ಜೀವ ಪ್ರಮಾಣಪತ್ರ ಸಲ್ಲಿಸಲು ಎರಡೇ ದಿನ ಬಾಕಿ; ನ. 30ಕ್ಕೆ ಕೊಡದಿದ್ದರೆ ಪಿಂಚಣಿ ಸಿಗೋದಿಲ್ವಾ?
What Happens If Life Certificate not Submitted By Nov 30th: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಪಿಂಚಣಿದಾರರೂ ಪ್ರತೀ ವರ್ಷ ಲೈಫ್ ಸರ್ಟಿಫಿಕೇಟ್ ಸಲ್ಲಿಸುವುದು ಅನಿವಾರ್ಯ. ಈ ಬಾರಿ ನವೆಂಬರ್ 30ರವರೆಗೆ ಜೀವ ಪ್ರಮಾಣಪತ್ರ ಸಲ್ಲಿಸಲು ಕಾಲಾವಕಾಶ ಕೊಡಲಾಗಿದೆ. ಒಂದು ವೇಳೆ, ನಿಗದಿತ ದಿನದೊಳಗೆ ಪ್ರಮಾಣಪತ್ರ ಸಲ್ಲಿಸದಿದ್ದರೆ ಪಿಂಚಣಿ ಹಣ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತದೆ. ನಿಮಗೆ ಪಿಂಚಣಿ ಹಣ ವಿತರಿಸುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ಗೆ ಹೋಗಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಬಹುದು. ಆನ್ಲೈನ್ನಲ್ಲೂ ಸಲ್ಲಿಸುವ ಅವಕಾಶ ಇದೆ.
ನವದೆಹಲಿ, ನವೆಂಬರ್ 28: ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಜನರು ಪ್ರತೀ ವರ್ಷ ಲೈಫ್ ಸರ್ಟಿಫಿಕೇಟ್ (Life certificate deadline) ಸಲ್ಲಿಸಬೇಕು. ಪಿಂಚಣಿದಾರರು (government pensioners) ಜೀವಂತ ಇದ್ದಾರೆ ಎಂದು ಖಾತ್ರಿಪಡಿಸಿಕೊಳ್ಳಲು ಈ ನಿಯಮ ಮಾಡಲಾಗಿದೆ. ಈಗ ಲೈಫ್ ಸರ್ಟಿಫಿಕೇಟ್ ಅಥವಾ ಜೀವ ಪ್ರಮಾಣಪತ್ರ ಸಲ್ಲಿಸಲು ನವೆಂಬರ್ 30ರವರೆಗೂ ಕಾಲಾವಕಾಶ ಇದೆ. ಇವತ್ತು ನವೆಂಬರ್ 28 ಆಗಿದ್ದು, ಇನ್ನು ಮೂರು ದಿನ ಮಾತ್ರವೇ ಬಾಕಿ ಇದೆ. ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರದ ಎಲ್ಲಾ ಉದ್ಯೋಗಿಗಳೂ ಕೂಡ ಲೈಫ್ ಸರ್ಟಿಫಿಕೇಟ್ ಕೊಡುವುದು ಕಡ್ಡಾಯವಾಗಿದೆ. ಒಂದು ವೇಳೆ ಜೀವನ್ ಪ್ರಮಾಣಪತ್ರ ಸಲ್ಲಿಸದಿದ್ದರೆ ಏನಾಗುತ್ತದೆ ಎಂಬ ಮಾಹಿತಿ ಇದೇ ಸುದ್ದಿಯಲ್ಲಿ ಮುಂದಿದೆ.
ನವೆಂಬರ್ 30ರೊಳಗೆ ಲೈಫ್ ಸರ್ಟಿಫಿಕೇಟ್ ಕೊಡದಿದ್ದರೆ ಏನಾಗುತ್ತದೆ?
ಆಗಲೇ ತಿಳಿಸಿದಂತೆ ಫಲಾನುಭವಿಗಳು ಜೀವಂತವಾಗಿದ್ದಾರಾ ಎಂದು ಖಾತ್ರಿಪಡಿಸಿಕೊಳ್ಳಲು ಲೈಫ್ ಸರ್ಟಿಫಿಕೇಟ್ ಅನ್ನು ಪಡೆಯಲಾಗುತ್ತದೆ. ಸಾಕಷ್ಟು ಬಾರಿ ಪಿಂಚಣಿದಾರರು ಸಾವನ್ನಪ್ಪಿ, ಅವರ ಖಾತೆಗೆ ಪಿಂಚಣಿ ಪ್ರತೀ ತಿಂಗಳೂ ಜಮೆ ಆಗುತ್ತಲೇ ಇರುತ್ತಿತ್ತು. ಇದನ್ನು ತಪ್ಪಿಸಲು ಪ್ರತೀ ವರ್ಷ ಜೀವನ್ ಪ್ರಮಾಣಪತ್ರ ಸಲ್ಲಿಕೆಯನ್ನು ಕಡ್ಡಾಯ ಮಾಡಲಾಗಿದೆ.
