
ನವದೆಹಲಿ, ಆಗಸ್ಟ್ 20: ಅಮೆರಿಕದ ಮಾರುಕಟ್ಟೆಯಲ್ಲಿ ಭಾರತದ ಸರಕುಗಳಿಗೆ (Indian goods) ಪ್ರವೇಶ ಸಿಗುವುದು ಕಷ್ಟವೆನಿಸಿದಲ್ಲಿ ರಷ್ಯಾ ಮಾರುಕಟ್ಟೆಗೆ ಬರಬಹುದು ಎಂದು ಭಾರತದಲ್ಲಿರುವ ರಷ್ಯನ್ ರಾಯಭಾರ ಕಚೇರಿ ಅಧಿಕಾರಿ ರೋಮನ್ ಬಾಬುಶ್ಕಿನ್ (Roman Babushkin) ಹೇಳಿದ್ದಾರೆ. ರಷ್ಯನ್ ತೈಲವನ್ನು ಖರೀದಿಸುತ್ತಿರುವ ಕಾರಣಕ್ಕೆ ಭಾರತದ ಮೇಲೆ ಶೇ. 50ರಷ್ಟು ಟ್ಯಾರಿಫ್ ಹಾಕಿದ ಅಮೆರಿಕದ ವರ್ತನೆಯನ್ನು ಬಾಬುಶ್ಕಿನ್ ಖಂಡಿಸಿದ್ದು, ಅದು ಹೊಸ ವಸಾಹತುಶಾಹಿ ವರ್ತನೆ (Neocolonial behaviour) ಎಂದು ಜರಿದಿದ್ದಾರೆ.
‘ಯಾವುದೇ ಏಕಪಕ್ಷೀಯ ನಿರ್ಧಾರಗಳು ಸರಬರಾಜು ಸರಪಳಿಗೆ ಧಕ್ಕೆ ತರುತ್ತವೆ. ಅಭಿವೃದ್ಧಿಶೀಲ ದೇಶಗಳ ಇಂಧನ ಭದ್ರತೆಗೆ ಅಪಾಯ ತರುತ್ತವೆ. ಪಾಶ್ಚಿಮಾತ್ಯ ಶಕ್ತಿಗಳ ವರ್ತನೆ ಹೊಸ ವಸಾಹತುಶಾಹಿ ಧೋರಣೆಯಂತಿದೆ. ಭಾರತದ ಮೇಲೆ ಅವು ಹಾಕುತ್ತಿರುವ ಒತ್ತಡ ನ್ಯಾಯಯುತ ಅಲ್ಲ’ ಎಂದು ರಷ್ಯನ್ ರಾಯಭಾರ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಭಾರತದ ವಿರುದ್ಧ ಟ್ರಂಪ್ ಕಿವಿಯೂದುತ್ತಿರುವವರು ಯಾರು? ಟ್ರಂಪ್ಗೆ ಇವರು ಟ್ಯಾರಿಫ್ ಗುರು
ಇನ್ನೂ ಮುಂದುವರಿದ ಅವರು, ಭಾರತವು ರಷ್ಯನ್ ತೈಲ ಖರೀದಿಸುವುದಕ್ಕೂ ಪಾಶ್ಚಿಮಾತ್ಯ ದೇಶಗಳ ವರ್ತನೆಗೂ ಸಂಬಂಧ ಇಲ್ಲ ಎಂದು ಬೇರಾವುದೋ ಮಸಲತ್ತಿನ ವಾಸನೆಯನ್ನು ಬಾಬುಶ್ಕಿನ್ ಗ್ರಹಿಸಿದ್ದಾರೆ.
ಎಎನ್ಐನಿಂದ ಎಕ್ಸ್ ಪೋಸ್ಟ್
#WATCH | Delhi | On US sanctioning 50% tariff on India, Roman Babushkin, Chargé d’Affaires of the Russian Embassy in India, says, “..If Indian goods are facing difficulties entering the US market, the Russian market is welcoming Indian exports…” pic.twitter.com/DjeUdmSYbJ
— ANI (@ANI) August 20, 2025
‘ಒಂದು ವೇಳೆ ಭಾರತವು ರಷ್ಯನ್ ತೈಲ ಖರೀದಿಸುವುದನ್ನು ನಿಲ್ಲಿಸಿತೆನ್ನಿ. ಇದರಿಂದ ಪಾಶ್ಚಿಮಾತ್ಯ ಶಕ್ತಿಯೊಂದಿಗೆ ಸಮಾನ ಸಹಕಾರ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ, ಈ ಪಶ್ಚಿಮದ ಸ್ವಭಾವವೇ ಅಂಥದ್ದು. ಇತ್ತೀಚಿನ ವರ್ಷಗಳಲ್ಲಿ ಇದು ಬಹಳ ಸ್ಪಷ್ಟವಾಗಿದೆ’ ಎಂದು ರೋಮನ್ ಬಾಬುಶ್ಕಿನ್ ಅವರು ಅಮೆರಿಕದ ನೀತಿಯನ್ನು ಕುಟುಕಿದ್ದಾರೆ.
ಭಾರತವು ರಷ್ಯಾದಿಂದ ತೈಲ ಖರೀದಿಸೋದನ್ನು ನಿಲ್ಲಿಸಬಹುದು ಅಂತ ಅನಿಸೋದಿಲ್ಲ. ತಮಗೆ ಭಾರತ ಎದುರಿಸುತ್ತಿರುವ ಸಮಸ್ಯೆ ಏನು ಎಂದು ಗೊತ್ತಿದೆ ಎಂದು ರಷ್ಯನ್ ರಾಜತಾಂತ್ರಿಕ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಒಂದೇ ಒಂದು ನಿಷೇಧವು ಭಾರತದ ಡಿಜಿಟಲ್ ಆರ್ಥಿಕತೆಯನ್ನೇ ಸ್ಥಗಿತಗೊಳಿಸಬಹುದು: ಗೌತಮ್ ಅದಾನಿ ಎಚ್ಚರಿಕೆಯ ಕರೆಗಂಟೆ
‘ಪಾಶ್ಚಿಮಾತ್ಯ ಶಕ್ತಿಗಳು ನಿಮ್ಮನ್ನು ಟೀಕಿಸುತ್ತಿವೆ ಎಂದರೆ ನೀವು ಸರಿಯಾದ ಕೆಲಸವನ್ನೇ ಮಾಡುತ್ತಿದ್ದೀರಿ ಎಂದರ್ಥ. ಏನೇ ಆಗಲಿ, ಯಾವುದೇ ಸವಾಲು ಎದುರಾಗಲಿ ನಾವು ಯಾವುದೇ ಸಮಸ್ಯೆಗಳನ್ನು ನಿವಾರಿಸಲು ಬದ್ಧರಾಗಿದ್ದೇವೆ. ಉಕ್ರೇನ್ನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮೋದಿಜಿ ಅವರಿಗೆ ಪುಟಿನ್ ಫೋನ್ ಕರೆ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ರಷ್ಯಾಗೆ ಭಾರತ ಎಷ್ಟು ಮುಖ್ಯ ಎಂಬುದನ್ನು ಇದು ತೋರಿಸುತ್ತದೆ. ಇಬ್ಬರಿಗೂ ತೃಪ್ತಿಯಾಗುವ ರೀತಿಯಲ್ಲಿ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಮರ್ಥರಾಗಿದ್ದೇವೆ’ ಎಂದು ರೋಮನ್ ಬಾಬುಶ್ಕಿನ್ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