ಚೆನ್ನೈ, ಸೆಪ್ಟೆಂಬರ್ 20: ಸೌತ್ ಕೊರಿಯಾ ಮೂಲದ ಸ್ಯಾಮ್ಸುಂಗ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಭಾರತದಲ್ಲಿ ಕಾರ್ಮಿಕರ ಪ್ರತಿಭಟನೆ ಎದುರಿಸುತ್ತಿದೆ. ಚೆನ್ನೈನ ಸ್ಯಾಮ್ಸುಂಗ್ನ ಗೃಹೋಪಕರಣ ತಯಾರಿಕೆಯ ಫ್ಯಾಕ್ಟರಿಯಲ್ಲಿನ ಹಲವು ಕಾರ್ಮಿಕರು ಕಳೆದ 10-11 ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ನಡೆಸುವಷ್ಟು ದಿನದ್ದು ಸಂಬಳ ಕೊಡೋದಿಲ್ಲ. ಕೆಲಸ ಮಾಡಿದ ದಿನಕ್ಕೆ ಮಾತ್ರವೇ ಹಾಜರಾತಿ ಇರುತ್ತದೆ ಎಂದು ಸ್ಯಾಮ್ಸುಂಗ್ ಮ್ಯಾನೇಜ್ಮೆಂಟ್ ತನ್ನ ಉದ್ಯೋಗಿಗಳಿಗೆ ಇಮೇಲ್ ಮೂಲಕ ನೋಟೀಸ್ ನೀಡಿದೆ.
ಚೆನ್ನೈನಲ್ಲಿರುವ ಸ್ಯಾಮ್ಸುಂಗ್ ಘಟಕದಲ್ಲಿ ಟಿವಿ, ರೆಫ್ರಿಜರೇಟರ್ ಇತ್ಯಾದಿ ಹೋಮ್ ಅಪ್ಲಯನ್ಸ್ಗಳ ತಯಾರಿಕೆ ನಡೆಯುತ್ತದೆ. ಭಾರತದಲ್ಲಿ ಸಂಸ್ಥೆ ಗಳಿಸುವ 12 ಬಿಲಿಯನ್ ಡಾಲರ್ ಆದಾಯದಲ್ಲಿ ಈ ಗೃಹೋಪಕರಣಗಳ ಪಾಲು ಮೂರನೇ ಒಂದರಷ್ಟಿದೆ. ಸಾಕಷ್ಟು ಆದಾಯ ಇದ್ದರೂ ಉದ್ಯೋಗಿಗಳಿಗೆ ಸಾಕಷ್ಟು ವೇತನ ನೀಡುತ್ತಿಲ್ಲ ಎನ್ನುವ ಆರೋಪ ಕೆಲ ಸ್ತರದಲ್ಲಿ ಕೇಳಿಬರುತ್ತಿದೆ. ಹಾಗೆಯೇ, ಕಾರ್ಮಿಕ ಒಕ್ಕೂಟವನ್ನು ರಚಿಸಲಾಗಿದ್ದು, ಅದಕ್ಕೆ ಮಾನ್ಯತೆ ನೀಡಬೇಕು ಎನ್ನುವ ಬೇಡಿಕೆಯನ್ನೂ ಉದ್ಯೋಗಿಗಳು ಇಟ್ಟಿದ್ದಾರೆ.
ಉದ್ಯೋಗಿಗಳ ಈ ಎರಡು ಪ್ರಮುಖ ಬೇಡಿಕೆಗಳಿಗೆ ಸ್ಯಾಮ್ಸುಂಗ್ ಆಡಳಿತ ಕಿವಿಗೊಡುತ್ತಿಲ್ಲ. ಸಂಬಳ ಹೆಚ್ಚಳಕ್ಕೆ ನಿರಾಕರಿಸುತ್ತಿದೆ. ಈಗ ಪ್ರತಿಭಟನೆ ನಡೆಸುತ್ತಿರುವುದು ಕಾರ್ಮಿಕರ ಒಕ್ಕೂಟವೇ. ಫ್ಯಾಕ್ಟರಿ ಸಮೀಪವೇ ಒಂದು ತಾತ್ಕಾಲಿಕ ಡೇರೆ ಹಾಕಿದ್ದು ಅಲ್ಲಿ ಹಲವು ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದಾರೆ. ಮ್ಯಾನೇಜ್ಮೆಂಟ್ ವಿರುದ್ಧ ಭಾಷಣಗಳನ್ನು ಮಾಡುತ್ತಿದ್ದಾರೆ. ಕಳೆದ ವಾರ ಜಿಲ್ಲಾ ಕೋರ್ಟ್ ಬಳಿಕ ಪ್ರತಿಭಟನೆ ವಿರುದ್ಧ ತಾತ್ಕಾಲಿಕ ತಡೆ ತರುವ ಸ್ಯಾಮ್ಸುಂಗ್ ಪ್ರಯತ್ನ ವಿಫಲವಾಗಿತ್ತು.
ಇದನ್ನೂ ಓದಿ: ಅಪ್ಪ ಇಷ್ಟು ಶ್ರೀಮಂತ ಅಂತ ದೊಡ್ಡವಳಾಗೋವರೆಗೂ ಗೊತ್ತೇ ಇರ್ಲಿಲ್ಲ: ಅಚ್ಚರಿ ಹುಟ್ಟಿಸುತ್ತವೆ ವಾರನ್ ಬಫೆಟ್ ಮಗಳ ಮಾತುಗಳು
ಉದ್ಯೋಗಿಗಳು ಮಾಡುತ್ತಿರುವ ಪ್ರತಿಭಟನೆ ಅಕ್ರಮವಾಗಿದೆ. ಪ್ರತಿಭಟನೆ ನಡೆಸುವ ಅಷ್ಟೂ ಅವಧಿಗೆ ಸಂಬಳ ಕೊಡೋದಿಲ್ಲ. ನೀವು ಕೆಲಸಕ್ಕೆ ಹಾಜರಾಗುವ ದಿನದಿಂದ ಸಂಬಳಕ್ಕೆ ಲೆಕ್ಕ ಇಡಲಾಗುತ್ತದೆ ಎಂದು ಸ್ಯಾಮ್ಸುಂಗ್ ಸಂಸ್ಥೆಯ ಎಚ್ಆರ್ ವಿಭಾಗವು ಉದ್ಯೋಗಿಗಳಿಗೆ ಇಮೇಲ್ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