Russia- Ukraine Crisis: ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ನಿಮ್ಮ ಮನೆ ಬಜೆಟ್ಗೆ ಎಂಥ ಘಾತ!
ರಷ್ಯಾ- ಉಕ್ರೇನ್ ಮಧ್ಯದ ಬಿಕ್ಕಟ್ಟು ಭಾರತೀಯ ಮನೆಗಳ ಬಜೆಟ್ ಮೇಲೆ ಹೇಗೆ ಪರಿಣಾಮ ಬೀರಬಹುದು ಹಾಗೂ ಅದೆಂಥ ಹೊಡೆತ ನೀಡಬಹುದು ಎಂಬ ವಿವರ ಇಲ್ಲಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವುದರಿಂದ (Russia- Ukraine Crisis) ಜಾಗತಿಕ ತೈಲ ಮಾರುಕಟ್ಟೆಗೆ “ಬೆಂಕಿ” ಹಚ್ಚಿದೆ. ಎಂಟು ವರ್ಷಗಳ ನಂತರ ಬ್ರೆಂಟ್ ಬ್ಯಾರಲ್ಗೆ 100 ಯುಎಸ್ಡಿ ಗಡಿಯನ್ನು ದಾಟಿದೆ. ಇಷ್ಟು ಸಮಯ ತೈಲ ಬೆಲೆ ಏರಿಕೆಯಿಂದ ಸ್ವಲ್ಪ ಮಟ್ಟಿಗಾದರೂ ನಿರಾಳರಾಗಿದ್ದ ಭಾರತದ ಗ್ರಾಹಕರು ಈಗ ಮತ್ತೆ ಹೆಚ್ಚಳದ ಹೊರೆಯನ್ನು ಅನುಭವಿಸಬೇಕಾಗುತ್ತದೆ. ಇನ್ನು ಪುಟಿನ್ರ ನಡೆಯು ಮನೆಯ ಬಜೆಟ್ ಅನ್ನು ಹೆಚ್ಚಿಸುವುದರಲ್ಲಿ ಅನುಮಾನ ಇಲ್ಲ. ಮಾರ್ಚ್ 7ನೇ ತಾರೀಕಿನಂದು ಪಂಚ ರಾಜ್ಯಗಳ ಚುನಾವಣೆ ಮತದಾನದ ಕೊನೆಯ ಘಟ್ಟ ಮುಗಿಯುತ್ತದೆ. ಅಲ್ಲಿಗೆ ಈ ತನಕ ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚಳಕ್ಕೆ ಬಿದ್ದಿದ್ದ ಬ್ರೇಕ್ ಕೂಡ ಕೊನೆ ಆಗಲಿದೆ. ಕಳೆದ ವರ್ಷದ ನವೆಂಬರ್ 4ನೇ ತಾರೀಕಿನಂದು ಸರ್ಕಾರದಿಂದ ಡೀಸೆಲ್ ಮೇಲಿನ ಅಬಕಾರಿ ಸುಂಕ 10 ರೂಪಾಯಿ ಮತ್ತು ಪೆಟ್ರೋಲ್ ಮೇಲೆ 5 ರೂಪಾಯಿ ಇಳಿಕೆ ಮಾಡಿದ ಮೇಲೆ ತೈಲ ಮಾರ್ಕೆಟಿಂಗ್ ಕಂಪೆನಿಗಳು ಬೆಲೆ ಹೆಚ್ಚಳ ಮಾಡಿಲ್ಲ.
