ಬೆಂಗಳೂರು: ಭಾರತದ ಅತಿದೊಡ್ಡ ಬ್ಯಾಂಕ್ ಎನಿಸಿರುವ ‘ಭಾರತೀಯ ಸ್ಟೇಟ್ ಬ್ಯಾಂಕ್’ (State Bank of India – SBI) ಮೊಬೈಲ್ ಮೂಲಕ ಹಣ ವರ್ಗಾವಣೆ ವಿಧಿಸುತ್ತಿದ್ದ ಎಸ್ಎಂಎಸ್ ಸಂದೇಶದ ಶುಲ್ಕವನ್ನು ಮನ್ನಾ ಮಾಡುವುದಾಗಿ ಘೋಷಿಸಿದೆ. ಬಳಕೆದಾರರು ಈಗ ಯುಎಸ್ಎಸ್ಡಿ (Unstructured Supplementary Service Data – USSED) ಸೇವೆಗಳ ಮೂಲಕ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ವಹಿವಾಟು ನಡೆಸಬಹುದು ಎಂದು ಎಸ್ಬಿಐ ಮಾಹಿತಿ ನೀಡಿದೆ. ಈ ಕುರಿತು ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಟ್ವೀಟ್ ಮಾಡಿರುವ ಎಸ್ಬಿಐ, ‘ಮೊಬೈಲ್ ಮೂಲಕ ನಗದು ವರ್ಗಾವಣೆ-ವಹಿವಾಟು ಮೇಲಿನ ಎಸ್ಎಂಎಸ್ ಶುಲ್ಕಗಳನ್ನು ಈಗ ಮನ್ನಾ ಮಾಡಲಾಗಿದೆ. ಬಳಕೆದಾರರು ಈಗ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ವಹಿವಾಟು ನಡೆಸಬಹುದು’ ಎಂದು ಹೇಳಿದೆ.
ಬಳಕೆದಾರರು ಹಣ ಕಳುಹಿಸಲು, ಹಣ ವಿನಂತಿಸಲು, ಖಾತೆಯಲ್ಲಿರುವ ಬಾಕಿ ಮೊತ್ತ ತಿಳಿಯಲು, ಮಿನಿ ಸ್ಟೇಟ್ಮೆಂಟ್ ಪಡೆಯಲು ಹಾಗೂ ಯುಪಿಐ ಪಿನ್ ಬದಲಾವಣೆ ಸೇರಿದಂತೆ ಹಲವು ಸೇವೆಗಳನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪಡೆಯಬಹುದು ಎಂದು ಎಸ್ಬಿಐ ಹೇಳಿದೆ.
ಏನಿದು ಯುಎಸ್ಎಸ್ಡಿ
ಯುಎಸ್ಎಸ್ಡಿ ವ್ಯವಸ್ಥೆಯನ್ನು ಸಾಮಾನ್ಯವಾಗಿ ಮೊಬೈಲ್ ಸೇವಾದಾತ ಕಂಪನಿಗಳು ಟಾಕ್ಟೈಮ್ ಬ್ಯಾಲೆನ್ಸ್ ಅಥವಾ ಖಾತೆಯ ಮಾಹಿತಿ ಪರಿಶೀಲಿಸುವ ಸೇವೆ ಒದಗಿಸಲು ನೀಡುತ್ತವೆ. ಇತ್ತೀಚಿನ ದಿನಗಳಲ್ಲಿ ಇದೇ ಸೇವೆಯನ್ನು ಮೊಬೈಲ್ ಬ್ಯಾಂಕಿಂಗ್ ವಹಿವಾಟುಗಳಿಗೂ ಬಳಸಲಾಗುತ್ತಿದೆ. ಈ ಸೇವೆಯು ಸ್ಮಾರ್ಟ್ಫೋನ್ಗಳಲ್ಲಿ ಮಾತ್ರವೇ ಅಲ್ಲ, ಫೀಚರ್ ಫೋನ್ಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಭಾರತದಲ್ಲಿ ಸುಮಾರು 100 ಕೋಟಿ ಮೊಬೈಲ್ ಫೋನ್ಗಳು ಬಳಕೆಯಲ್ಲಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಸುಮಾರು 65 ಕೋಟಿ ಮೊಬೈಲ್ಗಳು ಫೀಚರ್ ಫೋನ್ಗಳಾಗಿವೆ. ಇಂಥ ಫೋನ್ಗಳನ್ನು ಬಳಸುವವರಿಗೆ ಯುಎಸ್ಎಸ್ಡಿ ಹೆಚ್ಚಿನ ಅನುಕೂಲಗಳನ್ನು ಒದಗಿಸುತ್ತದೆ.
SMS charges now waived off on mobile fund transfers! Users can now conveniently transact without any additional charges.#SBI #StateBankOfIndia #AmritMahotsav #FundTransfer pic.twitter.com/MRN1ysqjZU
— State Bank of India (@TheOfficialSBI) September 17, 2022
ಬೆಂಚ್ಮಾರ್ಕ್ ದರ ಹೆಚ್ಚಳ
ಎಸ್ಬಿಐ ತನ್ನ ಬೆಂಚ್ ಮಾರ್ಕ್ ಪ್ರೈಮ್ ಲೆಂಡಿಂಗ್ (ಸಾಲ ನೀಡುವ ಗರಿಷ್ಠ ಬಡ್ಡಿ) ದರವನ್ನು 70 ಮೂಲಾಂಶಗಳಷ್ಟು ಹೆಚ್ಚಿಸಿದೆ. ಎಸ್ಬಿಐ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಪರಿಷ್ಕೃತ ಬಡ್ಡಿದರವು ಸೆಪ್ಟೆಂಬರ್ 15ರಿಂದ ಜಾರಿಗೆ ಬರಲಿದ್ದು, ಶೇ 13.45ರ ಗರಿಷ್ಠ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಬ್ಯಾಂಕ್ ಸಾಲಸ ನೀಡುವ ಕನಿಷ್ಠ ಬಡ್ಡಿದರವನ್ನು ಶೇ 8.7ಕ್ಕೆ ಹೆಚ್ಚಿಸಿದೆ. ಈ ಬೆಳವಣಿಗೆಯಿಂದ ಸಾಲಗಾರರ ಇಎಂಐ ಮಾಸಿಕ ಕಂತಿನ ಪ್ರಮಾಣವೂ ಹೆಚ್ಚಾಗಲಿದೆ.
ಪ್ರತಿ ಮೂರು ತಿಂಗಳಿಗೆ ಒಮ್ಮೆ ಮಾರುಕಟ್ಟೆ ಪರಿಸ್ಥಿತಿ ಆಧರಿಸಿ ಬ್ಯಾಂಕ್ಗಳು ಬಿಪಿಎಲ್ಆರ್ ಮತ್ತು ಮೂಲ ದರಗಳನ್ನೂ ಪರಿಷ್ಕರಿಸುತ್ತವೆ. ಎಸ್ಬಿಐನ ಸಾಲದ ದರ ಪರಿಷ್ಕರಣೆಯನ್ನು ಮುಂದಿನ ದಿನಗಳಲ್ಲಿ ಇತರ ಬ್ಯಾಂಕುಗಳು ಅನುಸರಿಸುವ ಸಾಧ್ಯತೆಯಿದೆ.