Atal Pension Yojana: ತಿಂಗಳಿಗೆ 210 ರೂ. ಕಟ್ಟಿ 5000 ರೂಪಾಯಿ ಪೆನ್ಷನ್ ಪಡೆಯುವ ಕೇಂದ್ರದ ಈ ಸ್ಕೀಮ್​ ಬಗ್ಗೆ ಗೊತ್ತೆ?

| Updated By: Srinivas Mata

Updated on: Sep 02, 2021 | 1:03 PM

ಕೇಂದ್ರ ಸರ್ಕಾರದ ಬೆಂಬಲ ಇರುವ ಈ ಯೋಜನೆ ಅಡಿಯಲ್ಲಿ ತಿಂಗಳಿಗೆ ರೂ. 210 ತೊಡಗಿಸಿ, ತಿಂಗಳಿಗೆ 5000 ರೂಪಾಯಿ ಪಿಂಚಣಿ ಪಡೆಯಿರಿ. ಆ ಬಗ್ಗೆ ಮಾಹಿತಿ ಇಲ್ಲಿದೆ.

Atal Pension Yojana: ತಿಂಗಳಿಗೆ 210 ರೂ. ಕಟ್ಟಿ 5000 ರೂಪಾಯಿ ಪೆನ್ಷನ್ ಪಡೆಯುವ ಕೇಂದ್ರದ ಈ ಸ್ಕೀಮ್​ ಬಗ್ಗೆ ಗೊತ್ತೆ?
ಪ್ರಾತಿನಿಧಿಕ ಚಿತ್ರ
Follow us on

ಅಟಲ್ ಪಿಂಚಣಿ ಯೋಜನೆ (APY) ಎಂಬುದು ಭಾರತ ಸರ್ಕಾರದ ಬೆಂಬಲ ಇರುವಂಥ ಖಾತ್ರಿ ಪೆನ್ಷನ್ ಸ್ಕೀಮ್. ಇಅದರ ಆಡಳಿತ ನಿರ್ವಹಣೆ ನೋಡಿಕೊಳ್ಳುವುದು ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್​ಮೆಂಟ್​ ಅಥಾರಿಟಿ (PFRDA). ಪ್ರಸಕ್ತ ಹಣಕಾಸು ವರ್ಷದಲ್ಲಿ (FY22) 28 ಲಕ್ಷಕ್ಕೂ ಹೆಚ್ಚು ಹೊಸ ಎಪಿವೈ ಖಾತೆಗಳನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಈ ಯೋಜನೆಯು ಸುದ್ದಿಯಲ್ಲಿದೆ. ಆಗಸ್ಟ್ 25, 2021ಕ್ಕೆ ಒಟ್ಟಾರೆ ಅಟಲ್ ಪೆನ್ಷನ್ ಯೋಜನಾ ಅಡಿಯಲ್ಲಿನ ನೋಂದಣಿ 3.30 ಕೋಟಿ ದಾಟಿದೆ. 2021- 22ನೇ ಹಣಕಾಸು ವರ್ಷದಲ್ಲಿ ಆದ ದಾಖಲೆಯ ಪ್ರಮಾಣದ ಸೇರ್ಪಡೆ ಬಗ್ಗೆ PFRDAಯಿಂದ ಮಾಹಿತಿ ನೀಡುತ್ತಾ ಈ ಅಂಶವನ್ನು ತಿಳಿಸಲಾಗಿದೆ. APY ನಿಯಮಾವಳಿಯ ಪ್ರಕಾರ, 18ರಿಂದ 40 ವರ್ಷ ವಯೋಮಾನದವರು ಈ ಖಾತೆಯನ್ನು ತೆರೆಯಬಹುದು. ಅಲ್ಲಿಂದ 60 ವರ್ಷದ ತನಕ ಉಳಿತಾಯ ಮಾಡಿದಲ್ಲಿ ಆ ನಂತರ ಮಾಸಿಕ ಪಿಂಚಣಿಗೆ ಅರ್ಹರಾಗುತ್ತಾರೆ.

APY ಅಡಿಯಲ್ಲಿ ಚಂದಾದಾರರಿಗೆ ನಿಶ್ಚಿತ ಮಾಸಿಕ ಪಿಂಚಣಿಯಾಗಿ 1000, 2000, 3000, 4000 ಮತ್ತು 5000 ರೂಪಾಯಿ ಪಡೆಯುವಂಥ ಆಯ್ಕೆಗಳಿರುತ್ತವೆ. ತಿಂಗಳಿಗೆ ಎಷ್ಟು ಪಿಂಚಣಿ ಬರಬೇಕು ಎಂದುಕೊಂಡಿರುತ್ತಾರೋ ಅದರ ಆಧಾರದಲ್ಲಿ ವ್ಯಕ್ತಿಯೊಬ್ಬರು ತಿಂಗಳಿಗೆ ಎಷ್ಟು ಮೊತ್ತ ಕಟ್ಟಬೇಕು ಎಂದು ನಿರ್ಧಾರ ಆಗುತ್ತದೆ. APY ಖಾತೆ ತೆರೆಯುವುದಕ್ಕೆ ಹತ್ತಿರದ ಬ್ಯಾಂಕ್​ ಶಾಖೆಗೆ ಗುರುತಿನ ಪುರಾವೆ, ವಿಳಾಸ ದೃಢೀಕರಣ, ವಯಸ್ಸಿನ ದೃಢೀಕರಣಕ್ಕೆ ಸೂಕ್ತ ದಾಖಲೆಯೊಂದಿಗೆ ತೆರಳಬೇಕು. ಆ ನಂತರ ನೋಂದಣಿಗಾಗಿ ಅರ್ಜಿ ಭರ್ತಿ ಮಾಡಬೇಕು.

