HDFC Digital Payments: ಎಚ್​​ಡಿಎಫ್​ಸಿ ಡಿಜಿಟಲ್ ಪಾವತಿಗಿನ್ನು ಇಂಟರ್​​ನೆಟ್ ಬೇಕಿಲ್ಲ!

ಸಾಮಾನ್ಯ ಡಿಜಿಟಲ್ ಪಾವತಿಯಲ್ಲಿ ನೆಟ್​ವರ್ಕ್ ಸಮಸ್ಯೆ ಇದ್ದಂಥ ಸಂದರ್ಭದಲ್ಲಿ ಬಳಕೆದಾರರು ಕಿರಿಕಿರಿ ಅನುಭವಿಸಬೇಕಾಗುತ್ತದೆ. ಆದರೆ ಆಫ್​​ಲೈನ್​ ಪಾವತಿಯಲ್ಲಿ ಈ ಸಮಸ್ಯೆ ಇರುವುದಿಲ್ಲ.

HDFC Digital Payments: ಎಚ್​​ಡಿಎಫ್​ಸಿ ಡಿಜಿಟಲ್ ಪಾವತಿಗಿನ್ನು ಇಂಟರ್​​ನೆಟ್ ಬೇಕಿಲ್ಲ!
ಸಾಂದರ್ಭಿಕ ಚಿತ್ರ

Updated on: Feb 14, 2023 | 10:40 AM

ಎಚ್​​ಡಿಎಫ್​ಸಿ ಬ್ಯಾಂಕ್ (HDFC Bank) ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಆಫ್​ಲೈನ್ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದೆ. ಆರ್​​ಬಿಐಯ (RBI) ‘ರೆಗ್ಯುಲೇಟರಿ ಸ್ಯಾಂಡ್​​ಬಾಕ್ಸ್’ ಯೋಜನೆಯಡಿ ಈ ಪ್ರಯೋಗ ಆರಂಭಿಸಲಾಗಿದ್ದು, ಕ್ರಂಚ್​​​ಫಿಶ್ (Crunchfish) ಸಹಯೋಗವಿದೆ. ಈ ವ್ಯವಸ್ಥೆಯಡಿ ಡಿಜಿಟಲ್ ಪಾವತಿ ಮಾಡುವುದಕ್ಕೆ ಮೊಬೈಲ್ ನೆಟ್​​​ವರ್ಕ್ ಬೇಕಾಗಿಲ್ಲ. ಗ್ರಾಹಕರು ಹಾಗೂ ಉದ್ಯಮಗಳು ನೆಟ್​​ವರ್ಕ್ ಸಹಾಯ ಇಲ್ಲದೆಯೇ ಡಿಜಿಟಲ್ ರೂಪದಲ್ಲಿ ಹಣ ಕಳುಹಿಸಲು ಹಾಗೂ ಸ್ವೀಕರಿಸಲು ಸಾಧ್ಯವಿದೆ. ಆಫ್​​​ಲೈನ್ ಡಿಜಿಟಲ್ ಪಾವತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನೆಟ್​ವರ್ಕ್ ಕಡಿಮೆ ಇರುವ ಸ್ಥಳಗಳಲ್ಲಿ ಹಣ ಪಾವತಿ ಮಾಡಲು ಅನುಕೂಲವಾಗಲಿದೆ. ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ, ಪ್ರದರ್ಶನ ಮಳಿಗೆಗಳಲ್ಲಿ ಹಾಗೂ ಬೃಹತ್ ಸಮಾವೇಶಗಳ ಸಂದರ್ಭದಲ್ಲಿ ನೆಟ್​ವರ್ಕ್ ಸಮಸ್ಯೆ ಇದ್ದಾಗಲೂ ಪಾವತಿ ಸುಲಭವಾಗಲಿದೆ.

ಸಾಮಾನ್ಯ ಡಿಜಿಟಲ್ ಪಾವತಿಯಲ್ಲಿ ನೆಟ್​ವರ್ಕ್ ಸಮಸ್ಯೆ ಇದ್ದಂಥ ಸಂದರ್ಭದಲ್ಲಿ ಬಳಕೆದಾರರು ಕಿರಿಕಿರಿ ಅನುಭವಿಸಬೇಕಾಗುತ್ತದೆ. ಆದರೆ ಆಫ್​​ಲೈನ್​ ಪಾವತಿಯಲ್ಲಿ ಈ ಸಮಸ್ಯೆ ಇರುವುದಿಲ್ಲ.

