‘ಎಸ್​ಬಿಐ ರಿವಾರ್ಡ್ ಪಾಯಿಂಟ್ಸ್’ ಆಸೆ ತೋರಿಸಿ ವಂಚಿಸುತ್ತಾರೆ… ಅಪ್ಪಿತಪ್ಪಿಯೂ ಡೌನ್​ಲೋಡ್ ಮಾಡಬೇಡಿ ಎಪಿಕೆ ಫೈಲ್

|

Updated on: Jan 17, 2025 | 11:28 AM

SBI reward points scam: ಎಸ್​ಬಿಐ ರಿವಾರ್ಡ್ ಪಾಯಿಂಟ್ಸ್ ರಿಡೀಮ್ ಮಾಡಿ ಎಂದು ಹೇಳಿ ಎಪಿಕೆ ಫೈಲ್ ಡೌನ್​ಲೋಡ್ ಲಿಂಕ್ ಇರುವ ಮೆಸೇಜ್​ಗಳು ಹರಿದಾಡುತ್ತಿವೆ. ಈ ರೀತಿಯ ಮೆಸೇಜ್​ಗಳಲ್ಲಿನ ಲಿಂಕ್​ಗಳನ್ನು ಯಾರೂ ಕ್ಲಿಕ್ ಮಾಡಬೇಡಿ ಎಂದು ಪಿಐಬಿ ಸಂಸ್ಥೆ ಮನವಿ ಮಾಡಿದೆ. ಸೈಬರ್ ವಂಚಕರು ನಕಲಿ ಎಪಿಕೆ ಫೈಲ್​ಗಳನ್ನು ಕಳುಹಿಸುತ್ತಿದ್ದಾರೆ. ಅವನ್ನು ಡೌನ್​ಲೋಡ್ ಮಾಡಿದರೆ ಬ್ಯಾಂಕಿಂಗ್ ಇತ್ಯಾದಿ ಮಾಹಿತಿಯನ್ನು ವಂಚಕರು ಕದಿಯಲು ಸಾಧ್ಯವಾಗುತ್ತದೆ.

‘ಎಸ್​ಬಿಐ ರಿವಾರ್ಡ್ ಪಾಯಿಂಟ್ಸ್’ ಆಸೆ ತೋರಿಸಿ ವಂಚಿಸುತ್ತಾರೆ... ಅಪ್ಪಿತಪ್ಪಿಯೂ ಡೌನ್​ಲೋಡ್ ಮಾಡಬೇಡಿ ಎಪಿಕೆ ಫೈಲ್
ಸೈಬರ್ ಕ್ರೈಮ್
Follow us on

ನವದೆಹಲಿ, ಜನವರಿ 17: ಆನ್​ಲೈನ್​ನಲ್ಲಿ ಸ್ವಲ್ಪ ಯಾಮಾರಿದರೂ ಹಣ ಕಳೆದುಕೊಳ್ಳುವಂತಹ ಪರಿಸ್ಥಿತಿ ಇದೆ. ವಂಚಕರು ಜನರನ್ನು ಯಾಮಾರಿಸಲು ಒಂದಲ್ಲ ಒಂದು ತಂತ್ರ ರೂಪಿಸುತ್ತಿರುತ್ತಾರೆ, ಬಲೆ ಹೆಣೆಯುತ್ತಲೇ ಇರುತ್ತಾರೆ. ಜನರನ್ನು ಸೆಳೆಯಲು ಆಮಿಷಗಳಿರುವ ಸಂದೇಶಗಳನ್ನು ಕಳುಹಿಸಿ, ಗೌಪ್ಯ ಲಿಂಕ್​ಗಳನ್ನು ಜೋಡಿಸುತ್ತಾರೆ. ಈ ಲಿಂಕ್ ಕ್ಲಿಕ್ ಮಾಡಿದರೆ ಮೊಬೈಲ್ ಅಥವಾ ಕಂಪ್ಯೂಟರ್​ಗೆ ವೈರಸ್ ಸೇರ್ಪಡೆಯಾಗಿ, ಅದರ ನಿಯಂತ್ರಣವು ವಂಚಕರ ಕೈಗೆ ಸಿಕ್ಕಿಬಿಡಬಹುದು. ಎಸ್​ಬಿಐ ಬ್ಯಾಂಕ್​ನ ಹೆಸರಿನಲ್ಲಿ ಇಂಥದ್ದೊಂದು ವಂಚಕ ಜಾಲ ಇಂಟರ್ನೆಟ್​​ನಲ್ಲಿ ಹಬ್ಬಿದೆ. ಎಸ್​ಬಿಐ ರಿವಾರ್ಡ್ ಪಾಯಿಂಟ್ಸ್ ಅನ್ನು ರಿಡೀಮ್ ಮಾಡಿಕೊಳ್ಳಲು ಈ ಆ್ಯಪ್ ಡೌನ್​ಲೋಡ್ ಮಾಡಿ ಎಂದು ಎಪಿಕೆ ಫೈಲ್​ವೊಂದನ್ನು ಜೋಡಿಸಲಾಗಿದೆ. ಇದನ್ನು ಕ್ಲಿಕ್ ಮಾಡುವುದು ಅಪಾಯ ಮೈಗೆಳೆದುಕೊಂಡಂತೆ.