ರಾಜತಾಂತ್ರಿಕ ಮಾತುಕತೆಗಳು ಫಲಪ್ರದ ಆಗದ ಹಿನ್ನೆಲೆಯಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡುವ ನಿರ್ಧಾರವನ್ನು ವ್ಲಾಡಿಮಿರ್ ಪುಟಿನ್ ತೆಗೆದುಕೊಂಡಿದ್ದರಿಂದ ಕಚ್ಚಾ ತೈಲ ಮಾರುಕಟ್ಟೆ ಮತ್ತು ಅನಿಲ ಬೆಲೆಗಳ ಮೇಲೂ ಪರಿಣಾಮ ಆಗಿ, ಭಾರತದಂಥ ಪ್ರಮುಖ ತೈಲ ಆಮದುದಾರ ದೇಶಗಳ ಮೇಲೆ ಆಗಲಿದೆ. ಎಫ್ಎಸ್ಡಿಸಿ ಸಭೆಯ ನಂತರ ಮಾತನಾಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯು ಭಾರತದ ಆರ್ಥಿಕ ಸ್ಥಿರತೆಗೆ ಸವಾಲಾಗಿ ಪರಿಣಮಿಸಲಿದೆ. ಈಗಿನ ಸನ್ನಿವೇಶದ ಮೇಲೆ ಸರ್ಕಾರ ಕಣ್ಣಿಟ್ಟಿದೆ ಎಂದು ಹೇಳಿದ್ದರು. ಆರ್ಥಿಕ ಚೇತರಿಕೆ ಕಡೆಗೆ ಗಮನ ನೆಟ್ಟು, ಹಣದುಬ್ಬರದ ಬಗ್ಗೆ ಚಿಂತೆ ಇಲ್ಲದಂತೆ ಇದ್ದದ್ದು ಉಕ್ರೇನ್ ವಿರುದ್ಧದ ರಷ್ಯಾ ಸೇನಾ ಕಾರ್ಯಾಚರಣೆಯಿಂದಾಗಿ ಆತಂಕ ತಂದಿದೆ. ಈಗಿನ ಬದಲಾವಣೆಯ ಕಾರಣಕ್ಕೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಮ್ಮ ಆಯ್ಕೆಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕಾಗಬಹುದು. ಏಕೆಂದರೆ ಹಣದುಬ್ಬರವನ್ನು ಹತೋಟಿಯಲ್ಲಿ ಇಡಲು ಅನಿವಾರ್ಯ ಎಂಬಂತಾಗಿದೆ.
ಕಳೆದ ವರ್ಷದಂತೆಯೇ ಈಗಲೂ ತೈಲದ ಮೇಲೆ ತೆರಿಗೆ ಇಳಿಕೆ ಮಾಡಿದಲ್ಲಿ ಗ್ರಾಹಕರ ಮೇಲೆ ಹೊರೆ ಇಳಿಕೆ ಆಗಲಿದೆ. ಯಾವಾಗ ಮಧ್ಯಪ್ರವೇಶದ ಅಗತ್ಯ ಕಂಡುಬರುತ್ತದೋ ಆಗ ಸಾರ್ವಜನಿಕವಾಗಿ ಸರ್ಕಾರ ಮುಂದೆ ಬರಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮುಂದಿನ ಹಣಕಾಸು ವರ್ಷಕ್ಕೆ ಸರ್ಕಾರವು ಪ್ರಮುಖ ಖರ್ಚು ಯೋಜನೆಗಳನ್ನು ಹೊಂದಿರುವಾಗ ಮತ್ತು ದರವನ್ನು ಬಿಗಿಗೊಳಿಸುವುದರಿಂದ ಸಾಲವನ್ನು ದುಬಾರಿ ಆಗಿಸಬಹುದು ಎಂಬ ಸಮಯದಲ್ಲಿ ಆ ಆಯ್ಕೆಯನ್ನು ಎಷ್ಟು ಕಾಲ ಬಳಸಿಕೊಳ್ಳಬಹುದು ಎಂಬುದನ್ನು ನೋಡಬೇಕಾಗಿದೆ.
ಇದನ್ನೂ ಓದಿ: Russia-Ukraine Crisis: ರಷ್ಯಾ- ಉಕ್ರೇನ್ ಉದ್ವಿಗ್ನತೆಯ ಎಫೆಕ್ಟ್; ಭಾರತದಲ್ಲೂ ಈ ವಸ್ತುಗಳ ಬೆಲೆಯೇರಿಕೆ ಸಾಧ್ಯತೆ
Published On - 12:19 pm, Thu, 24 February 22