Samosa Shop: 30 ಲಕ್ಷ ಸಂಬಳದ ಕೆಲಸ ಬಿಟ್ಟು, ಮನೆ ಮಾರಿ ಸಮೋಸಾ ಮಾರುತ್ತಿರುವ ಬೆಂಗಳೂರಿನ ದಂಪತಿ; ಇವರ ಸಂಪಾದನೆ ಕೇಳಿದರೆ ಶಾಕ್ ಆಗುತ್ತೀರಿ…

|

Updated on: Mar 15, 2023 | 10:46 AM

Inspiring Story of Nidhi Singh, Shikhar Singh: ಬೆಂಗಳೂರಿನಲ್ಲಿ ಸಮೋಸಾ ಅಂಗಡಿಗೋಸ್ಕರ ಮನೆ ಮಾರಿ, ಕೈತುಂಬ ಸಂಬಳದ ಕೆಲಸ ಬಿಟ್ಟ ಗಂಡ ಹೆಂಡತಿ ಇವತ್ತು ತಿಂಗಳಿಗೆ ಸಮೋಸಾ ಮಾರಿ 45 ಕೋಟಿ ವಹಿವಾಟು ನಡೆಸುತ್ತಿದ್ದಾರೆ. ಆದರೆ ಅದಕ್ಕೋಸ್ಕರ ಇವರು ಪಟ್ಟ ಶ್ರಮ ಗಮನಾರ್ಹವಾದುದು..

Samosa Shop: 30 ಲಕ್ಷ ಸಂಬಳದ ಕೆಲಸ ಬಿಟ್ಟು, ಮನೆ ಮಾರಿ ಸಮೋಸಾ ಮಾರುತ್ತಿರುವ ಬೆಂಗಳೂರಿನ ದಂಪತಿ; ಇವರ ಸಂಪಾದನೆ ಕೇಳಿದರೆ ಶಾಕ್ ಆಗುತ್ತೀರಿ...
ಸಮೋಸಾ
Follow us on

ಬೆಂಗಳೂರು: ವಿದ್ಯಾಭ್ಯಾಸ ಮಾಡದಿದ್ದರೆ ಪಾನಿ ಪುರಿ ಅಂಗಡಿಯೋ, ಸಮೋಸಾ ಅಂಗಡಿಯೂ, ದಿನಸಿ ಅಂಗಡಿಯೋ ಏನಾದರೂ ಇಟ್ಟು ವ್ಯಾಪಾರ ಮಾಡಿ ಎಂಬುದು ಹಿಂದಿನವರ ಅನುಭವದ ಸಲಹೆ. ಇದೀಗ ಚೆನ್ನಾಗಿ ಓದಿ ಕೈತುಂಬ ಸಂಬಳ ಪಡೆಯುತ್ತಿದ್ದವರು ಚಹಾ ಅಂಗಡಿ, ದೋಸೆ ಹೋಟೆಲ್ ಇತ್ಯಾದಿ ವ್ಯವಹಾರ ಮಾಡಿ ಯಶಸ್ವಿಯಾದ ಹಲವು ನಿದರ್ಶನಗಳು ಕಣ್ಮುಂದೆ ಇವೆ. ಕೃಷಿ ಮಾಡಿಯೂ ಕೈತುಂಬ ಸಂಪಾದನೆ ಮಾಡುತ್ತಿರುವವರು ಬಹಳ ಇದ್ದಾರೆ. ಇದೇ ವೇಳೆ ಬೆಂಗಳೂರಿನ ದಂಪತಿಗಳಿಬ್ಬರು ಸೋಮೋಸಾ ಮಾರಾಟ ಮಾಡುತ್ತಾ (Samosa Business) ಹೆಸರುವಾಸಿಯಾಗಿದ್ದಾರೆ. ಆರೇಳು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸಮೋಸಾ ಫ್ಯಾಕ್ಟರಿ ಆರಂಭಿಸಿದ್ದ ನಿಧಿ ಸಿಂಗ್ ಮತ್ತು ಅವರ ಪತಿ ಶಿಖರ್ ವೀರ್ ಸಿಂಗ್ ದಂಪತಿ ಇಂದು ಕೋಟಿಗಟ್ಟಲೆ ಆದಾಯ ಪಡೆಯುತ್ತಿದ್ದಾರೆ.

