Adani Row: ಅದಾನಿ ಪ್ರಕರಣದ ಬಗ್ಗೆ ಏನಂದ್ರು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್? ಇಲ್ಲಿದೆ ನೋಡಿ
ಆರ್ಬಿಐ ಹಣಕಾಸು ನೀತಿ ಪ್ರಕಟಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್, ಮಾರುಕಟ್ಟೆ ಬಂಡವಾಳದ ಆಧಾರದಲ್ಲಿ ಬ್ಯಾಂಕ್ಗಳು ಯಾವುದೇ ಕಂಪನಿಗೆ ಸಾಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂಬೈ: ಬ್ಯಾಂಕೇತರ ಹಣಕಾಸು ಸಂಸ್ಥೆಗಳೂ (NBFCs) ಸೇರಿದಂತೆ ದೇಶದ ಬ್ಯಾಂಕಿಂಗ್ ವಲಯ (Indian banking sector) ಬಲಿಷ್ಠವಾಗಿದೆ. ಯಾವುದೋ ಒಂದು ಘಟನೆ ಅಥವಾ ಪ್ರಕರಣದಿಂದ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಪರಿಣಾಮವಾಗದು ಎಂದು ಆರ್ಬಿಐ (RBI) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹ ಸದ್ಯ ಎದುರಿಸುತ್ತಿರುವ ವಿವಾದಕ್ಕೆ ಸಂಬಂಧಿಸಿ ಅವರು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಶಕ್ತಿಕಾಂತ ದಾಸ್ ಅವರು ಎಲ್ಲಿಯೂ ಅದಾನಿ ಸಮೂಹದ ಹೆಸರನ್ನು ಪ್ರಸ್ತಾಪಿಸಿಲ್ಲ. ಅದಾನಿ ಸಮೂಹಕ್ಕೆ ಬ್ಯಾಂಕ್ಗಳು ನೀಡಿರುವ ಸಾಲದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವಾಗಿ ಆರ್ಬಿಐ ಮೌಲ್ಯಮಾಪನ ನಡೆಸಿದೆ. ದೊಡ್ಡ ಪ್ರಮಾಣದ ಸಾಲ ನೀಡಿಕೆ ವಿಚಾರವಾಗಿ ಆರ್ಬಿಐ ಮಾರ್ಗಸೂಚಿಯನ್ನು ಎಲ್ಲ ಬ್ಯಾಂಕ್ಗಳು ಅನುಸರಿಸಿವೆ ಎಂದು ತಿಳಿಸಿದ್ದಾರೆ.
ಆರ್ಬಿಐ ಹಣಕಾಸು ನೀತಿ ಪ್ರಕಟಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರುಕಟ್ಟೆ ಬಂಡವಾಳದ ಆಧಾರದಲ್ಲಿ ಬ್ಯಾಂಕ್ಗಳು ಯಾವುದೇ ಕಂಪನಿಗೆ ಸಾಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬ್ಯಾಂಕ್ಗಳು ಯಾವುದೇ ಕಂಪನಿಯ ಮಾರುಕಟ್ಟೆ ಬಂಡವಾಳದ ಆಧಾರದಲ್ಲಿ ಸಾಲ ನೀಡುವುದಿಲ್ಲ. ಕಂಪನಿಯ ಸಾಮರ್ಥ್ಯ, ಮೂಲಭೂತ ಅಂಶಗಳು, ನಗದು ಹರಿವು ಹಾಗೂ ಇತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಾಲ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Repo Rate Hike; ಆರ್ಬಿಐ ರೆಪೊ ದರ ಮತ್ತೆ 25 ಮೂಲಾಂಶ ಹೆಚ್ಚಳ; ಹೆಚ್ಚಾಗಲಿದೆ ಇಎಂಐ ಮೊತ್ತ
ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ಆರೋಪ ಮಾಡಿದ ಬಳಿಕ ಅದಾನಿ ಸಮೂಹದ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಗಣನೀಯ ಕುಸಿತ ದಾಖಲಿಸಿದ್ದವು. ಕಂಪನಿಯ ಸಂಪತ್ತು ವೇಗವಾಗಿ ಕರಗಲು ಆರಂಭವಾಗಿತ್ತು. ಇದು ದೇಶದಲ್ಲಿ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿತ್ತು. ಸರ್ಕಾರಿ ಸ್ವಾಮ್ಯದ ಎಲ್ಐಸಿ ಹೂಡಿಕೆ ಮಾಡಿರುವ ಹಾಗೂ ಸಾಲ ನೀಡಿರುವ ಕಾರಣಕ್ಕೆ ಅದಾನಿ ಪ್ರಕರಣ ಮತ್ತಷ್ಟು ಹೆಚ್ಚಿನ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಅದಾನಿ ಸಮೂಹಕ್ಕೆ ನೀಡಿರುವ ಸಾಲದ ಬಗ್ಗೆ ಬ್ಯಾಂಕ್ಗಳಿಂದ ಆರ್ಬಿಐ ವಿವರ ಕೋರಿತ್ತು. ಅದಾನಿ ಸಮೂಹಕ್ಕೆ ನೀಡಿರುವ ಸಾಲ ಆರ್ಬಿಐ ಮಾರ್ಗಸೂಚಿಯಲ್ಲಿ ಹೇಳಿರುವ ಮಿತಿಯಲ್ಲಿಯೇ ಇದೆ ಎಂದು ಎಸ್ಬಿಐ ಸ್ಪಷ್ಟನೆ ನೀಡಿತ್ತು.