Crude Oil: ಕಚ್ಛಾ ತೈಲ ಬೆಲೆ ಶೇ. 13ರಷ್ಟು ಏರಿಕೆ; ದುಬಾರಿಯಾಗುತ್ತಾ ಪೆಟ್ರೋಲ್, ಡೀಸಲ್?
Crude oil rates shoot up: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ಬೆಲೆ ಗಣನೀಯವಾಗಿ ಏರಿಕೆ ಆಗಿದೆ. ಡಬ್ಲ್ಯುಟಿಐ ಮತ್ತು ಬ್ರೆಂಟ್ ಕ್ರೂಡ್ನಲ್ಲಿ ಒಂದು ಬ್ಯಾರಲ್ ತೈಲದ ಬೆಲೆ 76 ಡಾಲರ್ ಆಸುಪಾಸಿನಷ್ಟಿದೆ. ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡಿದ ಪರಿಣಾಮವಾಗಿ ಈ ಏರಿಕೆ ಆಗಿದೆ. ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ ತೈಲ ಬೆಲೆ 120 ಡಾಲರ್ವರೆಗೂ ಹೋಗಬಹುದು.

ನವದೆಹಲಿ, ಜೂನ್ 13: ಇರಾನ್ ದೇಶದ ಮೇಲೆ ಇಸ್ರೇಲ್ ಏಕಾಏಕಿ ದಾಳಿ ಮಾಡಿರುವುದು ಜಾಗತಿಕವಾಗಿ ಮಾರುಕಟ್ಟೆಗಳನ್ನು ಆತಂಕಕ್ಕೆ ದೂಡಿದೆ. ಕಚ್ಛಾ ತೈಲ ಬೆಲೆ (crude oil price) ಇಂದು ಶೇ. 13ರಷ್ಟು ಏರಿಕೆ ಆಗಿದೆ. ಒಂದು ಬ್ಯಾರಲ್ ಕಚ್ಛಾ ತೈಲದ ಬೆಲೆ 76 ಡಾಲರ್ ಆಸುಪಾಸಿನಷ್ಟಿದೆ. ಇಸ್ರೇಲ್ ದಾಳಿ ಪರಿಣಾಮವಾಗಿ ಮಧ್ಯಪ್ರಾಚ್ಯ ದೇಶಗಳಿಂದ ತೈಲ ಸರಬರಾಜು ಕಡಿಮೆಗೊಳ್ಳುವ ಸಾಧ್ಯತೆ ಮನಗಂಡು ತೈಲ ಬೆಲೆ ಹೆಚ್ಚಳ ಆಗಿದೆ. ಇದರ ಪರಿಣಾಮವಾಗಿ ಭಾರತವೂ ಒಳಗೊಂಡಂತೆ ಜಾಗತಿಕವಾಗಿ ಪೆಟ್ರೋಲ್ ಬೆಲೆಯೂ (Petrol rates) ಏರಿಕೆ ಆಗುವ ಸಾಧ್ಯತೆ ಇದೆ.
ಯುಎಸ್ ಡಬ್ಲ್ಯುಟಿಐ ಕ್ರೂಡ್ ಒಂದು ಬ್ಯಾರಲ್ಗೆ ಶೇ. 11.38ರಷ್ಟು ಏರಿ 75.82 ಡಾಲರ್ ಮುಟ್ಟಿದೆ. ಬ್ರೆಂಟ್ ಕ್ರೂಡ್ ಇಂಡೆಕ್ಸ್ನಲ್ಲಿ ಒಂದು ಬ್ಯಾರಲ್ ತೈಲದ ಬೆಲೆ 76.48 ಡಾಲರ್ಗೆ ಏರಿದೆ. ಕಳೆದ ಐದಾರು ತಿಂಗಳಲ್ಲಿ ಇದು ಗರಿಷ್ಠ ತೈಲ ಬೆಲೆ ಎನಿಸಿದೆ.
ಇದನ್ನೂ ಓದಿ: ಒಂದು ಬ್ಯಾರಲ್ ಕಚ್ಛಾ ತೈಲದಿಂದ ಪೆಟ್ರೋಲ್, ಡೀಸಲ್ ಸೇರಿ ಏನೆಲ್ಲಾ ತಯಾರಿಸಬಹುದು ಗೊತ್ತಾ?