ಎಸ್​ಬಿಐ ರಿವಾರ್ಡ್ಸ್ ಹೆಸರಿನಲ್ಲಿ ಮೆಸೇಜ್…

ಎಸ್​ಬಿಐ ರಿವಾರ್ಡ್ ಹೆಸರಿನಲ್ಲಿ ಈ ಕೆಳಗಿನ ಮೆಸೇಜ್ ಹರಿದಾಡುತ್ತಿದೆ:

‘ನಿಮ್ಮ ಎಸ್​ಬಿಐ ನೆಟ್​ಬ್ಯಾಂಕಿಂಗ್ ರಿವಾರ್ಡ್ ಪಾಯಿಂಟ್ಸ್ (9,980 ರೂ) ಇವತ್ತು ಮುಗಿಯುತ್ತದೆ. ಎಸ್​ಬಿಐ ರಿವಾರ್ಡ್ ಆ್ಯಪ್ ಅನ್ನು ಇನ್ಸ್​ಟಾಲ್ ಮಾಡಿ ಇದನ್ನು ರಿಡೀಮ್ ಮಾಡಿಕೊಳ್ಳಿ. ನಿಮ್ಮ ಅಕೌಂಟ್​ನಲ್ಲಿ ಕ್ಯಾಷ್ ಡೆಪಾಸಿಟ್ ಮಾಡಿರಿ’ ಎಂದು ಈ ಮೆಸೇಜ್​ನಲ್ಲಿ ಬರೆಯಲಾಗಿದೆ. ಇದೇ ಮೆಸೇಜ್​ನಲ್ಲಿ ‘ಎಸ್​ಬಿಐ ರಿವಾರ್ಡ್ 27’ ಹೆಸರಿನ ಎಪಿಕೆ ಫೈಲ್​ನ ಡೌನ್​ಲೋಡ್ ಲಿಂಕ್ ಕೂಡ ಇದೆ.

ಇದನ್ನೂ ಓದಿ: ಮೊಬೈಲ್ ನಂಬರ್ ರೀತಿ ನಿಮ್ಮ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯನ್ನೂ ಪೋರ್ಟ್ ಮಾಡಬಹುದಾ? ಇಲ್ಲಿದೆ ಡೀಟೇಲ್ಸ್

ಎಸ್ಸೆಮ್ಮೆಸ್, ವಾಟ್ಸಾಪ್ ಮುಖಾಂತರ ವಿವಿಧ ಜನರಿಗೆ ಈ ರೀತಿಯ ಸಂದೇಶಗಳು ಬರುತ್ತಿವೆ. ಸರ್ಕಾರದ ಪಿಐಬಿ ಫ್ಯಾಕ್ಟ್​ಚೆಕ್ ಎನ್ನುವ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಸಲಾಗಿದ್ದು, ಯಾರೂ ಕೂಡ ಈ ಮೆಸೇಜ್​ನಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಬಾರದೆಂದು ಮನವಿ ಮಾಡಲಾಗಿದೆ.

