ಹೆಚ್ಚುತ್ತಿರುವ ಹಣದುಬ್ಬರವು (Inflation) ಬಹುತೇಕ ದೇಶಗಳ ಕಂಪನಿಗಳಲ್ಲಿ ವೇತನ ಹೆಚ್ಚಳಕ್ಕೆ (Salary Increase) ಅಡ್ಡಿಯಾಗಿ ಪರಿಣಮಿಸಿದೆ. ಆದಾಗ್ಯೂ, ವಿಶ್ವದ ಶೇಕಡಾ 37ರಷ್ಟು ದೇಶಗಳಲ್ಲಿ 2023ರಲ್ಲಿ ಉದ್ಯೋಗಿಗಳ ವೇತನ ಹೆಚ್ಚಳವಾಗಲಿದೆ ಎಂದು ಹೊಸ ಸಮೀಕ್ಷಾ ವರದಿಯೊಂದು (Survey) ತಿಳಿಸಿದೆ. ಆದರೆ, ವೇತನ ಹೆಚ್ಚಳದ ವಿಚಾರದಲ್ಲಿ ಬ್ರಿಟನ್ ಮಾತ್ರ ತೀರಾ ಕಳಪೆ ಸ್ಥಾನದಲ್ಲಿದೆ ಎಂದು ವರ್ಕ್ಫೊರ್ಸ್ ಕನ್ಸಲ್ಟೆನ್ಸಿ ‘ಇಸಿಎ ಇಂಟರ್ನ್ಯಾಷನಲ್’ ತಿಳಿಸಿದೆ.
‘ವರ್ಕ್ಫೊರ್ಸ್ ಕನ್ಸಲ್ಟೆನ್ಸಿ ಇಸಿಎ ಇಂಟರ್ನ್ಯಾಷನಲ್’ ಸಮೀಕ್ಷೆ 2000ನೇ ಇಸವಿಯಲ್ಲಿ ಆರಂಭಗೊಂಡಿತ್ತು. ಆ ಬಳಿಕದಲ್ಲಿ ಬ್ರಿಟನ್ನ ಉದ್ಯೋಗಿಗಳಿಗೆ ಶೇಕಡಾ 3.5ರ ಸರಾಸರಿ ವೇತನ ಹೆಚ್ಚಳ ಆಗಿದ್ದರೂ ಶೇಕಡಾ 9.1ರ ಸರಾಸರಿ ಹಣದುಬ್ಬರದಿಂದಾಗಿ ಅವರ ರಿಯಲ್ ಟರ್ಮ್ಸ್ ವೇತನದಲ್ಲಿ ಶೇಕಡಾ 5.6ರ ಕುಸಿತವಾಗಲಿದೆ. 2023ರಲ್ಲಿ ಅವರ ವೇತನದಲ್ಲಿ ಇನ್ನೂ ಶೆಕಡಾ 4ರಷ್ಟು ಕುಸಿತವಾಗಲಿದೆ ಎಂದು ಸಮೀಕ್ಷೆ ತಿಳಿಸಿರುವುದಾಗಿ ‘ಬ್ಲೂಮ್ಬರ್ಗ್’ ತಾಣ ವರದಿ ಮಾಡಿದೆ. ಮುಂದಿನ ವರ್ಷದ ಹಣದುಬ್ಬರ ಮುನ್ಸೂಚನೆ ಆಧಾರದಲ್ಲಿ ಅಮೆರಿಕದ ಉದ್ಯೋಗಿಗಳ ರಿಯಲ್ ಟರ್ಮ್ಸ್ ವೇತನದಲ್ಲಿ ಶೇಕಡಾ 4.5ರ ಕುಸಿತವಾಗಿವ ಸಾಧ್ಯತೆ ಇದೆ. ಹೀಗಾಗಿ ಆ ದೇಶದ ಉದ್ಯೋಗಿಗಳಿಗೆ ಕೇವಲ ಶೇಕಡಾ 1ರಷ್ಟು ರಿಯಲ್ ಟರ್ಮ್ಸ್ ವೇತನ ಹೆಚ್ಚಳ ಸಿಗಬಹುದಷ್ಟೇ ಎಂದು ಸಮೀಕ್ಷೆ ತಿಳಿಸಿದೆ.