ನಿಮಗೆ ಅಚ್ಚರಿ ಆಗಬಹುದು..! ಹರ್ಯಾಣ ಮೂಲದ ಇಬ್ಬರೂ ಕೂಡ ಬಯೋಟೆಕ್ ಎಂಜಿನಿಯರುಗಳು. ಶಿಖರ್ ವೀರ್ ಸಿಂಗ್ ಎಂಟೆಕ್ ಮಾಡಿ ಬಯೋಕಾನ್​ನಲ್ಲಿ ಮುಖ್ಯ ವಿಜ್ಞಾನಿ ಕೂಡ ಆಗಿದ್ದವರು. ಚೀಫ್ ಸೈಂಟಿಸ್ಟ್ ಎಂದರೆ ಕಡಿಮೆ ಮಟ್ಟದ ಕೆಲಸವಂತೂ ಅಲ್ಲ. ಇನ್ನು, ಅವರ ಪತ್ನಿ ನಿಧಿ ಸಿಂಗ್ ಕಡಿಮೆ ಅಲ್ಲ. ಗುರುಗ್ರಾಮದ ಫಾರ್ಮಾ ಕಂಪನಿಯೊಂದರಲ್ಲಿ ಅವರು ವರ್ಷಕ್ಕೆ 30 ಲಕ್ಷ ರೂ ಸಂಬಳದ ಪ್ಯಾಕೇಜ್ ಪಡೆಯುತ್ತಿದ್ದವರು.

ಇದನ್ನೂ ಓದಿIndian CEO: ಅಮೆರಿಕದ Honeywell ಸಂಸ್ಥೆಗೆ ವಿಮಲ್ ಕಪೂರ್ ಸಿಇಒ; ಭಾರತೀಯ CEOಗಳ ಪಟ್ಟಿ ಇಲ್ಲಿದೆ

ಇವರು ಯಾಕೆ ಸಮೋಸಾ ಮಾರುವ ಪರಿಸ್ಥಿತಿಗೆ ಬಂದರು ಎಂಬ ಪ್ರಶ್ನೆ ಕಾಡಬಹುದು. ಕೆಲಸ ಕಳೆದುಕೊಂಡು ಅನಿವಾರ್ಯವಾಗಿ ಸಮೋಸಾ ವ್ಯಾಪಾರಕ್ಕೆ ಇಳಿದವರಲ್ಲ ಇವರು. ಕಾರ್ಪೊರೇಟ್ ಕೆಲಸದ ಹೊರಗೂ ಸಂಪಾದನೆ ಮಾಡಬಹುದು ಎಂಬುದನ್ನು ಸಾಧಿಸಹೊರಟವರು ನಿಧಿ ಮತ್ತು ಶಿಖರ್ ಸಿಂಗ್. ಇವರ ಆಲೋಚನೆ ಬೀದಿ ಬದಿಯ ಸಮೋಸಾ ಅಂಗಡಿ ಮಟ್ಟದ್ದಾಗಿರಲಿಲ್ಲ ಎಂಬುದು ನೆನಪಿರಲಿ.

ಸಮೋಸಾ ಸಿಂಗ್

2016ರಲ್ಲಿ ನಿಧಿ ಸಿಂಗ್ ಮತ್ತು ಶಿಖರ್ ವೀರ್ ಸಿಂಗ್ ಬೆಂಗಳೂರಿನಲ್ಲಿ ಸಮೋಸಾ ಸಿಂಗ್ ಎಂಬ ಅಂಗಡಿ ಆರಂಭಿಸಿದರು. ಆರಂಭದಲ್ಲಿ ನಿರೀಕ್ಷಿತ ಮಟ್ಟದಲ್ಲಿ ವ್ಯವಹಾರ ನಡೆಯಲಿಲ್ಲವಾದರೂ ನಂತರದ ದಿನಗಳಲ್ಲಿ ಸಮೋಸಾಗೆ ಬೇಡಿಕೆ ಹೆಚ್ಚಾಯಿತು. ಸಮೋಸಾ ಅಂಗಡಿಗೆ ಜಾಗ ಸಾಕಾಗುವುದಿಲ್ಲ, ವಿಶಾಲ ಸ್ಥಳದ ಅವಶ್ಯತೆ ಇದೆ ಎನಿಸಿದಾಗ ಈ ದಂಪತಿ ಹಿಂದೆ ಮುಂದೆ ನೋಡದೇ ತಾವಿದ್ದ ಅಪಾರ್ಟ್ಮೆಂಟನ್ನೇ ಮಾರಿ ಆ ದುಡ್ಡಿನಲ್ಲಿ ಒಂದು ಫ್ಯಾಕ್ಟರಿಯನ್ನು ಬಾಡಿಗೆ ಪಡೆದರು. 80 ಲಕ್ಷ ರೂ ಖರ್ಚು ಮಾಡಿ ಸಮೋಸಾ ತಯಾರಿಕೆಗೆ ಕಿಚನ್ ಸಿದ್ಧಪಡಿಸಿದರು.

