ನವದೆಹಲಿ, ನವೆಂಬರ್ 28: ದೇಶಾದ್ಯಂತ ಸೈಬರ್ ವಂಚನೆ ಮತ್ತು ದತ್ತಾಂಶ ಕಳುವು (data breach) ಪ್ರಕರಣಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅದನ್ನು ನಿಯಂತ್ರಿಸುವ ಪ್ರಯತ್ನವಾಗಿ ಸರ್ಕಾರ ಹಣಕಾಸು ಸಂಸ್ಥೆಗಳ (fintech companies) ಸಭೆ ಕರೆದಿದೆ. ಸಿಎನ್ಬಿಸಿ ವರದಿ ಪ್ರಕಾರ ಹಣಕಾಸು ಸಚಿವಾಲಯ ಹಾಗೂ ಆರ್ಬಿಐ ಈ ಸಭೆ ಕರೆದಿರುವ ಈ ಸಭೆ ಇಂದು ನಡೆಯಲಿದೆ. ದೇಶದ ವಿವಿಧ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸೈಬರ್ ವಂಚನೆ ಇತ್ಯಾದಿ ಘಟನೆಗಳನ್ನು ತಪ್ಪಿಸುವುದು ಹೇಗೆ, ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಇವೇ ಮುಂತಾದ ಸಂಗತಿಗಳನ್ನು ಈ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ.
ಹಣಕಾಸು ಸೇವೆ ಇಲಾಖೆಯ ಕಾರ್ಯದರ್ಶಿ ಅವರು ಈ ಸಭೆಯ ನೇತೃತ್ವ ವಹಿಸುತ್ತಿದ್ದಾರೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ (ಎನ್ಪಿಸಿಐ), ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ, ಟೆಲಿಕಾಂ ಇಲಾಖೆ, ದೂರವಾಣಿ ನಿಯಂತ್ರಕ ಪ್ರಾಧಿಕಾರ (TRAI), ಆಧಾರ್ನ ಯುಐಡಿಎಐ ಮತ್ತು ಎಫ್ಐಯು ಅಧಿಕಾರಿಗಳೂ ಕೂಡ ಈ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ.
ಇದನ್ನೂ ಓದಿ: ಜೀವ ಪ್ರಮಾಣಪತ್ರ ಸಲ್ಲಿಸಲು ಎರಡೇ ದಿನ ಬಾಕಿ; ನ. 30ಕ್ಕೆ ಕೊಡದಿದ್ದರೆ ಪಿಂಚಣಿ ಸಿಗೋದಿಲ್ವಾ?
ಡಿಜಿಟಲ್ ಪೇಮೆಂಟ್ ವಿಚಾರದಲ್ಲಿ ದೇಶಾದ್ಯಂತ ಸಾಕಷ್ಟು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಆಧಾರ್ ಗುರುತು ದುರುಪಯೋಗಿಸಿ ಹಣ ಲಪಟಾಯಿಸುತ್ತಿರುವ ಪ್ರಕರಣ ಇತ್ತೀಚೆಗೆ ಹೆಚ್ಚಾಗಿದೆ. ಈ ಪ್ರಕರಣಗಳನ್ನು ಸರ್ಕಾರ ಹಾಗೂ ಆರ್ಬಿಐ ಗಂಭೀರವಾಗಿ ಪರಿಗಣಿಸಿದೆ. ಆದರೆ, ಇವುಗಳನ್ನು ನಿಯಂತ್ರಿಸುವುದು ಬಹಳ ಕ್ಲಿಷ್ಟಕರವಾದ ಸವಾಲಿನ ವಿಚಾರ. ಎಲ್ಲಾ ದೃಷ್ಟಿಕೋನದಿಂದಲೂ ಸಮಗ್ರವಾಗಿ ಇವತ್ತು ಚರ್ಚೆ ಆಗಬಹುದು. ಸೈಬರ್ ಸೆಕ್ಯೂರಿಟಿ ಭದ್ರಪಡಿಸಲು ಏಕೀಕೃತ ವಿಧಾನವನ್ನು ರೂಪಿಸಲು ಏನೇನು ಕ್ರಮ ಸಾಧ್ಯ ಎಂಬುದನ್ನು ಅವಲೋಕಿಸುವುದು ಈ ಸಭೆಯ ಒಟ್ಟಾರೆ ಗುರಿ.
ಇತ್ತೀಚೆಗೆ ಸರ್ಕಾರ ಗೂಗಲ್ ಸಂಸ್ಥೆಯನ್ನು ಸಂಪರ್ಕಿಸಿ, ಅಲ್ಲಿನ ಸೆಕ್ಯೂರಿಟಿ ತಂತ್ರಜ್ಞಾನವನ್ನು ಅರಿಯುವ ಪ್ರಯತ್ನ ಮಾಡಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:10 pm, Tue, 28 November 23