ಬ್ಯಾರಲ್ಗೆ 120 ಡಾಲರ್ ಮುಟ್ಟುತ್ತಾ ಬೆಲೆ?
ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ವಿವಿಧ ಕಾರ್ಯಾಚರಣೆ ಅಥವಾ ಕ್ರಮಗಳನ್ನು ಕೈಗೊಳ್ಳಬಹುದು. ತಜ್ಞರ ಪ್ರಕಾರ ಇರಾನ್ ನಿಯಂತ್ರಣದಲ್ಲಿರುವ ಹಾರ್ಮುಜ್ ಜಲಮಾರ್ಗವನ್ನು ಬಂದ್ ಮಾಡಬಹುದು. ವಿಶ್ವದ ಶೇ. 25ರಷ್ಟು ತೈಲ ಸರಬರಾಜು ಇಲ್ಲಿಂದ ಸಾಗಿ ಹೋಗುತ್ತದೆ. ಪರ್ಯಾಯ ಮಾರ್ಗದಲ್ಲಿ ತೈಲ ಸಾಗಿಸಲು ಹೆಚ್ಚು ವೆಚ್ಚವಾಗಬಹುದು. ಇದೇ ರೀತಿ ಬಿಕ್ಕಟ್ಟು ಮುಂದುವರಿದರೆ ತೈಲ ಬೆಲೆ ಬ್ಯಾರಲ್ಗೆ 120 ರೂ ಮುಟ್ಟಿದರೂ ಅಚ್ಚರಿ ಇಲ್ಲ. ಅಂದರೆ, ಈಗಿರುವ ಬೆಲೆಗಿಂತ ಶೇ. 85ರಷ್ಟು ಏರಿಕೆ ಆಗುವ ಸಂಭಾವ್ಯತೆ ಇಲ್ಲದಿಲ್ಲ.
ಪರಿಸ್ಥಿತಿ ಇದೇ ರೀತಿ ಇದ್ದಲ್ಲಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ತೀವ್ರವಾಗಿ ಏರಿಕೆ ಆಗುವ ನಿರೀಕ್ಷೆ ಇದೆ.
ಇಸ್ರೇಲ್ ಏಕಾಏಕಿ ದಾಳಿ ಮಾಡಿದ್ದು ಯಾಕೆ?
ತನ್ನ ಮೇಲೆ ಇರಾನ್ ದಾಳಿ ಮಾಡುವ ಸಂಭವ ಇದ್ದರಿಂದ ಮುನ್ನೆಚ್ಚರಿಕೆಯಾಗಿ ತಾನು ತಾಳಿ ಮಾಡಿದ್ದಾಗಿ ಇಸ್ರೇಲ್ ಹೇಳಿದೆ. ಇರಾನ್ನ ಪರಮಾಣು ಸಂಗ್ರಹ ಸ್ಥಳಗಳ ಮೇಲೆ ಇಸ್ರೇಲ್ ದಾಳಿ ಮಾಡಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಚಿನ್ನ ಸಾಕಪ್ಪ ಎನ್ನುತ್ತಿದೆ ಭಾರತ; ಚಿನ್ನ ಇನ್ನೂ ಬೇಕಪ್ಪ ಎನ್ನುತ್ತಿದೆ ಚೀನಾ; ಚೀನೀಯರು ಚಿನ್ನದ ಹಿಂದೆ ಬಿದ್ದಿರೋದ್ಯಾಕೆ?
ತನಗೆ ಮಾಹಿತಿ ನೀಡದೆಯೇ ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದೆ ಎಂದು ಅಮೆರಿಕ ಹೇಳಿದೆ. ಈ ದಾಳಿಯಲ್ಲಿ ತನ್ನ ಪಾತ್ರ ಇಲ್ಲ. ಒಂದು ವೇಳೆ ಇರಾನ್ ಪ್ರತಿದಾಳಿ ಮಾಡಿ ತನ್ನ ಸೇನೆ ಹಾಗೂ ಆಸ್ತಿಗಳಿಗೆ ಹಾನಿ ಮಾಡಲು ಯತ್ನಿಸಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಇರಾನ್ಗೆ ಅಮೆರಿಕ ಎಚ್ಚರಿಕೆ ನೀಡಿದೆ. ಇರಾನ್ ಮುಂದಿನ ನಡೆ ಏನು ಎಂಬುದು ಪ್ರಶ್ನೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