ಇದನ್ನೂ ಓದಿInspiring: ಟಿಸಿಎಸ್​ನಲ್ಲಿ ಇಂಟರ್ನ್ ಆಗಿದ್ದ ರೈತನ ಮಗನ ಸಂಬಳ ಈಗ 109 ಕೋಟಿ; ದಂಗುಬಡಿಸುತ್ತದೆ ಚಂದ್ರಶೇಖರನ್ ವೃತ್ತಿಜೀವನ

ದಿನಕ್ಕೆ 12 ಲಕ್ಷ ರೂ ಸಂಪಾದನೆ

ಸಮೋಸಾ ಸಿಂಗ್ ಅಂಗಡಿಯಲ್ಲಿ ಪ್ರತೀ ತಿಂಗಳೂ 30,000 ಸಮೋಸಾ ಮಾರಾಟ ಆಗುತ್ತದೆ. ತಿಂಗಳಿಗೆ 45 ಕೋಟಿ ರೂ ವಹಿವಾಟು ನಡೆಯುತ್ತದೆ. ಅಂದರೆ ದಿನಕ್ಕೆ 12 ಲಕ್ಷ ರುಪಾಯಿಯಷ್ಟು ವಹಿವಾಟು ಆಗುತ್ತದೆ.

ಸಂಶೋಧನೆ, ಪ್ರಯೋಗದ ಫಲ

ಬೆಂಗಳೂರಿನ ಸ್ಟಾರ್ಟಪ್ ಆಗಿರುವ ಸಮೋಸಾ ಸಿಂಗ್​ಗೆ ಆನ್​ಲೈನ್ ಆರ್ಡರ್ಸ್ ಬಹಳ ಬರುತ್ತವೆ. ಇವರ ಸಮೋಸಾಗೆ ಬೆಂಗಳೂರಿನ ಟೆಕ್ಕಿ ವಲಯದಲ್ಲಿ ಬಹಳ ಬೇಡಿಕೆ ಇದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಸಮೋಸಾ ಅಂಗಡಿ ಆರಂಭಕ್ಕೂ ಮುನ್ನ ನಿಧಿ ಸಿಂಗ್ ಮತ್ತು ಶಿಖರ್ ಸಿಂಗ್ ಇಬ್ಬರೂ ಸಮೋಸಾ ಬಗ್ಗೆ ಬಹಳಷ್ಟು ಪ್ರಯೋಗ ಮತ್ತು ಸಂಶೋಧನೆಗಳನ್ನು ಮಾಡಿದ್ದರು. ಪರಿಣಾಮವಾಗಿ, ಬಹಳ ಸುಂದರ ರೂಪದ ಮತ್ತು ಕಡಿಮೆ ಎಣ್ಣೆ ಹೀರುವ ಹಾಗೂ ಥರಹಾವೇರಿ ಬಗೆಯ ಸಮೋಸಾ, ಕಚೋರಿಗಳನ್ನು ಸಿದ್ಧಪಡಿಸಿದ್ದಾರೆ. ಇವರ ಫ್ಯಾಕ್ಟರಿಯಲ್ಲಿ ಈಗ ವಿವಿಧ ರೀತಿಯ ಪಾನಿ ಪುರಿ, ಮಸಾಲ ಪುರಿ ಇತ್ಯಾದಿ ಸ್ನ್ಯಾಕ್​ಗಳು ದೊರಕುತ್ತವೆ.

ಇದೀಗ ಸಮೋಸಾ ಸಿಂಗ್​ನ ಫ್ರಾಂಚೈಸಿ ವ್ಯವಹಾರವನ್ನೂ ಇವರು ಹಂಚುತ್ತಿದ್ದಾರೆ. ಜೆಪಿ ನಗರ, ಬನಶಂಕರಿ ಹೀಗೆ ಬೆಂಗಳೂರಿನ ವಿವಿಧೆಡೆ ಈಗ ಸಮೋಸಾ ಸಿಂಗ್ ಫ್ರಾಂಚೈಸಿ ಅಂಗಡಿಗಳನ್ನು ಕಾಣಬಹುದು.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