ಕ್ರೆಡಿಟ್ ಕಾರ್ಡ್‌ಗಳ ಮೂಲಕ ಮಾಡುವ ಎಲ್ಲ ಇಎಂಐ ವಹಿವಾಟುಗಳಿಗೆ ಪ್ರೊಸೆಸಿಂಗ್ ಶುಲ್ಕ ಮತ್ತು ತೆರಿಗೆಯನ್ನು ವಿಧಿಸುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹೇಳಿದೆ. ಇತ್ತೀಚಿನ ನಡೆಯಲ್ಲಿ, ಎಸ್‌ಬಿಐ ಕಾರ್ಡ್ಸ್ ಮತ್ತು ಪೇಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (SBICPSL) 99 ರೂಪಾಯಿಗಳ ಪ್ರೊಸೆಸಿಂಗ್ ಶುಲ್ಕವನ್ನು ಮತ್ತು ಅದರ ಮೇಲೆ ತೆರಿಗೆಗಳನ್ನು ವಿಧಿಸುವುದಾಗಿ ಘೋಷಿಸಿತು. ಹೊಸ ನಿಯಮವು ಡಿಸೆಂಬರ್ 1, 2021ರಿಂದ ಅನ್ವಯ ಆಗುತ್ತದೆ. ಈ ಪ್ರೊಸೆಸಿಂಗ್ ಶುಲ್ಕವನ್ನು ರೀಟೇಲ್ ಮಾರಾಟ ಮಳಿಗೆಗಳಲ್ಲಿ ಮಾಡಿದ ಎಲ್ಲ ಇಎಂಐ ವಹಿವಾಟುಗಳಿಗೆ ವಿಧಿಸಲಾಗುತ್ತದೆ. ಇದರ ಜತೆಗೆ ಇ-ಕಾಮರ್ಸ್ ವೆಬ್‌ಸೈಟ್‌ಗಳಾದ ಅಮೆಜಾನ್, ಫ್ಲಿಪ್ಕಾರ್ಟ್ ಮತ್ತು Myntra ಆಂಥವಕ್ಕೂ ಅನ್ವಯಿಸುತ್ತದೆ.
ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ನವೆಂಬರ್ 12ರಂದು ಶುಕ್ರವಾರ ಇ-ಮೇಲ್ ಮೂಲಕ ಅಧಿಸೂಚನೆಯನ್ನು ಕಳುಹಿಸಲಾಗಿದೆ. “ಆತ್ಮೀಯ ಕಾರ್ಡ್‌ದಾರರೇ, 1ನೇ ಡಿಸೆಂಬರ್ 2021ರಿಂದ ಜಾರಿಗೆ ಬರುವಂತೆ ಪ್ರೊಸೆಸಿಂಗ್ ಶುಲ್ಕ ರೂ. 99 + ಅನ್ವಯ ಆಗುವ ತೆರಿಗೆಗಳನ್ನು ಮರ್ಚೆಂಟ್ ಔಟ್‌ಲೆಟ್/ವೆಬ್‌ಸೈಟ್/ಆ್ಯಪ್‌ನಲ್ಲಿ ಮಾಡಿದ ಎಲ್ಲ ಮರ್ಚೆಂಟ್ ಇಎಂಐ ವಹಿವಾಟುಗಳಿಗೆ ವಿಧಿಸಲಾಗುತ್ತದೆ ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ. ನಿಮ್ಮ ನಿರಂತರ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು. ಮರ್ಚೆಂಟ್ ಇಎಂಐ ಪ್ರೊಸೆಸಿಂಗ್ ಶುಲ್ಕದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ,” ಎಂದು ಎಸ್‌ಬಿಐಸಿಪಿಎಸ್‌ಎಲ್‌ನಿಂದ ಮೇಲ್ನಲ್ಲಿ ಇದೆ. ಎಲ್ಲ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಕಾರ್ಡ್‌ದಾರರು ಈ ಸಂದೇಶವನ್ನು ಸ್ವೀಕರಿಸಿದ್ದಾರೆ. ಖರೀದಿಗಳನ್ನು ಮಾಸಿಕ ಪಾವತಿಗಳಾಗಿ ಪರಿವರ್ತಿಸಲು ಈ ದರಗಳು ಬಡ್ಡಿದರಗಳ ಮೇಲೆ ಹೆಚ್ಚುವರಿಯಾಗಿ ಅನ್ವಯಿಸುತ್ತವೆ. ಸದ್ಯಕ್ಕೆ ಲಕ್ಷಾಂತರ ಮಂದಿ ಈ ಸೇವೆಯನ್ನು ಬಳಸುತ್ತಿದ್ದಾರೆ.