ಎಪಿಕೆ ಫೈಲ್ ವೈರಸ್ ದಾಳಿಗೆ ರಹದಾರಿ

ಎಪಿಕೆ ಎಂಬುದು ಆ್ಯಂಡ್ರಾಯ್ಡ್ ಪ್ಯಾಕೇಜ್ ಕಿಟ್. ಆಂಡ್ರಾಯ್ಡ್ ಆ್ಯಪ್​ಗಳಿಗೆ ಇರುವ ಎಕ್ಸ್​ಟೆನ್ಷನ್ ಇದು. ವಂಚಕರು ಎಪಿಕೆ ಫೈಲ್ ಮೂಲಕ ವೈರಸ್, ಮಾಲ್​ವೇರ್ ಅನ್ನು ಸೇರಿಸಿರುತ್ತಾರೆ. ಇವುಗಳನ್ನು ಇನ್ಸ್​ಟಾಲ್ ಮಾಡಿದರೆ ಮೊಬೈಲ್​ಗೆ ಮಾಲ್​ವೇರ್ ಹೊಕ್ಕಿಬಿಡುತ್ತದೆ. ಬ್ಯಾಂಕಿಂಗ್ ಸೇರಿದಂತೆ ಸೂಕ್ಷ್ಮ ಮಾಹಿತಿ, ದತ್ತಾಂಶಗಳೆಲ್ಲವೂ ವಂಚಕ ಕೈಗೆ ಸಿಕ್ಕಿಬಿದ್ದುಬಿಡಬಹುದು.

ಇದನ್ನೂ ಓದಿ: ಎಂಟನೇ ವೇತನ ಆಯೋಗ ಸ್ಥಾಪನೆಗೆ ಕೇಂದ್ರ ಸಂಪುಟ ಅಸ್ತು; ಸರ್ಕಾರಿ ನೌಕರರಿಗೆ ಸಖತ್ ಖುಷಿ ಸುದ್ದಿ

ಸೈಬರ್ ವಂಚನೆ ಆಗಿಹೋದರೆ ಈ ಕ್ರಮ ಜರುಗಿಸಿ…

ಎಪಿಕೆ ಫೈಲ್ ಡೌನ್​ಲೋಡ್ ಮಾಡಿಯೋ, ಅಥವಾ ಇನ್ಯಾವುದಾದರೂ ರೀತಿಯಲ್ಲೋ ನೀವು ಸೈಬರ್ ವಂಚನೆಗೆ ಒಳಗಾಗಿದ್ದರೆ ರಾಷ್ಟ್ರೀಯ ಸೈಬರ್ ಕ್ರೈಮ್​ನ ಹೆಲ್ಪ್​ಲೈನ್ ಸಂಖ್ಯೆಯಾದ 1930 ನಂಬರ್​ಗೆ ಡಯಲ್ ಮಾಡಿ ಮಾಹಿತಿ ನೀಡಿರಿ. ಹಾಗೆಯೇ, ಸೈಬರ್ ಕ್ರೈಮ್ ವೆಬ್​ಸೈಟ್​ಗೆ (cybercrime.gov.in/) ಹೋಗಿ ಅಲ್ಲಿಯೂ ದೂರು ಸಲ್ಲಿಸಬಹುದು.

ನೀವು ಎಸ್​ಬಿಐ ಗ್ರಾಹಕರಾಗಿದ್ದರೆ, ಬ್ಯಾಂಕಿಂಗ್ ವಂಚನೆ ಆಗಿದ್ದರೆ ಟೋಲ್ ಫ್ರೀ ಸಂಖ್ಯೆಗಳಾದ 18001800, 18002021, 18001802222 ಅನ್ನು ಸಂಪರ್ಕಿಸಿ ದೂರು ನೀಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