
ಬೆಂಗಳೂರು, ಮೇ 28: ವಯಸ್ಸಾದವರೂ ಕೂಡ ಭಾರತದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲು ಶಕ್ತರಾಗಿರುತ್ತಾರೆ. ಅವರ ಶಕ್ತಿಯನ್ನೂ ಉಪಯೋಗಿಸಿಕೊಳ್ಳಬೇಕು ಎಂದು ರೋಹಿಣಿ ನಿಲೇಕಣಿ ಹೇಳಿದ್ದಾರೆ. ರೋಹಿಣಿ ನಿಲೇಕಣಿ ಫಿಲಾಂಟ್ರೋಪೀಸ್ (Rohini Nilekani Philantropies), ಡ್ಯಾಲ್‌ಬರ್ಗ್ ಅಡ್ವೈಸರ್ಸ್ (Dalberg Advisors) ಮತ್ತು ಅಶೋಕ ಚೇಂಜ್‌ಮೇಕರ್ಸ್ (Ashoka Changemakers) ಸಂಸ್ಥೆಗಳ ಸಹಭಾಗಿತ್ವದಲ್ಲಿ ವಯಸ್ಸಾದವರ ಪಾತ್ರದ ಬಗ್ಗೆ ವಿವಿಧ ರೀತಿಯಲ್ಲಿ ಅಧ್ಯಯನ ನಡೆಸಿ ಕುತೂಹಲಕಾರಿ ಅಂಶಗಳುಳ್ಳ ವರದಿಯನ್ನು ಬಿಡುಗಡೆ ಮಾಡಲಾಗಿದೆ.
‘ದೀರ್ಘಾಯುಸ್ಸು: ವಯಸ್ಸಾಗುವಿಕೆಯನ್ನು ಅರಿಯುವ ಹೊಸ ಮಾರ್ಗ’ (Longevity: A New Way of Understanding Ageing) ಎನ್ನುವ ಈ ವರದಿಯನ್ನು ಪ್ರಕಟಿಸುವ ಮುನ್ನ, ಹಲವು ಸಂಘ ಸಂಸ್ಥೆಗಳು, ಆಸ್ಪತ್ರೆಗಳು, ವೈದ್ಯರು, ಪರಿಣಿತರು ಹೀಗೆ ಹಲವರ ಜೊತೆ ಸಂವಾದ ನಡೆಸಿ, ಸಮೀಕ್ಷೆ ನಡೆಸಿ ವಿವಿಧ ರೀತಿಯ ದೃಷ್ಟಿಕೋನ, ವಿಚಾರಗಳನ್ನು ಹೆಕ್ಕಿ ತೆಗೆಯಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಭಾರತಕ್ಕೆ ಎಷ್ಟು ಮಹತ್ವದ್ದು ಕಾವೇರಿ ಜೆಟ್ ಎಂಜಿನ್? ಚೀನಾಗೂ ಕಷ್ಟವಾಗಿರುವ ಈ ಸಿದ್ಧಿ ಪಡೆಯಲು ಸಫಲವಾಗುತ್ತಾ ಭಾರತ?
ಈ ವರದಿಯ ಪ್ರಕಾರ 2023-24ರಲ್ಲಿ ಇಳಿವಯಸ್ಸಿನ ಕಾರ್ಮಿಕರು ನೀಡಿದ ಕೊಡುಗೆ 68 ಬಿಲಿಯನ್ ಡಾಲರ್. ಭಾರತದ ಜಿಡಿಪಿಯ ಶೇ. 3ರಷ್ಟು ಮೊತ್ತ ಇದು. ಭಾರತದಲ್ಲಿ ಆರೋಗ್ಯವಂತರಾಗಿರುವ ಹಿರಿಯ ನಾಗರಿಕರು ಉದ್ಯೋಗಿಗಳಾಗಿ ಮುಂದುವರಿಯಲು ಇಚ್ಛಿಸಿದರೆ ದೇಶದ ಜಿಡಿಪಿ ಶೇ. 1.5ರಷ್ಟು ಹೆಚ್ಚಾಗಬಹುದು ಎಂಬುದು ಸಂಶೋಧನೆಯಿಂದ ತಿಳಿಬರುತ್ತದೆ.
