ನವದೆಹಲಿ: ಆಹಾರ ವಸ್ತುಗಳ ಬೆಲೆ ಸತತವಾಗಿ ಏರಿಕೆಯಾಗುತ್ತಿರುವುದರ ಪರಿಣಾಮವಾಗಿ ಚಿಲ್ಲರೆ ಹಣದುಬ್ಬರ (Retail Inflation) ಪ್ರಮಾಣ ಜೂನ್ ತಿಂಗಳಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಜೂನ್‌ನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ 4.81ಕ್ಕೆ ಹೆಚ್ಚಳವಾಗಿರುವುದು ಸರ್ಕಾರದ ಅಂಕಿಅಂಶಗಳಿಂದ ತಿಳಿದುಬಂದಿದೆ. ಗ್ರಾಹಕ ದರ ಸೂಚ್ಯಂಕ (CPI) ಆಧಾರಿತ ಹಣದುಬ್ಬರವು ಮೇ ತಿಂಗಳಲ್ಲಿ ಶೇ 4.31 ಇತ್ತು. ಇದು 2022ರ ಜೂನ್‌ನಲ್ಲಿ ಶೇ 7 ರಷ್ಟಿತ್ತು.
ಆದಾಗ್ಯೂ, ಹಣದುಬ್ಬರವು ಆರ್‌ಬಿಐನ ಸಹನೆಯ ಮಿತಿ ಶೇ 6ಕ್ಕಿಂತ ಕಡಿಮೆಯೇ ಇದೆ. ಈ ಹಿಂದೆ ಮಾರ್ಚ್‌ನಲ್ಲಿ ಗ್ರಾಹಕ ದರ ಸೂಚ್ಯಂಕ ಆಧಾರಿತ ಹಣದುಬ್ಬರವು ಶೇ 5.66 ರಷ್ಟಿತ್ತು.
ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಶೇ 4 ರ ಒಳಗೆ ಇರುವಂತೆ ನೋಡಿಕೊಳ್ಳಲಿ ಕೇಂದ್ರ ಸರ್ಕಾರವು ಆರ್ಬಿಐಗೆ ನಿರ್ದೇಶನ ನೀಡಿದೆ. ಆರ್‌ಬಿಐನ ಮುಂದಿನ ದ್ವೈಮಾಸಿಕ ನೀತಿ ಮುಂದಿನ ತಿಂಗಳ ಆರಂಭದಲ್ಲಿ ಪ್ರಕಟವಾಗಲಿದೆ.
ಆಹಾರ ದರ ಆಧಾರಿತ ಹಣದುಬ್ಬರವು ಜೂನ್‌ನಲ್ಲಿ ಶೇಕಡಾ 4.49 ತಲುಪಿತ್ತು. ಮೇ ತಿಂಗಳಲ್ಲಿ ಶೇಕಡಾ 2.96 ಇತ್ತು. ಗ್ರಾಹಕ ದರ ಸೂಚ್ಯಂಕ ಆಧಾರಿತ ಹಣದುಬ್ಬರದ ಏರಿಕೆಗೆ ಬಹುಪಾಲು ಆಹಾರ ವಸ್ತುಗಳ ಬೆಲೆ ಏರಿಕೆಯೇ ಕಾರಣವಾಗಿದೆ.
ಕಳೆದ ತಿಂಗಳು ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿದ್ದ ಆರ್ಬಿಐ, ರೆಪೊ ದರದಲ್ಲಿ ಬದಲಾವಣೆ ಮಾಡದೆ, ಶೇಕಡಾ 6.5 ರ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಸರಾಸರಿ ಶೇ 5.1 ರಲ್ಲಿ ಇರುವಂತೆ ನೋಡಿಕೊಳ್ಳುವ ಗುರಿ ಹಾಕಿಕೊಂಡಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