ನವದೆಹಲಿ: ಈಗ ಬಹಳ ಮಂದಿಗೆ 2,000 ರೂ ನೋಟಿನ ವಿಚಾರ ಗೊಂದಲದ ಗೂಡಾಗಿದೆ. ಸರ್ಕಾರ 2,000 ರೂ ಮುಖಬೆಲೆಯ ನೋಟಿನ ಚಲಾವಣೆಯನ್ನು ಹಿಂಪಡೆದುಕೊಂಡಿದ್ದು, ಮೇ 23ರಿಂದ ಈ ನೋಟುಗಳ ವಿನಿಮಯಕ್ಕೆ ಅವಕಾಶ ಮಾಡಲಾಗಿದೆ. ಆದರೆ, ನೋಟು ಎಕ್ಸ್ಚೇಂಜ್ಗೆ ಪ್ರತ್ಯೇಕ ಫಾರ್ಮ್ ಅಥವಾ ಸ್ಲಿಪ್ ಭರ್ತಿ ಮಾಡಬೇಕು, ಆಧಾರ್ ಇತ್ಯಾದಿ ಕೆವೈಸಿ ದಾಖಲೆ ಸಲ್ಲಿಸಬೇಕು ಎಂಬಿತ್ಯಾದಿ ಮಾತುಗಳು ಕೇಳಿಬರುತ್ತಿವೆ. ಇದು ಜನರಿಗೆ ಆತಂಕ ಉಂಟು ಮಾಡಿರುವುದು ಹೌದು. ಇದೇ ವೇಳೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2,000 ರೂ ಮುಖಬೆಲೆಯ ನೋಟುಗಳ ವಿನಿಮಯ ವ್ಯವಸ್ಥೆಯನ್ನು ಬಹಳ ಸರಳಗೊಳಿಸಿದೆ.
2,000 ರೂ ಮುಖಬೆಲೆಯ ನೋಟುಗಳನ್ನು ಯಾರೇ ತಂದರೂ ಬದಲಾವಣೆ ಮಾಡಿಕೊಡಬೇಕು. ಖಾತೆ ಇಲ್ಲದಿದ್ದವರಿಗೂ ನೋಟು ಎಕ್ಸ್ಚೇಂಜ್ ಆಗಬೇಕು. ಸ್ಲಿಪ್ ಬರೆದುಕೊಡಬೇಕೆಂದು ಕೇಳಬಾರದು. ಆಧಾರ್ ಕಾರ್ಡ್ ಇತ್ಯಾದಿ ಐಡಿ ದಾಖಲೆಗಳನ್ನು ಕೇಳಬಾರದು ಎಂದು ಎಸ್ಬಿಐ ತನ್ನ ಎಲ್ಲಾ ಬ್ರ್ಯಾಂಚ್ ಅಧಿಕಾರಿಗಳಿಗೂ ಸೂಚಿಸಿದೆ. ಈ ಸಂಬಂಧ ಎಸ್ಬಿಐ ನಿನ್ನೆ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ.
ಇದನ್ನೂ ಓದಿ: Please Note: 2,000 ರೂ ನೋಟು ಸೆಪ್ಟಂಬರ್ 30ರ ಬಳಿಕ ಅಮಾನ್ಯಗೊಳ್ಳುತ್ತಾ? ಇಲ್ಲಿದೆ ಕೆಲ ವಾಸ್ತವ ಸಂಗತಿಗಳು
2,000 ರೂ ನೋಟುಗಳ ವಿನಿಮಯಕ್ಕೆ ಫಾರ್ಮ್ ತುಂಬಿಸಿಕೊಡಬೇಕು. ಐಡಿ ಪ್ರೂಫ್ ಸಲ್ಲಿಸಬೇಕು ಎಂಬಂತಹ ಸಂದೇಶಗಳು ಮತ್ತು ಪೋಸ್ಟ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಎಸ್ಬಿಐ ಈ ಸ್ಪಷ್ಟನೆ ನೀಡಿದೆ.
ಎಸ್ಬಿಐ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ ಯಾವುದೇ ವ್ಯಕ್ತಿ 2,000 ರೂ ಮುಖಬೆಲೆಯ ನೋಟುಗಳನ್ನು ಎಷ್ಟು ಬೇಕಾದರೂ ಬದಲಾಯಿಸಿಕೊಳ್ಳಬಹುದು. ಆದರೆ, ಒಮ್ಮೆಗೆ 10 ನೋಟು ಮಾತ್ರ, ಅಂದರೆ 20,000 ರೂಗಳವರೆಗೆ ಮಾತ್ರ ಎಕ್ಸ್ಚೇಂಜ್ ಮಾಡಿಕೊಳ್ಳಬಹುದು. 10ಕ್ಕಿಂತ ಹೆಚ್ಚು ನೋಟು ಇದ್ದರೆ, ಅ ವ್ಯಕ್ತಿ ಇನ್ನೊಮ್ಮೆ ಸರದಿಯಲ್ಲಿ ನಿಂತು ಹಣ ವಿನಿಮಯ ಮಾಡಿಕೊಳ್ಳಬೇಕು ಎಂದು ಎಸ್ಬಿಐ ಹೇಳಿದೆ.
ಇದನ್ನೂ ಓದಿ: Competition: ಮೇಲ್ಮನವಿಗೆ ಶೇ. 25 ಠೇವಣಿ, ಸುಳ್ಳು ಸ್ಟೇಟ್ಮೆಂಟ್ಗೆ 5ಕೋಟಿ ದಂಡ; ಸ್ಪರ್ಧಾ ಕಾಯ್ದೆ ತಿದ್ದುಪಡಿಗೆ ಹೊಸ ಅಂಶಗಳು
ಮೇ 23ರಿಂದ 2,000 ರೂ ನೋಟುಗಳ ವಿನಿಮಯ ಮಾಡಿಕೊಳ್ಳಬಹುದು. ಎಲ್ಲಾ ಬ್ಯಾಂಕ್ಗಳಲ್ಲೂ ನೋಟು ಎಕ್ಸ್ಚೇಂಜ್ ಇರುತ್ತದೆ. ಸೆಪ್ಟಂಬರ್ 30ರವರೆಗೂ ಅವಕಾಶ ಇದೆ. ಅದಾದ ಬಳಿಕವೂ 2,000 ರೂ ನೋಟು ಅಮಾನ್ಯವಾಗುವುದಿಲ್ಲ. ಲೀಗಲ್ ಟೆಂಡರ್ ಆಗಿ ಮುಂದುವರಿಯುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸೆಪ್ಟಂಬರ್ 30ರ ಬಳಿಕ ಸರ್ಕಾರ ಕಾಲಾವಧಿಯನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆ ಇದೆ.