Stock Market Crash: ಸೆನ್ಸೆಕ್ಸ್ 2000ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ; 1 ಗಂಟೆಗೂ ಕಡಿಮೆ ಸಮಯದಲ್ಲಿ 8 ಲಕ್ಷ ಕೋಟಿ ನಷ್ಟ

ರಷ್ಯಾ- ಉಕ್ರೇನ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಫೆಬ್ರವರಿ 24ನೇ ತಾರೀಕಿನ ಗುರುವಾರದಂದು ಮಧ್ಯಾಹ್ನದ ಹೊತ್ತಿಗೆ ಸೆನ್ಸೆಕ್ಸ್ 2000 ಪಾಯಿಂಟ್ಸ್ ನೆಲ ಕಚ್ಚಿದ್ದರೆ, ನಿಫ್ಟಿ 600ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿದಿದೆ.

Stock Market Crash: ಸೆನ್ಸೆಕ್ಸ್ 2000ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ; 1 ಗಂಟೆಗೂ ಕಡಿಮೆ ಸಮಯದಲ್ಲಿ 8 ಲಕ್ಷ ಕೋಟಿ ನಷ್ಟ
ಸಾಂದರ್ಭಿಕ ಚಿತ್ರ
Updated By: Srinivas Mata

Updated on: Feb 24, 2022 | 2:28 PM

ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಫೆಬ್ರವರಿ 24ನೇ ತಾರೀಕಿನ ಗುರುವಾರ ಮಧ್ಯಾಹ್ನದ ಹೊತ್ತಿಗೆ ದಾಖಲೆ ಮಟ್ಟದಲ್ಲಿ ಕುಸಿತ ಕಂಡಿತು. ಸೆನ್ಸೆಕ್ಸ್ 2000ಕ್ಕೂ ಹೆಚ್ಚು ಪಾಯಿಂಟ್ಸ್ ಮತ್ತು ನಿಫ್ಟಿ 600ಕ್ಕೂ ಹೆಚ್ಚು ಪಾಯಿಂಟ್ಸ್ ನೆಲ ಕಚ್ಚಿತು. ಈ ವರದಿ ಸಿದ್ಧವಾಗುವ ಹೊತ್ತಿಗೆ ಸೆನ್ಸೆಕ್ಸ್ 1805.70 ಪಾಯಿಂಟ್ಸ್ ಅಥವಾ ಶೇ 3.16ರಷ್ಟು ಹಾಗೂ ನಿಫ್ಟಿ 555.60 ಪಾಯಿಂಟ್ಸ್ ಅಥವಾ ಶೇ 3.26ರಷ್ಟು ಕುಸಿತ ಕಂಡಿತ್ತು. ರಷ್ಯಾ- ಉಕ್ರೇನ್​ ಮಧ್ಯದ ಬಿಕ್ಕಟ್ಟು ಜಾಗತಿಕವಾಗಿ ಪ್ರಭಾವ ಬೀರಿದೆ. ಗುರುವಾರ ಬೆಳಗ್ಗೆಯಿಂದಲೇ ಭಾರೀ ಪ್ರಮಾಣದಲ್ಲಿ ಕುಸಿತದೊಂದಿಗೆ ಸೂಚ್ಯಂಕಗಳು ವಹಿವಾಟು ಶುರು ಮಾಡಿದವು. ಇದೇ ವೇಳೆ ಅಂತರರಾಷ್ಟ್ರೀಯ ಕಚ್ಚಾ ತೈಲ ದರದ ಬೆಲೆ ಬ್ಯಾರೆಲ್​ಗೆ 103 ಯುಎಸ್​ಡಿ ಆಯಿತು.

ಗುರುವಾರ ಬೆಳಗ್ಗೆ ವ್ಯವಹಾರದಲ್ಲಿ ಒಂದು ಗಂಟೆಗೂ ಕಡಿಮೆ ಸಮಯದಲ್ಲಿ ಹೂಡಿಕೆದಾರರ ಸಂಪತ್ತು 8 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಕರಗಿತು. ಆದ್ದರಿಂದ ಎಲ್ಲ ವಲಯದ ಷೇರುಗಳು ಇಳಿಕೆ ಆಯಿತು. ಬುಧವಾರದ ದಿನದ ಅಂತ್ಯಕ್ಕೆ ಬಿಎಸ್​ಇ ಲಿಸ್ಟೆಡ್​ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು 2,55,68,668.33 ಕೋಟಿ ರೂಪಾಯಿ ಇತ್ತು. ಗುರುವಾರದಂದು ಬೆಳಗ್ಗೆ 2,47,46,960.48 ಕೋಟಿ ರೂಪಾಯಿಗೆ ಕುಸಿಯಿತು.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ

ಹಿಂಡಾಲ್ಕೋ ಶೇ 0.61

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ

ಟಾಟಾ ಮೋಟಾರ್ಸ್ ಶೇ -8.18

ಹೀರೋ ಮೋಟೋಕಾರ್ಪ್ ಶೇ -7.66

ಯುಪಿಎಲ್​ ಶೇ -7.01

ಇಂಡಸ್​ಇಂಡ್ ಬ್ಯಾಂಕ್ ಶೇ -6.07

ಗ್ರಾಸಿಮ್ ಶೇ -5.82

ಇದನ್ನೂ ಓದಿ: Russia- Ukraine Crisis: ರಷ್ಯಾ- ಉಕ್ರೇನ್​ ಬಿಕ್ಕಟ್ಟಿನ ಮಧ್ಯೆ ನಿಮ್ಮ ಮನೆ ಬಜೆಟ್​ಗೆ ಎಂಥ ಘಾತ!

Published On - 2:27 pm, Thu, 24 February 22