ನವದೆಹಲಿ: ಬ್ರಿಟನ್ನ (UK) ನೂತನ ಪ್ರಧಾನಿ ರಿಷಿ ಸುನಕ್ (Rishi Sunak) ಪತ್ನಿ ಅಕ್ಷತಾ ಮೂರ್ತಿ (Akshata Murty) ಶ್ರೀಮಂತ ಹಿನ್ನೆಲೆ ಹೊಂದಿರುವವರು. ಇವರ ತಂದೆ ನಾರಾಯಣ ಮೂರ್ತಿ ಇನ್ಫೋಸಿಸ್ (Infosys) ಸಹ ಸಂಸ್ಥಾಪಕರು. ಅಕ್ಷತಾ ಕೂಡ ಕಂಪನಿಯಲ್ಲಿ ಷೇರು ಹೊಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅಕ್ಷತಾ ಅವರು 2022ರಲ್ಲಿ ಇನ್ಫೋಸಿಸ್ನಿಂದ 126.61 ಕೋಟಿ ರೂ. ಡಿವಿಡೆಂಡ್ ಅಥವಾ ಲಾಭಾಂಶ ಪಡೆದಿರುವ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಇದೀಗ 23ನೇ ಹಣಕಾಸು ವರ್ಷದಲ್ಲಿ ಅವರು ಎಷ್ಟು ಮಧ್ಯಂತರ ಲಾಭಾಂಶ ಪಡೆಯಲಿದ್ದಾರೆ ಎಂಬುದೂ ತಿಳಿದುಬಂದಿದೆ.
ಸೆಪ್ಟೆಂಬರ್ 30ರ ಲೆಕ್ಕಾಚಾರದ ಪ್ರಕಾರ ಅಕ್ಷತಾ ಅವರು ಇನ್ಫೋಸಿಸ್ನಲ್ಲಿ ಶೇಕಡಾ 0.93ರಷ್ಟು, ಅಂದರೆ 3,89,57,096 ಷೇರುಗಳನ್ನು ಹೊಂದಿದ್ದಾರೆ. ಈ ಮಾಹಿತಿ ಕಂಪನಿಯು ಸೆಪ್ಟೆಂಬರ್ನಲ್ಲಿ ಷೇರು ಮಾರುಕಟ್ಟೆಗೆ ಸಲ್ಲಿಸಿದ ದಾಖಲೆಗಳಿಂದ ತಿಳಿದುಬಂದಿದೆ. 82.81ರ ರೂಪಾಯಿ ವಿನಿಮಯ ಮೌಲ್ಯದ ಲೆಕ್ಕಾಚಾರ ಪ್ರಕಾರ ಅಕ್ಷತಾ ಹೊಂದಿರುವ ಷೇರುಗಳ ಮೌಲ್ಯ 717 ದಶಲಕ್ಷ ರೂ. (5,944 ಕೋಟಿ ರೂ.) ಆಗುತ್ತದೆ. ಬ್ರಿಟಿಷ್ ದೊರೆ ಮೂರನೇ ಕಿಂಗ್ ಚಾರ್ಲ್ಸ್ ಆಸ್ತಿ ಮೌಲ್ಯವೂ ಇದಕ್ಕಿಂತ ಕಡಿಮೆ, ಅಂದರೆ 500ರಿಂದ 600 ದಶಲಕ್ಷ ರೂ. ಎಂದು ಭಾವಿಸಲಾಗಿದೆ.
23ನೇ ಹಣಕಾಸು ವರ್ಷಕ್ಕೆ ಇನ್ಫೋಸಿಸ್ ಪ್ರತಿ ಷೇರಿಗೆ 16.50ರ ಮಧ್ಯಂತರ ಡಿವಿಡೆಂಡ್ ಘೋಷಿಸಿದೆ. ಅಕ್ಟೋಬರ್ 27ರಂದು ಕಂಪನಿ ಈ ಘೋಷಣೆ ಮಾಡಿದೆ. ಇದರಂತೆ, ಅಕ್ಷತಾ ಮೂರ್ತಿ 64.27 ಕೋಟಿ ರೂ. ಪಡೆಯಲು ಅರ್ಹರಾಗಿರುತ್ತಾರೆ.
