತವು 17.8 ಮಿಲಿಯನ್ ಟನ್ಗಳಷ್ಟು ಸಮುದ್ರಾಹಾರ ವಸ್ತುಗಳನ್ನು ರಫ್ತು ಮಾಡಿದೆ. ಇವುಗಳ ಒಟ್ಟು ರಫ್ತು ಮೌಲ್ಯ 7.38 ಬಿಲಿಯನ್ ಡಾಲರ್. ಇವುಗಳ ರಫ್ತನ್ನು 14 ಬಿಲಿಯನ್ ಡಾಲರ್ಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ನಿಗದಿ ಮಾಡಿಕೊಂಡಿದೆ. ಭಾರತದ ಈ ರಫ್ತಿನಲ್ಲಿ ಸೀಗಡಿ ಮೀನುಗಳ ಪ್ರಮಾಣ ಶೇ. 70ರಷ್ಟಿದೆ.
ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ ರೈಲು ಹಳಿ ಮೂಲಕ ಸೌರ ವಿದ್ಯುತ್ ಉತ್ಪಾದನೆ; ಪೂರ್ಣ ನವೀಕರಣ ಇಂಧನದತ್ತ ರೈಲ್ವೇಸ್
ಇನ್ನು, ಭಾರತದಿಂದ ರಫ್ತಾಗುವ ಸೀಗಡಿ ಮೀನುಗಳಲ್ಲಿ ಶೇ. 40ರಷ್ಟವು ಅಮೆರಿಕಕ್ಕೆ ಹೋಗುತ್ತಿದ್ದುವು. ಈಗ ಶೇ. 50ರ ಟ್ಯಾರಿಫ್ ಕಾರಣದಿಂದ ಅಮೆರಿಕದ ಬಾಗಿಲು ಬಹುತೇಕ ಬಂದ್ ಆಗಿದೆ. ಈ ಕಾರಣಕ್ಕೆ ಜಪಾನ್, ಚೀನಾ ಮತ್ತು ಬ್ರಿಟನ್ ದೇಶಗಳತ್ತ ಭಾರತ ಎಡತಾಕುತ್ತಿದೆ.
‘ಈಗ ಅಮೆರಿಕದ ಮೇಲಿನ ಅವಲಂಬನೆ ಕಡಿಮೆ ಮಾಡಿ ಟ್ರೇಡಿಂಗ್ ವಿಸ್ತರಿಸುವ ಸಮಯ ಬಂದಿದೆ. ಟ್ಯಾರಿಫ್ ಆಘಾತದಿಂದ ನೋವಾಗುತ್ತಿದೆಯಾದರೂ ಬೇರೆಡೆ ಗಟ್ಟಿ ಹೆಜ್ಜೆ ಊರಲು ಅವಕಾಶ ಮಾಡಿಕೊಡುತ್ತದೆ’ ಎಂದು ಸರ್ಕಾರದ ಮೂಲವೊಂದು ಹೇಳಿದ್ದಾರೆಂದು ನ್ಯೂಸ್18 ವರದಿ ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




