ನವದೆಹಲಿ, ನವೆಂಬರ್ 10: ಅಕ್ಟೋಬರ್ ತಿಂಗಳಲ್ಲಿ ಭಾರತದ ಹಣದುಬ್ಬರ (October Inflation Rate) ಕಡಿಮೆ ಆಗಿರುವ ಸಾಧ್ಯತೆ ಇದೆ ಎಂದು ವಿವಿಧ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಯ್ಟರ್ಸ್ ನಡೆಸಿದ ಪೋಲ್ ಅಥವಾ ಸಮೀಕ್ಷೆಯಲ್ಲಿ (Reuters Poll) ಪಾಲ್ಗೊಂಡ ತಜ್ಞರ ಪ್ರಕಾರ ಹಣದುಬ್ಬರ ಅಕ್ಟೋಬರ್ನಲ್ಲಿ ಶೇ. 4.80ರಷ್ಟಿರಬಹುದು. ವಿವಿಧ ಅಭಿಪ್ರಾಯಗಳ ಸರಾಸರಿ ಪಡೆದಾಗ ಶೇ. 4.80ರಷ್ಟಾಗಿದೆ. ಇದು ಕಳೆದ ನಾಲ್ಕು ತಿಂಗಳಲ್ಲೇ ಅತ್ಯಂತ ಕಡಿಮೆ ಹಣದುಬ್ಬರ ದರವಾಗಿದೆ.
ಗ್ರಾಹಕ ಬೆಲೆ ಅನುಸೂಚಿ ಆಧಾರಿತ ಹಣದುಬ್ಬರ ಆಗಸ್ಟ್ನಲ್ಲಿ ಶೇ. 6.83ರಷ್ಟು ಇದ್ದದ್ದು ಸೆಪ್ಟೆಂಬರ್ ತಿಂಗಳಲ್ಲಿ ಶೇ. 5.02ಕ್ಕೆ ಇಳಿದಿತ್ತು. ಆರ್ಬಿಐ ಅಂದಾಜು ಪ್ರಕಾರ ಅಕ್ಟೋಬರ್ನಿಂದ ನವೆಂಬರ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಹಣದುಬ್ಬರ ಸರಾಸರಿ ಶೇ. 5.6ರಷ್ಟಿರಬಹುದು ಎಂದಿದೆ. ಇದೀಗ ಅಕ್ಟೋಬರ್ ತಿಂಗಳ ಹಣದುಬ್ಬರ ದರ ಎಷ್ಟೆಂಬುದು ಇನ್ನೆರಡು ದಿನಗಳಲ್ಲಿ ಪ್ರಕಟಗೊಳ್ಳಲಿದೆ.
ಸಾಮಾನ್ಯವಾಗಿ ಹಣದುಬ್ಬರ ದರ ಪ್ರಕಟವಾಗುವ ಕೆಲ ದಿನಗಳ ಮೊದಲು ರಾಯ್ಟರ್ಸ್ ಸಂಸ್ಥೆ ವಿವಿಧ ಹಣಕಾಸು ತಜ್ಞರ ಅಭಿಪ್ರಾಯ ಸಂಗ್ರಹಿಸಿ ಅಂದಾಜು ದರವನ್ನು ಪ್ರಕಟಿಸುತ್ತದೆ. ನವೆಂಬರ್ 6ರಿಂದ 9ರವರೆಗಿನ ಅವಧಿಯಲ್ಲಿ 53 ಮಂದಿ ಆರ್ಥಿಕ ತಜ್ಞರ ಸಮೀಕ್ಷೆ ನಡೆಸಲಾಗಿದೆ. ಅವರೆಲ್ಲರ ಅಭಿಪ್ರಾಯದ ಸರಾಸರಿ ಪಡೆದಾಗ ಅಕ್ಟೋಬರ್ನಲ್ಲಿ ಶೇ. 4.8ರಷ್ಟು ಹಣದುಬ್ಬರ ಇರಬಹುದು ಎಂದು ಭಾವಿಸಲಾಗಿದೆ. ಈ 53 ಆರ್ಥಿಕ ತಜ್ಞರು ಶೇ. 4.47ರಿಂದ ಶುರುವಾಗಿ ಶೇ. 5.55ರವರೆಗೆ ವಿವಿಧ ದರಗಳನ್ನು ಹೆಸರಿಸಿದ್ದರು.
ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಶೇ. 20ರಷ್ಟು ಮಂದಿ ಮಾತ್ರ ಹಣದುಬ್ಬರ ಸೆಪ್ಟೆಂಬರ್ನದ್ದಕ್ಕಿಂತ ಹೆಚ್ಚಬಹುದು ಎಂದಿದ್ದಾರೆ. ಉಳಿದವರು ಹಣದುಬ್ಬರ ದರ ಇಳಿಕೆ ಆಗಲಿದೆ ಎಂಬ ಅಭಿಪ್ರಾಯ ನೀಡಿದ್ದಾರೆ.
ಇದನ್ನೂ ಓದಿ: ಆರ್ಬಿಐ ಎಂಪಿಸಿ ಸಭೆ ಹೈಲೈಟ್ಸ್; ರೆಪೋ ದರ ಶೇ. 6.5ರಲ್ಲಿ ಮುಂದುವರಿಕೆ; ಜಿಡಿಪಿ, ಹಣದುಬ್ಬರ ಅಂದಾಜು ವಿವರ ಇಲ್ಲಿದೆ
ಅಕ್ಟೋಬರ್ನಲ್ಲಿ ಹಣದುಬ್ಬರ ದರ ಇಳಿಯಲು ಆಹಾರ ಬೆಲೆ ಇಳಿಕೆ ಪ್ರಮುಖ ಕಾರಣವಾಗಬಹುದು. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಟೊಮೆಟೋ ಸೇರಿದಂತೆ ವಿವಿಧ ತರಕಾರಿಗಳ ಬೆಲೆ ಬಹಳ ಉಚ್ಚ ಮಟ್ಟದಲ್ಲಿತ್ತು. ಸೆಪ್ಟೆಂಬರ್ನಿಂದೀಚೆ ಬೆಲೆ ತಗ್ಗಿದೆ. ಈಗ ಈರುಳ್ಳಿ ಬೆಲೆ ಹೆಚ್ಚಿನ ಮಟ್ಟದಲ್ಲಿದ್ದರೂ ಬೇರೆ ತರಕಾರಿಗಳ ಬೆಲೆ ಕೈಮೀರಿಹೋಗಿಲ್ಲ. ಹೀಗಾಗಿ, ಹಣದುಬ್ಬರ ತುಸು ಕಡಿಮೆ ಆಗುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