Adani Enterprises: ಅಪ್ಪರ್ ಸರ್ಕ್ಯೂಟ್ನಲ್ಲಿ ಅದಾನಿ ಎಂಟರ್ಪ್ರೈಸಸ್ ಷೇರು; ಮೌಲ್ಯದಲ್ಲಿ ಭಾರೀ ಜಿಗಿತ
ಅದಾನಿ ಎಂಟರ್ಪ್ರೈಸಸ್ ಷೇರು ಮೌಲ್ಯ ಬುಧವಾರ ಮಧ್ಯಾಹ್ನದ ವಹಿವಾಟಿನಲ್ಲಿ ಶೇ 102ರಷ್ಟು ಹೆಚ್ಚಾಗಿ 2,049.60 ರೂ.ನಂತೆ ವಹಿವಾಟು ನಡೆಸುತ್ತಿದೆ.
ಮುಂಬೈ: ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ಆರೋಪ ಮಾಡಿದ ಬಳಿಕ ಪಾತಾಳಕ್ಕೆ ಕುಸಿದಿದ್ದ ಅದಾನಿ ಸಮೂಹದ (Adani Group) ಪ್ರಮುಖ ಕಂಪನಿ ಅದಾನಿ ಎಂಟರ್ಪ್ರೈಸಸ್ (Adani Enterprises) ಷೇರುಗಳು ಈಗ ಮತ್ತೆ ಅಪ್ಪರ್ ಸರ್ಕ್ಯೂಟ್ನಲ್ಲಿ ವಹಿವಾಟು ನಡೆಸುತ್ತಿವೆ. 52 ವಾರಗಳ ಕನಿಷ್ಠಕ್ಕೆ ಕುಸಿದಿದ್ದ ಕಂಪನಿಯ ಷೇರುಗಳು ಮತ್ತೆ ಪುಟಿದೆದ್ದು ಕೇವಲ ನಾಲ್ಕು ದಿನಗಳ ಟ್ರೇಡಿಂಗ್ನಲ್ಲಿ ಮಲ್ಟಿ ಬ್ಯಾಗರ್ (multibagger) ಆಗಿ ಪರಿಣಮಿಸಿದೆ. ಇದರಿಂದ ಉದ್ಯಮಿ ಗೌತಮ್ ಅದಾನಿ (Gautam Adani) ನೇತೃತ್ವದ ಕಂಪನಿಗಳು ಮತ್ತೆ ಮಾರುಕಟ್ಟೆಯಲ್ಲಿ ಪುಟಿದೇಳುವ ಸೂಚನೆ ನೀಡಿವೆ. ಅದಾನಿ ಎಂಟರ್ಪ್ರೈಸಸ್ ಷೇರು ಮೌಲ್ಯ ಬುಧವಾರ ಮಧ್ಯಾಹ್ನದ ವಹಿವಾಟಿನಲ್ಲಿ ಶೇ 102ರಷ್ಟು ಹೆಚ್ಚಾಗಿ 2,049.60 ರೂ.ನಂತೆ ವಹಿವಾಟು ನಡೆಸುತ್ತಿದೆ. ಫೆಬ್ರವರಿ 3ರಂದು ಕಂಪನಿಯ ಷೇರು 52 ವಾರಗಳ ಕನಿಷ್ಠಕ್ಕೆ ಕುಸಿದು 1,017.10 ರೂ.ನಲ್ಲಿ ವಹಿವಾಟು ನಡೆಸಿತ್ತು. ಮಂಗಳವಾರದ ವಹಿವಾಟಿನ ಅಂತ್ಯದ ವೇಳೆಗೆ ಕಂಪನಿಯ ಷೇರು ಮುಖಬೆಲೆ 1,802.50 ಆಗಿತ್ತು. ಇದಕ್ಕೆ ಹೋಲಿಸಿದರೆ ಬುಧವಾರ ಮಧ್ಯಾಹ್ನದ ವೇಳೆಗೆ ಶೇ 14ರಷ್ಟು ಏರಿಕೆ ದಾಖಲಿಸಿದೆ.