‘2047ರ ಹೊತ್ತಿಗೆ ಭಾರತದಲ್ಲಿ 30 ಕೋಟಿ ಹಿರಿಯ ನಾಗರಿಕರು ಇರಲಿದ್ದಾರೆ. ಇವರಿಗೆ ಉತ್ತಮ ಆರೈಕೆ ಮತ್ತು ಬೆಂಬಲ ನೀಡಬಲ್ಲಂತಹ ಉತ್ತಮ ಸೌಕರ್ಯ ವ್ಯವಸ್ಥೆ ಅಭಿವೃದ್ಧಿಯಾಗಬೇಕಿದೆ. ಆದರೂ ಕೂಡ ವಯಸ್ಸಾದವರು ದುರ್ಬಲ ಜನರಲ್ಲ. ಅವರೂ ಕೂಡ ಮೌಲ್ಯ ಸೃಷ್ಟಿಸುವಂಥವರೇ’ ಎಂದು ನಂದನ್ ನಿಲೇಕಣಿ ಅವರ ಪತ್ನಿ ರೋಹಿಣಿ ನಿಲೇಕಣಿ ಹೇಳಿದ್ದಾರೆ.
ಇದನ್ನೂ ಓದಿ: ಭಾರತದಿಂದ ಬಿಎಫ್ಎಸ್; ಇದು ವಿಶ್ವದಲ್ಲೇ ಅತ್ಯಂತ ಕರಾರುವಾಕ್ ಹವಾಮಾನ ಮುನ್ಸೂಚನೆ ವ್ಯವಸ್ಥೆ
ರೋಹಿಣಿ ನಿಲೇಕಣಿ ಫಿಲಾಂಟ್ರೋಪೀಸ್ ಮತ್ತು ಅಶೋಕ ಚೇಂಜ್‌ಮೇಕರ್ಸ್ ಜೊತೆಗೂಡಿ ಅಧ್ಯಯನದಲ್ಲಿ ಸಹಕರಿಸಿದ ಡ್ಯಾಲ್‌ಬರ್ಗ್ ಅಡ್ವೈಸರ್ಸ್ ಸಂಸ್ಥೆಯ ಏಷ್ಯಾ ಪೆಸಿಫಿಕ್ ರೀಜನಲ್ ಡೈರೆಕ್ಟರ್ ಆದ ಶ್ವೇತ ತೋಟಪಲ್ಲಿ ಅವರೂ ಕೂಡ ರೋಹಿಣಿ ನಿಲೇಕಣಿ ಅವರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸುತ್ತಾರೆ.
‘ನಮ್ಮ ಜನಸಂಖ್ಯಾ ರಚನೆಯಲ್ಲಿ ವೇಗದ ಬದಲಾವಣೆ ಆಗುತ್ತಿದೆ. ಅವರ (ಹಿರಿಯರು) ಪ್ರಯತ್ನಗಳಿಗೆ ಪುಷ್ಟಿ ನೀಡಲು ಇದು ಸುಸಂದರ್ಭವಾಗಿದೆ. ವಯಸ್ಸಾಗುವಿಕೆ ಬಗ್ಗೆ ನಮಗಿರುವ ಅರಿವನ್ನು ಬದಲಿಸಿಕೊಳ್ಳಬೇಕು. ವಿಕಸಿತ ಭಾರತ ನಿರ್ಮಾಣದತ್ತ ನಾವು ಹೆಜ್ಜೆ ಇಡುವ ಪಥವನ್ನು ಬದಲಿಸಲು ಈ ವರದಿ ಸಹಕಾರ ನೀಡಬಹುದು ಎಂದು ಭಾವಿಸಿದ್ದೇನೆ’ ಎಂದು ಶ್ವೇತಾ ತೋಟಪಲ್ಲಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