Repo Rate Hike: ದುಬಾರಿಯಾದ ಗೃಹ, ಕಾರು ಸಾಲಗಳು; ಮಾಸಿಕ ಇಎಂಐ ಎಷ್ಟು ಹೆಚ್ಚಾಗಲಿದೆ ಎಂದು ಹೀಗೆ ತಿಳಿದುಕೊಳ್ಳಿ
ರೆಪೊ ದರ ಹೆಚ್ಚಳದ ನಂತರ ಗೃಹ ಸಾಲ, ಕಾರು ಸಾಲ ಇತ್ಯಾದಿಗಳು ದುಬಾರಿಯಾಗಿವೆ. ಸಾಲದ ಮೇಲಿನ ಇಎಂಐ ಹೆಚ್ಚಳವಾಗಿದೆ. ಹಾಗಿದ್ದರೆ ನೀವು ಬ್ಯಾಂಕ್ನಲ್ಲಿ ಸಾಲವನ್ನು ಹೊಂದಿದ್ದರೆ ನಿಮ್ಮ ಸಾಲದ ಇಎಂಐ ಎಷ್ಟು ಆಗಿರಬಹುದು? ಉಪಯುಕ್ತ ಮಾಹಿತಿ ಇಲ್ಲಿದೆ.
ಹಣದುಬ್ಬರ ನಿಯಂತ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India- RBI) ಶುಕ್ರವಾರ (ಸೆ.30) ರೆಪೊ ದರಗಳನ್ನು 50 ಮೂಲಾಂಶಗಳಷ್ಟು (ಶೇ 0.5) ಹೆಚ್ಚಿಸಿದೆ. ಇದರಿಂದಾಗಿ ರೆಪೊ ದರದ ಪ್ರಮಾಣವು ಶೇ 5.90ಕ್ಕೆ ಮುಟ್ಟಿದೆ. ಸಾಲದ ಮೇಲಿನ ಇಎಂಐ ಹೆಚ್ಚಳವಾಗುವ ಮೂಲಕ ಗೃಹ ಸಾಲ, ಕಾರು ಸಾಲ ಇತ್ಯಾದಿಗಳು ದುಬಾರಿಯಾಗಿವೆ. ನೀವು ಬ್ಯಾಂಕ್ನಲ್ಲಿ ಸಾಲವನ್ನು ಹೊಂದಿದ್ದರೆ “ನಮ್ಮ ಸಾಲದ ಇಎಂಐ ಎಷ್ಟು ಆಗಿರಬಹುದು?” ಎಂಬ ಪ್ರಶ್ನೆ ಉದ್ಭವಿಸಬಹುದು. ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ಇದಕ್ಕೂ ಮುನ್ನ ನೀವು ಗಮನಿಸಬೇಕಾದ ಅಂಶವೆಂದರೆ, ರೆಪೊ ದರವನ್ನು ಹೆಚ್ಚಿಸಿದ ಅಥವಾ ಕಡಿಮೆ ಮಾಡಿದ ನಂತರವೂ ಸ್ಥಿರ ದರದ ಸಾಲಗಳ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಆದರೆ ವೇರಿಯಬಲ್ ದರದ ಸಾಲಗಳಲ್ಲಿ ರೆಪೊ ದರದಲ್ಲಿನ ಬದಲಾವಣೆಯೊಂದಿಗೆ ನಿಮ್ಮ ಸಾಲದ ಇಎಂಐ ಕೂಡ ಬದಲಾಗುತ್ತದೆ.
ಪ್ರಸ್ತುತ ನೀವು 20 ವರ್ಷಗಳ ಸಾಲದ ಅವಧಿಯೊಂದಿಗೆ 20 ಲಕ್ಷ ಗೃಹ ಸಾಲವನ್ನು ತೆಗೆದುಕೊಂಡಿದ್ದೀರಿ ಎಂದು ಭಾವಿಸೋಣ. ಈಗ ನೀವು ಶೇಕಡಾ 8 ರ ಬಡ್ಡಿದರದಲ್ಲಿ ಒಂದು ತಿಂಗಳಲ್ಲಿ 16,729 ರೂಪಾಯಿಗಳ ಇಎಂಐ ಪಾವತಿಸಬೇಕು. ಈ ಹಿಂದೆ, ಶೇ 7.5 ರ ಬಡ್ಡಿ ದರದ ಪ್ರಕಾರ, ನಿಮ್ಮ ಮಾಸಿಕ ಇಎಂಐ 16,112 ರೂ. ಆಗಿತ್ತು. ಅಂದರೆ ರೆಪೊ ದರ ಹೆಚ್ಚಳದಿಂದಾಗಿ ನಿಮ್ಮ ಗೃಹ ಸಾಲದ ಮಾಸಿಕ ಇಎಂಐ 617 ರೂ.ಗಳಷ್ಟು ಹೆಚ್ಚಾದಂತಾಯ್ತು. ನೀವು 20 ವರ್ಷಗಳ ಅವಧಿಯೊಂದಿಗೆ 30 ಲಕ್ಷದ ಗೃಹ ಸಾಲವನ್ನು ತೆಗೆದುಕೊಂಡಿದ್ದರೆ ಬಡ್ಡಿ ದರದ ಹೆಚ್ಚಳದ ನಂತರ ನಿಮ್ಮ ಮಾಸಿಕ EMI 925 ರೂ.ಗಳಷ್ಟು ಹೆಚ್ಚಾಗುತ್ತದೆ.
ರೆಪೊ ದರವು RBI ಇತರ ಬ್ಯಾಂಕ್‌ಗಳಿಗೆ ಸಾಲವನ್ನು ನೀಡುವ ದರವಾಗಿದೆ. ರೆಪೊ ದರ ಹೆಚ್ಚಳದಿಂದ ಬ್ಯಾಂಕ್‌ಗಳು ಸಾಲ ಪಡೆಯುವ ಆಸಕ್ತಿ ಹೆಚ್ಚಲಿದ್ದು, ಅದನ್ನು ಗ್ರಾಹಕರಿಗೂ ವರ್ಗಾಯಿಸಲಿದೆ. ರೆಪೋ ದರವನ್ನು ಹೆಚ್ಚಿಸಿದ ನಂತರ ತನ್ನ ಸಾಲದ ಇಎಂಐ ಅನ್ನು ಯಾವಾಗ ಮತ್ತು ಎಷ್ಟು ಹೆಚ್ಚಿಸುವುದು ಎಂಬುದು ಬ್ಯಾಂಕಿನ ನಿರ್ಧಾರವಾಗಿದೆ. ಅದಾಗ್ಯೂ ರೆಪೋ ದರ ಏರಿಕೆಯ ನಂತರ ನಿಮ್ಮ EMI ನಲ್ಲಿನ ಹೆಚ್ಚಳವು ನೀವು ಆಯ್ಕೆ ಮಾಡಿದ ಬಡ್ಡಿ ದರದ ಪ್ರಕಾರವನ್ನು ನಿರ್ಧರಿಸುತ್ತದೆ.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:04 pm, Fri, 30 September 22