ನವದೆಹಲಿ: ಚಿಲ್ಲರೆ ಹಣದುಬ್ಬರ (Retail Inflation) ಪ್ರಮಾಣ 2023ರ ಜನವರಿಯಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟದಲ್ಲಿರುವುದು ಸರ್ಕಾರದ ಅಂಕಿಅಂಶಗಳಿಂದ ತಿಳಿದುಬಂದಿದೆ. ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ 6.52 ದಾಖಲಾಗಿದೆ. 2022ರ ಡಿಸೆಂಬರ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಆರ್ಬಿಐ (RBI) ಸಹನೆಯ ಮಿತಿಯ (ಶೇ 6) ಒಳಗೆಯೇ ಇತ್ತು. ಡಿಸೆಂಬರ್ನಲ್ಲಿ ಗ್ರಾಹಕ ದರ ಸೂಚ್ಯಂಕ ಆಧಾರಿತ (CPI) ಚಿಲ್ಲರೆ ಹಣದುಬ್ಬರ (Retail Inflation) ಪ್ರಮಾಣ ಒಂದು ವರ್ಷದ ಕನಿಷ್ಠ ಮಟ್ಟಕ್ಕೆ, ಅಂದರೆ ಶೇಕಡಾ 5.72ಕ್ಕೆ ಇಳಿಕೆಯಾಗಿತ್ತು. ಆದರೆ, ಇದೀಗ ಮತ್ತೆ ಏರಿಕೆಯಾಗಿದೆ. ಚಿಲ್ಲರೆ ಹಣದುಬ್ಬರ ಹೆಚ್ಚಳಕ್ಕೆ ಮುಖ್ಯವಾಗಿ ಆಹಾರ ವಸ್ತುಗಳ ಬೆಲೆ ಏರಿಕೆ ಕಾರಣ ಎನ್ನಲಾಗಿದೆ. ಆಹಾರ ವಸ್ತುಗಳ ಹಣದುಬ್ಬರ ಜನವರಿಯಲ್ಲಿ ಶೇ 5.94ರಷ್ಟಿದೆ. ಇದು ಡಿಸೆಂಬರ್ನಲ್ಲಿ ಶೇ 4.19ರಷ್ಟಿತ್ತು. ಈ ಹಿಂದೆ 2022ರ ಅಕ್ಟೋಬರ್ನಲ್ಲಿ ಚಿಲ್ಲರೆ ಹಣದುಬ್ಬರ ಶೇ 6.77ರಷ್ಟಿತ್ತು.
ಚಿಲ್ಲರೆ ಹಣದುಬ್ಬರವನ್ನು ಶೇ 2ರಿಂದ 4ರ ಒಳಗೆ ಇರುವಂತೆ ನೋಡಿಕೊಳ್ಳುವುದು ಆರ್ಬಿಐ ಗುರಿಯಾಗಿದೆ. ಹಣದುಬ್ಬರ ಏರಿಕೆ ತಡೆಯುವ ನಿಟ್ಟಿನಲ್ಲಿ ಆರ್ಬಿಐ ಫೆಬ್ರವರಿ 8ರಂದು ಮತ್ತೆ ರೆಪೊ ದರವನ್ನು ಮತ್ತೆ 25 ಮೂಲಾಂಶ ಹೆಚ್ಚಿಸಿ ಶೇ 6.50 ಕ್ಕೆ ನಿಗದಿಪಡಿಸಿತ್ತು.
ಇದನ್ನೂ ಓದಿ: Repo Rate: ಆರ್ಬಿಐ ಹಣಕಾಸು ನೀತಿ, ರೆಪೊ ದರ, ರಿವರ್ಸ್ ರೆಪೊ ದರ ಎಂದರೇನು? ಇಲ್ಲಿದೆ ಪೂರ್ತಿ ವಿವರ
ಕಳೆದ ಕೆಲವು ಹಣಕಾಸು ನೀತಿಗಳಲ್ಲಿ ನಿರಂತರವಾಗಿ ರೆಪೊ ದರ ಹೆಚ್ಚಿಸುತ್ತಾ ಬಂದಿರುವುದು ಪರಿಣಾಮ ಬೀರಿದೆ. ಅದರಿಂದಾಗಿ ಸಗಟು ಮತ್ತು ಚಿಲ್ಲರೆ ಹಣದುಬ್ಬರಗಳು ಸಹನೆಯ ಮಟ್ಟಕ್ಕೆ ಬಂದಿವೆ. ಆದಾಗ್ಯೂ ಜಾಗತಿಕ ಆರ್ಥಿಕ ಪರಿಸ್ಥಿತಿ, ಅಮೆರಿಕದ ಫೆಡರಲ್ ಬ್ಯಾಂಕ್ ಮತ್ತು ಇತರ ದೇಶಗಳ ಕೇಂದ್ರೀಯ ಬ್ಯಾಂಕ್ಗಳ ನಿರ್ಣಯಗಳನ್ನು ನಾವು ಗಮನಿಸಿದ್ದೇವೆ. ದೇಶದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ಹಣದುಬ್ಬರದ ವಿಚಾರದಲ್ಲಿ ನಮ್ಮ ಗುರಿಯನ್ನು ತಲುಪುವುದಕ್ಕಾಗಿ ದರ ಹೆಚ್ಚಿಸುವುದು ಸದ್ಯದ ಮಟ್ಟಿಗೆ ಅನಿವಾರ್ಯವಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದರು.
ಇದೀಗ ಚಿಲ್ಲರೆ ಹಣದುಬ್ಬರ ಆರ್ಬಿಐ ಸಹನೆಯ ಮಿತಿ ದಾಟಿರುವುದು ಮತ್ತೆ ಆತಂಕಕ್ಕೆ ಕಾರಣವಾಗಿದೆ. ಮುಂಬರುವ ಹಣಕಾಸು ನೀತಿಗಳಲ್ಲಿ ಆರ್ಬಿಐ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬಹುದೇ? ಬಡ್ಡಿ ದರವನ್ನು ಮತ್ತೆ ಹೆಚ್ಚಿಸುವ ಸಾಧ್ಯತೆ ಇದೆಯೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ. ಚಿಲ್ಲರೆ ಹಣದುಬ್ಬರ ಸಹನೆಯ ಮಟ್ಟಕ್ಕೆ ಬಂದಿದ್ದರೂ ಒಟ್ಟಾರೆ ಹಣದುಬ್ಬರ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ ಎಂದು ಆರ್ಬಿಐ ಡಿಸೆಂಬರ್ನಲ್ಲಿ ಹೇಳಿತ್ತು.
Published On - 5:46 pm, Mon, 13 February 23