ಇದನ್ನೂ ಓದಿ: ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಇನ್ಫೋಸಿಸ್ನಿಂದ ಈ ವರ್ಷ ಪಡೆದ ಲಾಭಾಂಶವೆಷ್ಟು?
22ನೇ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಪ್ರತಿ ಷೇರಿಗೆ 15 ರೂ. ಮಧ್ಯಂತರ ಡಿವಿಡೆಂಡ್ ಘೋಷಿಸಿತ್ತು. ಇದರಂತೆ ಅಕ್ಷತಾ 120.76 ಕೋಟಿ ಡಿವಿಡೆಂಡ್ ಪಡೆದಂತಾಗಿದೆ. ಇದಲ್ಲದೆ ಒಟ್ಟು 27 ರೂ.ನ ಒಟ್ಟು 105 ಕೋಟಿ ಡಿವಿಡೆಂಡ್ ಅವರಿಗೆ ದೊರೆತಿದೆ.
ಅಕ್ಷತಾ ಮೂರ್ತಿ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಓದುತ್ತಿದ್ದಾಗ ಸುನಕ್ ಅವರನ್ನು ಭೇಟಿಯಾಗಿದ್ದರು. ಸುನಕ್ ಆಗ ಆಕ್ಸಫರ್ಡ್ನಲ್ಲಿ ಪದವಿ ಪಡೆದಿದ್ದರು. ಬಳಿಕ ಇಬ್ಬರೂ 2009ರಲ್ಲಿ ಮದುವೆಯಾದರು. ಅಕ್ಷತಾ-ಸುನಕ್ ದಂಪತಿಗೆ ಇಬ್ಬರು ಮಗಳಂದಿರಿದ್ದಾರೆ.
ಬ್ರಿಟನ್ನ ನೂತನ ಪ್ರಧಾನಿಯಾಗಿ ರಿಷಿ ಸುನಕ್ ಮಂಗಳವಾರ ಅಧಿಕಾರ ಸ್ವೀಕರಿಸಿದ್ದರು. ಬ್ರಿಟನ್ ಅರ್ಥವ್ಯವಸ್ಥೆ ಸುಧಾರಿಸಲು ಸಾಧ್ಯವಾಗದ್ದರಿಂದ ಲಿಜ್ ಟ್ರಸ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಸುನಕ್ ಅವರನ್ನು ಆಯ್ಕೆ ಮಾಡಲಾಗಿತ್ತು.
ಚರ್ಚೆಗೀಡಾಗಿತ್ತು ಅಕ್ಷತಾ ಆದಾಯ
ಅಕ್ಷತಾ ಮೂರ್ತಿ ಅವರು ವಿದೇಶಗಳಲ್ಲಿ ಗಳಿಸುತ್ತಿರುವ ಆದಾಯಕ್ಕೆ ತೆರಿಗೆ ಪಾವತಿಸುತ್ತಿಲ್ಲ ಎಂಬುದು ಬ್ರಿಟನ್ ರಾಜಕೀಯದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಬಹುವಾಗಿ ಚರ್ಚೆಗೆ ಒಳಗಾಗಿದ್ದ ವಿಷಯ. ನಾನ್ ಡೊಮಿಸೈಲ್ ಸ್ಥಾನಮಾನ ಹೊಂದಿರುವವರು ವಿದೇಶಗಳಲ್ಲಿ ಗಳಿಸಿದ ಆದಾಯಕ್ಕೆ ತೆರಿಗೆ ಪಾವತಿಸುವಂತಿಲ್ಲ ಎನ್ನುತ್ತದೆ ಬ್ರಿಟನ್ ಕಾಯ್ದೆ. ಇದರ ಲಾಭ ಪಡೆದು ಅಕ್ಷತಾ ಮೂರ್ತಿ ತೆರಿಗೆ ಪಾವತಿ ಮಾಡುತ್ತಿಲ್ಲ ಎಂದು ಬ್ರಿಟನ್ನ ಪ್ರತಿಪಕ್ಷಗಳ ನಾಯಕರು ಆರೋಪಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ್ದ ಸುನಕ್, ಭಾರತದಲ್ಲಿ ಗಳಿಸುವ ಆದಾಯಕ್ಕೂ ಅಕ್ಷತಾ ಪೂರ್ಣ ತೆರಿಗೆ ಪಾವತಿಸುತ್ತಿದ್ದಾರೆ ಎಂದು ಹೇಳಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