ಇದನ್ನೂ ಓದಿ: ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಇನ್ಫೋಸಿಸ್ನಿಂದ ಪಡೆಯುವ ಡಿವಿಡೆಂಡ್ ಎಷ್ಟು? ಇಲ್ಲಿದೆ ಮಾಹಿತಿ
ಜಾಗತಿಕವಾಗಿ 2023 ಉದ್ಯೋಗಿಗಳಿಗೆ ಕಠಿಣ ವರ್ಷವಾಗಿರಲಿದೆ ಎಂಬುದನ್ನು ನಮ್ಮ ಸಮೀಕ್ಷೆ ಸೂಚಿಸುತ್ತದೆ ಎಂದು ‘ಇಸಿಎ ಇಂಟರ್ನ್ಯಾಷನಲ್’ನ ಏಷ್ಯಾ ವಿಭಾಗದ ಪ್ರಾದೇಶಿಕ ನಿರ್ದೇಶಕ ಲೀ ಕ್ವಾನ್ ತಿಳಿಸಿದ್ದಾರೆ. ಸಮೀಕ್ಷೆಗೆ ಒಳಗಾದ ದೇಶಗಳ ಪೈಕಿ ಮೂರನೇ ಒಂದು ಭಾಗದಷ್ಟರಲ್ಲಿ ಮಾತ್ರ ರಿಯಲ್ ಟರ್ಮ್ಸ್ ಅಥವಾ ನೈಜ ಅವಧಿಯ ವೇತನ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ಈ ದೇಶಗಳಲ್ಲಿ ಈ ವರ್ಷಕ್ಕಿಂತ ಹೆಚ್ಚಿನ ವೇತನ ಹೆಚ್ಚಳ ನಿರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
68 ದೇಶಗಳ 360 ಕಂಪನಿಗಳಿಂದ ಪಡೆದ ಮಾಹಿತಿ ಆಧಾರದಲ್ಲಿ ‘ಇಸಿಎ ಇಂಟರ್ನ್ಯಾಷನಲ್’ ಸಮೀಕ್ಷಾ ವರದಿ ಸಿದ್ಧಪಡಿಸಿದೆ. ಉತ್ತಮ ರಿಯಲ್ ಟರ್ಮ್ಸ್ ಅಥವಾ ನೈಜ ಅವಧಿಯ ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವ ಅಗ್ರ 10 ದೇಶಗಳ ಪಟ್ಟಿ ಶೇಕಡಾವಾರು ಸಹಿತ ಇಲ್ಲಿ ನೀಡಲಾಗಿದೆ.
ಅಗ್ರ ಹತ್ತು ದೇಶಗಳ ಪಟ್ಟಿ
ಭಾರತ (4.6%)
ವಿಯೆಟ್ನಾಂ (4.0%)
ಚೀನಾ (3.8%)
ಬ್ರೆಜಿಲ್ (3.4%)
ಸೌದಿ ಅರೇಬಿಯಾ (2.3%)
ಮಲೇಷ್ಯಾ (2.2%)
ಕಾಂಬೋಡಿಯಾ (2.2%)
ಥಾಯ್ಲೆಂಡ್ (2.2%)
ಒಮಾನ್ (2.0%)
ರಷ್ಯಾ (1.9%)
ವೇತನದಲ್ಲಿ ಕಡಿತದ ಸಾಧ್ಯತೆ ಇರುವ ದೇಶಗಳ ಪಟ್ಟಿ ಶೇಕಡಾವಾರು ಸಹಿತ ಇಲ್ಲಿ ನೀಡಲಾಗಿದೆ.
ಪಾಕಿಸ್ತಾನ (-9.9%)
ಘನಾ (-11.9%)
ಟರ್ಕಿ (-14.4%)
ಶ್ರೀಲಂಕಾ (-20.5%)
ಅರ್ಜೆಂಟೀನಾ (-26.1%)
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:17 pm, Thu, 27 October 22