ಅಟಲ್​ ಪೆನ್ಷನ್ ಯೋಜನಾದ ಚಾರ್ಟ್​ನಂತೆ, ಒಬ್ಬ ವ್ಯಕ್ತಿಗೆ 18 ವರ್ಷ ವಯಸ್ಸಿದ್ದಲ್ಲಿ ತಿಂಗಳಿಗೆ 42 ರೂಪಾಯಿ ಕಟ್ಟಿದ್ದರೆ 60 ವರ್ಷದ ನಂತರ 1000 ರೂಪಾಯಿ ಮಾಸಿಕ ಪೆನ್ಷನ್ ಬರುತ್ತದೆ. ಅದೇ ರೀತಿ 84 ರೂಪಾಯಿ ಕಟ್ಟಿದಲ್ಲಿ 2000 ರೂಪಾಯಿ, 126 ಆದಲ್ಲಿ 3000 ರೂ., 168ಕ್ಕೆ 4000 ರೂ. ಮತ್ತು ತಿಂಗಳಿಗೆ 210 ರೂಪಾಯಿಯಂತೆ ಕಟ್ಟಿದರೆ 60 ವರ್ಷದ ನಂತರ ತಿಂಗಳಿಗೆ 5000 ರೂಪಾಯಿ ಪೆನ್ಷನ್ ಬರುತ್ತದೆ. ಇದೇ ರೀತಿ 20, 25, 30, 35 ಹಾಗೂ 40 ವರ್ಷಕ್ಕೆ ಚಾರ್ಟ್​ ಇದೆ. ಅದರ ಪ್ರಕಾರ ತಿಂಗಳಿಗೆ 5000 ರೂಪಾಯಿ ಪೆನ್ಷನ್ ಪಡೆಯುವುದಕ್ಕೆ ಕ್ರಮವಾಗಿ ತಿಂಗಳಿಗೆ 248 ರೂ., 376 ರೂ., 577 ರೂ., 902 ರೂ., ಮತ್ತು 1454 ರೂ. ಪಾವತಿಸಬೇಕಾಗುತ್ತದೆ.

ಎಷ್ಟು ತಡವಾಗಿ APY ಖಾತೆಯನ್ನು ತೆರೆಯಲಾಗುತ್ತದೋ ಅಷ್ಟು ಮೊತ್ತವು ಕಟ್ಟುವುದಕ್ಕೆ ಹೆಚ್ಚುತ್ತಾ ಹೋಗುತ್ತದೆ. APY ಖಾತೆಯನ್ನು 18ನೇ ವಯಸ್ಸಿಗೆ ತೆರೆದರೆ 42 ವರ್ಷಗಳ ಕಾಲ ಕಟ್ಟಬೇಕಾಗುತ್ತದೆ. ಅದೇ 30 ವರ್ಷದ ವ್ಯಕ್ತಿಗೆ 1000 ರೂಪಾಯಿಗೆ ಪೆನ್ಷನ್​ಗೆ ತಿಂಗಳಿಗೆ 116 ರೂ. ಪಾವತಿಸ ಬೇಕಾದರೆ, 5000 ರೂಪಾಯಿ ಪೆನ್ಷನ್​ಗಾಗಿ ತಿಂಗಳಿಗೆ 577 ರೂಪಾಯಿ ಕಟ್ಟಬೇಕಾಗುತ್ತದೆ. ಆದ್ದರಿಂದ 18ನೇ ವಯಸ್ಸಿಗೇ ಒಬ್ಬ ವ್ಯಕ್ತಿ APY ಖಾತೆ ತೆರೆದಲ್ಲಿ ತಿಂಗಳಿಗೆ 210 ರೂಪಾಯಿ ಪಾವತಿ ಮಾಡಿದರೂ ಸಾಕು, 60 ವರ್ಷದ ನಂತರ ಮಾಸಿಕ ಪಿಂಚಣಿ 5000 ರೂಪಾಯಿ ಬರುತ್ತದೆ.

ಇದನ್ನೂ ಓದಿ: Atal Pension Yojana: ಅಟಲ್ ಪೆನ್ಷನ್ ಯೋಜನೆ ಮೂಲಕ ಗಂಡ- ಹೆಂಡತಿಗೆ ಸಿಗಲಿದೆ 10,000 ರೂ. ತನಕ ತಿಂಗಳ ಪಿಂಚಣಿ

PM Pension Yojana: ಪಿಎಂ ಪೆನ್ಷನ್ ಯೋಜನೆಯಲ್ಲಿ ಹಣ ತೊಡಗಿಸಿ ತಿಂಗಳಿಗೆ 9250 ರೂಪಾಯಿ ಪಡೆಯುವುದು ಹೇಗೆ?

(Save Monthly Rs 210 And Get Pension Of Rs 5000 By This Central Government Backed Scheme)