ಇಎಂಐ ವಹಿವಾಟುಗಳಾಗಿ ಯಶಸ್ವಿಯಾಗಿ ಪರಿವರ್ತಿಸಿದ್ದಕ್ಕೆ ಮಾತ್ರ ಪ್ರೊಸೆಸಿಂಗ್ ಶುಲ್ಕ
ಕೆಲವೊಮ್ಮೆ ಅನೇಕ ವ್ಯಾಪಾರಿಗಳು ಬ್ಯಾಂಕ್‌ಗಳಿಗೆ ಬಡ್ಡಿಯನ್ನು ಪಾವತಿಸುವ ಮೂಲಕ ಇಎಂಐ ವಹಿವಾಟುಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತಾರೆ. ಅದು ಏನನ್ನಾದರೂ ಖರೀದಿಸಿದ ಗ್ರಾಹಕರಿಗೆ ‘ಶೂನ್ಯ ಬಡ್ಡಿ’ ಎಂದು ಕಾಣಿಸುತ್ತದೆ. ಈ ಸನ್ನಿವೇಶದಲ್ಲಿಯೂ ಡಿಸೆಂಬರ್ 1ರಿಂದ ಸರ್ಕಾರಿ ಸ್ವಾಮ್ಯದ ಎಸ್‌ಬಿಐ ಜಾರಿಗೆ ತರಲು ನಿಗದಿಪಡಿಸಿದ ಹೊಸ ನಿಯಮಗಳ ಪ್ರಕಾರ, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರು ರೂ. 99 ಪ್ರೊಸೆಸಿಂಗ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ವರದಿಗಳ ಪ್ರಕಾರ, ಇಎಂಐ ವಹಿವಾಟುಗಳಾಗಿ ಯಶಸ್ವಿಯಾಗಿ ಪರಿವರ್ತಿಸಲಾದವುಗಳಿಗೆ ಮಾತ್ರ 99 ರೂಪಾಯಿಗಳ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ. ಮತ್ತೊಂದೆಡೆ, ಇಎಂಐ ವಹಿವಾಟು ವಿಫಲವಾದರೆ ಅಥವಾ ರದ್ದುಗೊಂಡರೆ ಪ್ರೊಸೆಸಿಂಗ್ ಶುಲ್ಕವನ್ನು ಹಿಂತಿರುಗಿಸಲಾಗುತ್ತದೆ. ಆದರೂ ಇಎಂಐ ಪ್ರೀಕ್ಲೋಷರ್ ಸಂದರ್ಭದಲ್ಲಿ ಇದನ್ನು ಹಿಂತಿರುಗಿಸುವುದಿಲ್ಲ.
ಇಎಂಐ ವಹಿವಾಟುಗಳ ಮೇಲೆ ಹೊಸದಾಗಿ ಘೋಷಿಸಲಾದ ಪ್ರೊಸೆಸಿಂಗ್ ಶುಲ್ಕದ ಬಗ್ಗೆ ಕಂಪೆನಿಯು ಕಾರ್ಡ್ದಾರರಿಗೆ ಯಾವುದೇ ರೀಟೇಲ್ ಮಳಿಗೆಯಲ್ಲಿ ಶಾಪಿಂಗ್ ಮಾಡಿದರೆ ಚಾರ್ಜ್ ಸ್ಲಿಪ್‌ಗಳ ಮೂಲಕ ತಿಳಿಸುತ್ತದೆ. ಇಎಂಐ ಮೂಲಕ ಮಾಡಿದ ಆನ್‌ಲೈನ್ ವಹಿವಾಟುಗಳಿಗೆ ಇದು ವ್ಯಾಪಾರಿಯ ಪಾವತಿಗಳ ಪುಟದಲ್ಲಿ ಪ್ರೊಸೆಸಿಂಗ್ ಶುಲ್ಕವನ್ನು ತಿಳಿಸುತ್ತದೆ. ಡಿಸೆಂಬರ್ 1ರ ಮೊದಲು ಮಾಡಿದ ವಹಿವಾಟುಗಳಿಗೆ, ಆದರೆ ಆ ದಿನಾಂಕದ ನಂತರ ಇಎಂಐ ಪ್ರಾರಂಭವಾಗುತ್ತದೆ. ಹಳೆಯ ನಿಯಮಗಳು ಅನ್ವಯ ಆಗುವುದರಿಂದ ಬ್ಯಾಂಕ್ ಯಾವುದೇ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸುವುದಿಲ್ಲ. ವ್ಯಾಪಾರಿ ಇಎಂಐ ಆಗಿ ಪರಿವರ್ತಿಸಲಾದ ವಹಿವಾಟುಗಳಿಗೆ ಕಂಪೆನಿಯು ಇದ್ದಿರಬಹುದಾದ ಯಾವುದೇ ರಿವಾರ್ಡ್ ಪಾಯಿಂಟ್‌ಗಳನ್ನು ಅನ್ವಯಿಸುವುದಿಲ್ಲ.
