
ನವದೆಹಲಿ, ಜೂನ್ 12: ಭಾರತದಲ್ಲಿ ಹಣದುಬ್ಬರದ ಸತತ ಇಳಿಕೆ ಮುಂದುವರಿದಿದೆ. ರೀಟೇಲ್ ಹಣದುಬ್ಬರವು (Retail inflation) ಮೇ ತಿಂಗಳಲ್ಲಿ ಶೇ. 2.82ಕ್ಕೆ ಇಳಿದಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ 34 ಮೂಲಾಂಕಗಳಷ್ಟು ಏರಿಕೆ ತಗ್ಗಿದೆ. ಹಲವು ಆರ್ಥಿಕ ತಜ್ಞರು ನಿರೀಕ್ಷೆ ಮಾಡಿದುದಕ್ಕಿಂತಲೂ ಹೆಚ್ಚು ಇಳಿಕೆ ಆಗಿದೆ. ಕಳೆದ ಆರು ವರ್ಷದಲ್ಲೇ ಇದು ಕನಿಷ್ಠ ಹಣದುಬ್ಬರ ಮಟ್ಟವೆನಿಸಿದೆ. 2019ರ ಫೆಬ್ರುವರಿಯ ಬಳಿಕ ದಾಖಲಾದ ಅತಿ ಕಡಿಮೆ ಹಣದುಬ್ಬರ ಇದಾಗಿದೆ.
ಆಹಾರವಸ್ತುಗಳ ಬೆಲೆ ಕಡಿಮೆ ಆಗಿರುವುದು ಹಣದುಬ್ಬರ ಏರಿಕೆ ತಗ್ಗಲು ಪ್ರಮುಖ ಕಾರಣವಾಗಿದೆ. ಏಪ್ರಿಲ್ನಲ್ಲಿ ಶೇ. 1.78ರಷ್ಟಿದ್ದ ಆಹಾರ ಹಣದುಬ್ಬರ ಮೇ ತಿಂಗಳಲ್ಲಿ ಶೇ. 0.99ರಷ್ಟಿದೆ. ಅಂದರೆ ಬರೋಬ್ಬರಿ 79 ಮೂಲಾಂಕಗಳಷ್ಟು ದರ ಕಡಿಮೆ ಆಗಿದೆ.
ಇದನ್ನೂ ಓದಿ: ಹೊಸ ಕೆವೈಸಿ ನಿಯಮಗಳು ಇಂದಿನಿಂದ; ಅನುಕೂಲಗಳೇನು, ನಿಮ್ಮ ಗಮನಕ್ಕಿರಲಿ
ಐಸಿಆರ್ಎ ಪ್ರಕಾರ ಜೂನ್ ತಿಂಗಳಲ್ಲಿ ಆಹಾರ ವಸ್ತುಗಳ ಬೆಲೆಗಳು ಮತ್ತಷ್ಟು ತಗ್ಗುವ ನಿರೀಕ್ಷೆ ಇದೆ. ಮುಂಗಾರು ಮಳೆ ಮತ್ತು ಬೆಳೆ ಉತ್ತಮವಾಗಿರುವುದರಿಂದ ಈ ಶುಭ ನಿರೀಕ್ಷೆ ಇದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಜೂನ್ ತಿಂಗಳಲ್ಲಿ ಹಣದುಬ್ಬರವು ಶೇ. 2.5ರ ಆಸುಪಾಸಿನಷ್ಟಿರಬಹುದು ಎಂದು ಹೇಳಲಾಗುತ್ತಿದೆ.
2022ರಲ್ಲಿ ಶೇ. 8ರ ಆಸುಪಾಸಿನಲ್ಲಿ ಇದ್ದ ಹಣದುಬ್ಬರ ನಂತರ ಗಣನೀಯವಾಗಿ ಇಳಿದಿದೆ. ಆರ್ಬಿಐ ಹಣದುಬ್ಬರವನ್ನು ಶೇ. 4ಕ್ಕೆ ನಿಲ್ಲಿಸಲು ಗುರಿ ಇಟ್ಟಿದೆ. ಮತ್ತು ಹಣದುಬ್ಬರದ ತಾಳಿಕೆ ಮಿತಿಯನ್ನು ಶೇ. 2ರಿಂದ 6ಕ್ಕೆ ನಿಗದಿ ಮಾಡಿದೆ. ಅಂದರೆ, ಹಣದುಬ್ಬರವು ಶೇ. 2ಕ್ಕಿಂತ ಕೆಳಗಿಳಿಯದಂತೆ ಮತ್ತು ಶೇ. 6ಕ್ಕಿಂತ ಮೇಲೆ ಹೋಗದಂತೆ ನೋಡಿಕೊಳ್ಳುವುದು ಬಹಳ ಆದ್ಯತೆಯ ಸಂಗತಿ.
ಇದನ್ನೂ ಓದಿ: ಯುಪಿಐ ಟ್ರಾನ್ಸಾಕ್ಷನ್ಸ್ಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ ಹಾಕೋದಿಲ್ಲ: ಸರ್ಕಾರ ಸ್ಪಷ್ಟನೆ
ಕಳೆದ ಏಳು ತಿಂಗಳಿಂದ ಹಣದುಬ್ಬರವು ಶೇ. 6ರ ಮಿತಿಯೊಳಗೆಯೇ ಇದೆ. ಕಳೆದ ನಾಲ್ಕು ತಿಂಗಳಿಂದ ಶೇ. 4ಕ್ಕಿಂತಲೂ ಕಡಿಮೆ ಹಣದುಬ್ಬರದ ಸ್ಥಿತಿ ಇದೆ. ಇದು ಆರ್ಬಿಐಗೆ ಬೇರೆ ಪ್ರಯೋಗ ಮಾಡಲು ಸ್ವಾತಂತ್ರ್ಯ ಕಲ್ಪಿಸಿದೆ.
ಈ ಬಾರಿ ನಡೆದ ಆರ್ಬಿಐ ಎಂಪಿಸಿ ಸಭೆಯಲ್ಲಿ ರಿಪೋ ದರವನ್ನು 50 ಮೂಲಾಂಕಗಳಷ್ಟು ಇಳಿಸುವ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ರಿಪೋ ದರ ಶೇ. 6.50 ಇದ್ದದ್ದು ಶೇ. 5.50ಕ್ಕೆ ಇಳಿದಿದೆ. ಹಣದುಬ್ಬರ ಸ್ಥಿತಿ ನಿಯಂತ್ರಣದಲ್ಲಿದ್ದುದರಿಂದಲೇ ಆರ್ಬಿಐ ರಿಪೋ ದರ ಇಳಿಸುವ ಧೈರ್ಯ ತೋರಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