ಇದನ್ನೂ ಓದಿ: ಡಿಸೆಂಬರ್ನಲ್ಲಿ ಬ್ಯಾಂಕುಗಳಿಗೆ 18 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ರಜೆ? 6 ದಿನ ಬ್ಯಾಂಕ್ ಮುಷ್ಕರದ ಬರೆ
ಇದೀಗ ನವೆಂಬರ್ 30ರೊಳಗೆ ಜೀವ ಪ್ರಮಾಣಪತ್ರ ಸಲ್ಲಿಸದಿದ್ದರೆ ಪಿಂಚಣಿ ಸ್ಥಗಿತಗೊಳ್ಳುತ್ತದೆ. ಹಾಗಂತ ಪಿಂಚಣಿ ಖಾಯಂ ಆಗಿ ನಿಂತುಹೋಗುವುದಿಲ್ಲ. ತಾತ್ಕಾಲಿಕವಾಗಿ ಮಾತ್ರ ಸ್ಥಗಿತಗೊಳ್ಳುತ್ತದೆ. ಮುಂಬರುವ ತಿಂಗಳ ಪಿಂಚಣಿ ಸಿಗುವುದಿಲ್ಲ. ನೀವು ತಡವಾಗಿ ಲೈಫ್ ಸರ್ಟಿಫಿಕೇಟ್ ಕೊಟ್ಟರೂ ಪಿಂಚಣಿ ಮತ್ತೆ ಸಕ್ರಿಯಗೊಳ್ಳುತ್ತದೆ. ಅದರ ಮುಂದಿನ ತಿಂಗಳಲ್ಲಿ ಬಾಕಿ ಸೇರಿಸಿ ಪಿಂಚಣಿ ಬರುತ್ತದೆ.
ಲೈಫ್ ಸರ್ಟಿಫಿಕೇಟ್ ಹೇಗೆ ಸಲ್ಲಿಸುವುದು?
ಪೆನ್ಷನ್ ಡಿಸ್ಬರ್ಸಿಂಗ್ ಏಜೆನ್ಸಿ (ಪಿಡಿಎ) ಅಥವಾ ಪಿಂಚಣಿ ವಿತರಣಾ ಸಂಸ್ಥೆಗಳ ಬಳಿ ಹೋಗಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು. ಇಲ್ಲಿ ಪಿಡಿಎ ಎಂಬುದು ನೀವು ಪಿಂಚಣಿ ಹಣ ಪಡೆಯುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಆಗಿರುತ್ತದೆ. ಯಾವ ಬ್ಯಾಂಕ್ ಖಾತೆಗೆ ಪಿಂಚಣಿ ಹಣ ಬರುತ್ತದೆ ಆ ಬ್ಯಾಂಕ್ಗೆ ಹೋಗಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು.
ಇದನ್ನೂ ಓದಿ: LIC Scheme: ನಿವೃತ್ತಿ ಬಳಿಕ ವರ್ಷಕ್ಕೆ 1 ಲಕ್ಷ ರೂ ಪಿಂಚಣಿ ಬರಲು ಪಾಲಿಸಿ ಮೊತ್ತ ಎಷ್ಟು ಬೇಕು?
ಜೀವನ್ ಪ್ರಮಾಣ್ ಸೆಂಟರ್ಗೆ ಹೋಗಿಯೂ ನೀವು ಈ ದಾಖಲೆ ಸಲ್ಲಿಸಬಹುದು. ಅಥವಾ ಮೊಬೈಲ್ ಆ್ಯಪ್ ಮೂಲಕವೂ ನೀವು ಈ ಕಾರ್ಯ ಮಾಡಬಹುದು. ಬ್ಯಾಂಕ್ಗೆ ಖುದ್ದಾಗಿ ಹೋಗಲು ಸಾಧ್ಯವಿಲ್ಲದಷ್ಟು ವಯಸ್ಸಾಗಿರುವವರಿಗೆ ಆನ್ಲೈನ್ ಫೀಚರ್ ಉಪಯುಕ್ತವೆನಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:32 am, Tue, 28 November 23