ಖಾಸಗಿ ಬ್ಯಾಂಕ್‌ಗಳು ಬಹಳ ಹಿಂದಿನಿಂದಲೂ ವಿಧಿಸುತ್ತಿವೆ
“SBICPSLನಿಂದ ಈ ಪ್ರೊಸೆಸಿಂಗ್ ಶುಲ್ಕಗಳು ಉದ್ಯಮದ ಮಾನದಂಡಗಳ ಪ್ರಕಾರ ಇರಲಿದೆ. ಇತರ ಪ್ರಮುಖ ಖಾಸಗಿ ಬ್ಯಾಂಕ್‌ಗಳು ದೀರ್ಘಕಾಲದಿಂದ ಈ ಶುಲ್ಕವನ್ನು ವಿಧಿಸುತ್ತಿವೆ,” ಎಂದು ಹೆಸರು ಹೇಳಲು ಇಚ್ಛಿಸದ ರೀಟೇಲ್ ಬ್ಯಾಂಕರ್ವೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ಈ ಹೊಸ ನಿಯಮವು ಹೇಗೆ ಕಾರ್ಯನಿರ್ವಹಿಸುತ್ತದೆ? ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಮೊಬೈಲ್ ಫೋನ್ ಅನ್ನು ಇ-ಕಾಮರ್ಸ್ ವೆಬ್‌ಸೈಟ್‌ನಿಂದ ಖರೀದಿಸಿದ್ದೀರಿ ಎಂದುಕೊಳ್ಳೋಣ. ಉದಾಹರಣೆಗೆ ಅಮೆಜಾನ್ನಲ್ಲಿ ಬ್ಯಾಂಕಿನ ಇಎಂಐ ಯೋಜನೆಯಡಿ. ಆ ನಂತರ SBICPSL ನಿಮಗೆ ವಹಿವಾಟನ್ನು ಪ್ರೊಸೆಸ್ ಮಾಡುವುದಕ್ಕೆ ರೂ. 99 ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತದೆ. ಇದು ನಿಮಗೆ ತೆರಿಗೆಗಳನ್ನು ಸಹ ವಿಧಿಸುತ್ತದೆ. ಈ ಹೆಚ್ಚುವರಿ ಮೊತ್ತವು ಆ ಉತ್ಪನ್ನದ ಇಎಂಐ ಮೊತ್ತದ ಜೊತೆಗೆ ಕ್ರೆಡಿಟ್ ಕಾರ್ಡ್‌ನ ತಿಂಗಳ ಸ್ಟೇಟ್ಮೆಂಟ್ನಲ್ಲಿ ಬರುತ್ತದೆ.
ವರದಿಗಳ ಪ್ರಕಾರ, ಹೊಸ ಕ್ರಮವು ‘ಈಗ ಖರೀದಿಸಿ, ನಂತರ ಪಾವತಿಸಿ’ (BNPL) ಯೋಜನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಏಕೆಂದರೆ ಅವು ಖರೀದಿದಾರರಿಗೆ ಹೆಚ್ಚು ದುಬಾರಿ ಆಗಬಹುದು. ಈ ಆಯ್ಕೆಗಳನ್ನು ಸಾಮಾನ್ಯವಾಗಿ ಇ-ಕಾಮರ್ಸ್ ವೆಬ್‌ಸೈಟ್‌ಗಳು ಒದಗಿಸುತ್ತವೆ.
ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್ ಮೊದಲ ಬಿಲ್ ಪಾವತಿಗೆ ಮೊದಲು ಗಮನಿಸಬೇಕಾದ ಅಂಶಗಳಿವು