ಒಂದೇ ಒಂದು ನಿಷೇಧವು ಭಾರತದ ಡಿಜಿಟಲ್ ಆರ್ಥಿಕತೆಯನ್ನೇ ಸ್ಥಗಿತಗೊಳಿಸಬಹುದು: ಗೌತಮ್ ಅದಾನಿ ಎಚ್ಚರಿಕೆಯ ಕರೆಗಂಟೆ
Gautam Adani speaks at IIT-Kharagpur 75th foundation day: ಈ ಜಗತ್ತು ಸಾಂಪ್ರದಾಯಿಕ ಯುದ್ಧದಿಂದ ಟೆಕ್ನಾಲಜಿ ಪ್ರೇರಿತ ಯದ್ಧದತ್ತ ಹೊರಳಿದೆ. ಈ ಹೊಸ ಮಾದರಿ ಯುದ್ಧಕ್ಕೆ ನಾವು ಸಜ್ಜಾಗಬೇಕು ಎಂದು ಗೌತಮ್ ಅದಾನಿ ಹೇಳಿದ್ದಾರೆ. ಐಐಟಿ ಖರಗ್ಪುರ್ನ 75ನೇ ಸಂಸ್ಥಾಪನಾ ದಿನದಂದು ಅವರು ಮಾತನಾಡುತ್ತಿದ್ದರು. ಇವತ್ತಿನ ಯುದ್ಧ ಅಗೋಚರ ಆಗಿದೆ. ರಣಭೂಮಿಯಲ್ಲಿ ಯುದ್ಧ ನಡೆಯಲ್ಲ, ಸರ್ವರ್ ಫಾರ್ಮ್ಗಳಲ್ಲಿ ಯುದ್ಧ ಇರುತ್ತದೆ ಎಂದು ವ್ಯಾಖ್ಯಾನಿಸಿದ್ದಾರೆ.

ಖರಗಪುರ್, ಪ.ಬಂಗಾಳ, ಆಗಸ್ಟ್ 20: ‘ನಾವು ಮುಖ್ಯ ಘಟ್ಟದಲ್ಲಿ ನಿಂತಿದ್ದೇವೆ. ವಿಶ್ವವು ಸಾಂಪ್ರದಾಯಿಕ ಯುದ್ಧದಿಂದ ತಂತ್ರಜ್ಞಾನ ಬಲದ ಯುದ್ಧದತ್ತ ಸಾಗುತ್ತಿದೆ. ಇದಕ್ಕೆ ನಾವು ಹೇಗೆ ಸಜ್ಜಾಗುತ್ತೇವೆ ಎಂಬುದು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ’ ಎಂದು ಉದ್ಯಮಿ ಗೌತಮ್ ಅದಾನಿ (Gautam Adani) ಹೇಳಿದ್ದಾರೆ. ಪಶ್ಚಿಮ ಬಂಗಾಳದ ಖರಗ್ಪುರ್ನ ಐಐಟಿ ಶಿಕ್ಷಣ ಸಂಸ್ಥೆಯ 75ನೇ ಸಂಸ್ಥಾಪನಾ ದಿನದ (IIT Kharagpur Foundation Day) ಅಂಗವಾಗಿ ಮೊನ್ನೆ (ಆ. 18) ನಡೆದ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಭಾರತಕ್ಕೆ ಎದುರಾಗಿರುವ ಅಪಾಯ ಎಂಥದ್ದು, ಯುದ್ಧದ ಸ್ವರೂಪ ಹೇಗೆ ಬದಲಾಗಿದೆ, ಡಿಜಿಟಲ್ ಆರ್ಥಿಕತೆ ಹೇಗೆ ಅಪಾಯದಲ್ಲಿದೆ, ನಿಜವಾದ ಸ್ವಾತಂತ್ರ್ಯ ಯಾವುದು ಎಂಬ ವಿಚಾರಗಳ ಬಗ್ಗೆ ಅದಾನಿ ಅಭಿಪ್ರಾಯ ವ್ಯಕ್ತಪಡಿಸಿದರು.
ಡಾಟಾ ಸೆಂಟರ್ಗಳ ಮೂಲಕ ಸಾಮ್ರಾಜ್ಯ ನಿರ್ಮಾಣ
‘ಇವತ್ತು ನಾವು ಮಾಡಬೇಕಾದ ಯುದ್ಧವು ಬಹುತೇಕ ಅಗೋಚರವಾಗಿರುತ್ತದೆ. ಈ ಯುದ್ಧವು ರಣಭೂಮಿಯಲ್ಲಲ್ಲ, ಸರ್ವರ್ ಫಾರ್ಮ್ಗಳಲ್ಲಿ ನಡೆಯುತ್ತದೆ. ಗನ್ಗಳಲ್ಲ, ಅಲ್ಗಾರಿದಂಗಳು ಶಸ್ತ್ರಗಳಾಗಿರುತ್ತವೆ. ಸಾಮ್ರಾಜ್ಯಗಳು ಭೂಮಿಯ ಮೇಲೆ ನಿರ್ಮಾಣ ಆಗುವುದಿಲ್ಲ. ಬದಲಾಗಿ ಅವು ಡಾಟಾ ಸೆಂಟರ್ಗಳಲ್ಲಿ ನಿರ್ಮಾಣ ಆಗುತ್ತವೆ. ಸೇನೆಗಳೆಂದರೆ ತುಕಡಿಗಳಲ್ಲ, ಬೋಟ್ ನೆಟ್ಗಳಾಗಿರುತ್ತವೆ’ ಎಂದು ಅದಾನಿ ಗ್ರೂಪ್ ಸಂಸ್ಥಾಪಕರಾದ ಅವರು ಹೇಳಿದರು.