ಆದಾಗ್ಯೂ 52 ವಾರಗಳ ಗರಿಷ್ಠ ಮಟ್ಟದಲ್ಲಿ, ಅಂದರೆ 2022ರ ಡಿಸೆಂಬರ್ನಲ್ಲಿ 4,189.55 ರೂ.ನಲ್ಲಿ ವಹಿವಾಟು ನಡೆಸಿದ್ದಕ್ಕೆ ಹೋಲಿಸಿದರೆ ಈಗ ಷೇರು ಮೌಲ್ಯ ಶೇ 51ರಷ್ಟು ಕುಸಿತದಲ್ಲಿದೆ. ತಿಂಗಳ ಅವಧಿಯಲ್ಲಿ ಷೇರು ಮೌಲ್ಯ ಶೇ 46ರಷ್ಟು ಕುಸಿತ ಕಂಡಿದೆ.
ಇದನ್ನೂ ಓದಿ: Repo Rate: ಆರ್ಬಿಐ ಹಣಕಾಸು ನೀತಿ, ರೆಪೊ ದರ, ರಿವರ್ಸ್ ರೆಪೊ ದರ ಎಂದರೇನು? ಇಲ್ಲಿದೆ ಪೂರ್ತಿ ವಿವರ
ಅದಾನಿ ಎಂಟರ್ಪ್ರೈಸಸ್ ಮಾರುಕಟ್ಟೆ ಬಂಡವಾಳ ಹೊಂದಿದ್ದ ಒಟ್ಟು 2.35 ಲಕ್ಷ ಕೋಟಿ ರೂ. ಇದ್ದದ್ದು ಈಗ ಮೌಲ್ಯ ಕುಸಿತದ ಪರಿಣಾಮ 1.16 ಲಕ್ಷ ಕೋಟಿ ರೂ. ಆಗಿದೆ. ಅದಾನಿ ಸಮೂಹದ ಕಂಪನಿಗಳ ಪೈಕಿ 9ರ ಷೇರು ಮೌಲ್ಯದಲ್ಲಿ ಬುಧವಾರ ಚೇತರಿಕೆ ಕಂಡಿದೆ. ಕೇವಲ ಅದಾನಿ ಟೋಟಲ್ ಗ್ಯಾಸ್ ಷೇರುಗಳು ಮಾತ್ರ ಶೇ 5ರ ಮೌಲ್ಯ ಕುಸಿತದೊಂದಿಗೆ ವಹಿವಾಟು ನಡೆಸುತ್ತಿವೆ.
ಹಿಂಡನ್ಬರ್ಗ್ ಆರೋಪದಿಂದ ತತ್ತರಿಸಿದ್ದ ಅದಾನಿ ಸಮೂಹ ಆ ವ್ಯೂಹದಿಂದ ಹೊರಬಂದು ಮತ್ತೆ ಲಾಭದ ಹಾದಿಗೆ ಮರಳಲು ಶತಾಯಗತಾಯ ಯತ್ನಿಸುತ್ತಿದೆ. ಈ ಪ್ರಯತ್ನದ ಭಾಗವಾಗಿ ಅವಧಿಪೂರ್ವ ಸಾಲ ಮರು ಪಾವತಿ ಬಗ್ಗೆ ಕೆಲವು ದಿನಗಳ ಹಿಂದಷ್ಟೇ ಅದಾನಿ ಸಮೂಹ ಘೋಷಿಸಿತ್ತು. ಹೂಡಿಕೆದಾರರಲ್ಲಿ ಮತ್ತೆ ಭರವಸೆ ಮೂಡಿಸುವ ಸಲುವಾಗಿ ಕಂಪನಿ ಈ ಕ್ರಮ ಕೈಗೊಂಡಿತ್ತು. ಇದರ ಬೆನ್ನಲ್ಲೇ ಅದಾನಿ ಸಮೂಹದ ಹೆಚ್ಚಿನ ಕಂಪನಿಗಳ ಷೇರು ಮೌಲ್ಯದಲ್ಲಿ ಚೇತರಿಕೆ ಕಾಣಿಸಿದೆ.