ಗಮನಿಸಿ; ತಕ್ಷಣವೇ ಪಾವತಿ ಆಗಿಬಿಡುವುದಿಲ್ಲ

ಆಫ್​ಲೈನ್ ಪಾವತಿ ವಿಧಾನದಲ್ಲಿ ಗ್ರಾಹಕರು ಡಿಜಿಟಲ್ ರೂಪದಲ್ಲಿ ಹಣ ಪಾವತಿ ಮಾಡಿದ ಕೂಡಲೇ ಆ ಪಾವತಿ ಖಾತರಿಯಾಗಿಬಿಡುತ್ತದೆ. ಆದರೆ, ತಕ್ಷಣವೇ ವ್ಯಾಪಾರಿಯ ಖಾತೆಗೆ ಜಮೆಯಾಗುವುದಿಲ್ಲ. ಗ್ರಾಹಕರು ಅಥವಾ ವ್ಯಾಪಾರಿಗಳು ಆನ್​ಲೈನ್ ಮೋಡ್​ಗೆ ಬಂದ ಕೂಡಲೇ ಹಣ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಎಚ್​​ಡಿಎಫ್​​ಸಿ ಬ್ಯಾಂಕ್ ತಿಳಿಸಿದೆ. ಆದರೆ, ಹಣ ಪಾವತಿಯಾಗುವ ಖಾತರಿ ಈ ವ್ಯವಸ್ಥೆಯಲ್ಲಿದೆ.

ಬೇರೆ ಬ್ಯಾಂಕ್​ ಗ್ರಾಹಕರಿಗೂ ಲಭ್ಯವಿದೆ ಸೇವೆ

ಎಚ್​​ಡಿಎಫ್​​ಸಿ ಬ್ಯಾಂಕ್ ಆಫ್​​ಲೈನ್ ಪಾವತಿ ವ್ಯವಸ್ಥೆಯನ್ನು ಪ್ರಾಯೋಗಿಕ ಹಂತದಲ್ಲಿ ಇತರ ಬ್ಯಾಂಕ್ ಗ್ರಾಹಕರಿಗೂ ನೀಡಲಾಗುವುದು. ಇನ್ವಿಟೇಷನ್ ಲಿಂಕ್ ಮೂಲಕ ಬೇರೆ ಬ್ಯಾಂಕ್ ಗ್ರಾಹಕರು ಸೇವೆ ಪಡೆಯಬಹುದು. ನಾಲ್ಕು ತಿಂಗಳ ಕಾಲ ಪ್ರಾಯೋಗಿಕ ಯೋಜನೆ ಜಾರಿಯಲ್ಲಿದೆ. ಆಮೇಲೆ ಸಾಧಕ-ಬಾಧಕಗಳನ್ನು ನೋಡಿಕೊಂಡು ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಬ್ಯಾಂಕ್ ತಿಳಿಸಿದೆ. ಸದ್ಯ ಯೋಜನೆ ಪ್ರಾಯೋಗಿಕ ಹಂತದಲ್ಲಿರುವ ಕಾರಣ 200 ರೂ. ವಹಿವಾಟಿಗೆ ಮಾತ್ರ ಅವಕಾಶ ನೀಡಲಾಗಿದೆ.

ನೆಟ್​​ವರ್ಕ್​​ ಕಡಿಮೆ ಇರುವ ಪ್ರದೇಶಗಳಲ್ಲಿ, ಅಂಡರ್​​ಗ್ರೌಂಡ್​​​ಗಳಲ್ಲಿ, ಅಂಡರ್​​ಗ್ರೌಂಡ್​​​ ಮೆಟ್ರೋ ಸ್ಟೇಷನ್​​ಗಳಲ್ಲಿ, ಚಿಲ್ಲರೆ ಮಳಿಗೆಗಳಲ್ಲಿ, ವಿಮಾನಗಳಲ್ಲಿ, ರೈಲುಗಳಲ್ಲಿ ಹಾಗೂ ಹಡಗುಗಳಲ್ಲಿ ಪ್ರಯಾಣದ ಸಂದರ್ಭದಲ್ಲಿ ಆಫ್​​ಲೈನ್ ಪಾವತಿಯಿಂದ ಪ್ರಯೋಜನವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us