ಇದನ್ನೂ ಓದಿ: ಭಾರತದಲ್ಲಿ ಅತ್ಯಾಧುನಿಕ ಪೋಸ್ಟಲ್ ಟೆಕ್ನಾಲಜಿ; ವಿಶ್ವದ ದರ್ಜೆ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಮಾರ್ಪಾಡಾಗಲಿದೆ ಇಂಡಿಯಾ ಪೋಸ್ಟ್
‘ಇಲ್ಲಿ ಕಹಿ ಸತ್ಯ ಅಡಗಿದೆ. ತಂತ್ರಜ್ಞಾನ ಅವಲಂಬನೆ ವಿಷಯಕ್ಕೆ ಬಂದರೆ, ಶೇ. 90ರಷ್ಟು ಸೆಮಿಕಂಡಕ್ಟರ್ಗಳು ಆಮದುಗೊಳ್ಳುತ್ತವೆ. ಒಂದೇ ಒಂದು ಅಡೆತಡೆ ಅಥವಾ ನಿಷೇಧ ನಿರ್ಮಾಣ ಆದರೆ ನಮ್ಮ ಡಿಜಿಟಲ್ ಆರ್ಥಿಕತೆಯೇ ಸ್ಥಗಿತಗೊಳ್ಳಬಹುದು. ಭಾರತದ ಗಡಿಯಲ್ಲಿನ ಒಂದೊಂದು ಸಣ್ಣ ಡಾಟಾ ಕೂಡ ವಿದೇಶೀ ಅಲ್ಗಾರಿದಂಗಳಿಗೆ ಕಚ್ಛಾ ಸಾಮಗ್ರಿಯಾಗಬಹುದು. ವಿದೇಶೀ ಸಂಪತ್ತು ಸೃಷ್ಟಿಯಾಗಬಹುದು. ವಿದೇಶೀ ಪ್ರಾಬಲ್ಯ ಮತ್ತಷ್ಟು ಗಟ್ಟಿಗೊಳ್ಳಬಹುದು’ ಎಂದು ಡಿಜಿಟಲ್ ಅವಲಂಬನೆ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ನಿಜವಾದ ಸ್ವಾತಂತ್ರ್ಯ ಬೇಕು…
ಶೇ. 85ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಒಂದು ಜಾಗತಿಕ ರಾಜಕೀಯ ವಿಚಲನೆ ಸಂಭವಿಸಿದಲ್ಲಿ ನಮ್ಮ ಪ್ರಗತಿಯೇ ಕುಂಠಿತಗೊಳ್ಳಬಹುದು. ಮಿಲಿಟರಿ ವಿಚಾರ ಹೇಳುವುದಾದರೆ, ಹಲವು ಪ್ರಮುಖ ಸಿಸ್ಟಂಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಬೇರೆ ದೇಶಗಳ ರಾಜಕೀಯ ಇಚ್ಚೆಗಳಿಗೆ ನಮ್ಮ ರಾಷ್ಟ್ರೀಯ ಭದ್ರತೆ ಅಪಾಯಕ್ಕೆ ಸಿಲುಕಬೇಕಾಗುತ್ತದೆ. ಬೇರೆ ದೇಶಗಳ ಸಪ್ಲೈ ಚೈನ್ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಈ ಅವಲಂಬನೆಯಿಂದ ಬಿಡುಗಡೆ ಹೊಂದುವ ಸ್ವಾತಂತ್ರ್ಯಕ್ಕಾಗಿ ನಾವು ಹೋರಾಡಬೇಕಾಗಿದೆ. ನಿಜವಾಗಿಯೂ ಸ್ವತಂತ್ರರಾಗಬೇಕಾದರೆ ಸ್ವಾವಲಂಬನೆಯ ಸ್ವಾತಂತ್ರ್ಯ ಪಡೆಯಬೇಕು ಎಂದು ಗೌತಮ್ ಅದಾನಿ ಕಿವಿಮಾತು ಹೇಳಿದರು.
ಇದನ್ನೂ ಓದಿ: ಚ್ಯಾಟ್ಜಿಪಿಟಿ ಗೋ ಪ್ಲಾನ್ ಬಿಡುಗಡೆ: ತಿಂಗಳಿಗೆ 399 ರೂ; ಇದರ ವಿಶೇಷತೆ ತಿಳಿದಿರಿ
ಹೋರಾಟ ಮುಂದುವರಿದಿದೆ, ಶಸ್ತ್ರಾಸ್ತ್ರ ಬದಲಾಗಿದೆ
‘80 ವರ್ಷದ ಹಿಂದೆ ಈ ದೇಶದ ಯುವಕರು, ಯುವತಿಯರು ನಮ್ಮ ನೆಲವನ್ನು ಆಳುವ ಹಕ್ಕಿಗಾಗಿ ಹೋರಾಟ ಮಾಡಿದ್ದರು. ಈಗ ಅದೇ ಹೋರಾಟ ಮುಂದುವರಿದಿದೆ. ಆದರೆ, ಶಸ್ತ್ರಾಸ್ತ್ರಗಳು ಬದಲಾಗಿವೆ. ಈ ಸತ್ಯವನ್ನು ಇಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಅರ್ಥ ಮಾಡಿಕೊಳ್ಳಬೇಕು. ನೀವು ಮುಂದಿನ ತಲೆಮಾರಿನ ಸ್ವಾತಂತ್ರ್ಯ ಹೋರಾಟಗಾರರಾಗಿರುತ್ತೀರಿ’ ಎಂದು ಐಐಟಿ ಖರಗ್ಪುರ್ನ ವಿದ್ಯಾರ್ಥಿಗಳಿಗೆ ಅದಾನಿ ಕರೆ ನೀಡಿದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:04 pm, Wed, 20 August 25




