ತಿರುವನಂತಪುರ: ಬಾಣಸಿಗನಾಗಿ ಕೆಲಸ ಮಾಡಲು ಮಲೇಷಿಯಾಕ್ಕೆ ಹೋಗಲು ₹ 3 ಲಕ್ಷ ಸಾಲಕ್ಕೆ ಅರ್ಜಿ ಹಾಕಿದ್ದ ಆಟೊ ಚಾಲಕರೊಬ್ಬರಿಗೆ ಭಾನುವಾರ ಡ್ರಾ ಆದ ಕೇರಳದ ಓಣಂ ಲಾಟರಿಯಲ್ಲಿ (Onam Lottery Bumper Draw) ಬರೋಬ್ಬರಿ ₹ 25 ಕೋಟಿ ಬಹುಮಾನ ಬಂದಿದೆ. ಈ ಬಹುಮಾನ ಘೋಷಣೆಯಾಗುವ ಮೂರು ದಿನ ಮೊದಲು ₹ 3 ಲಕ್ಷಕ್ಕೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ಹಣಕಾಸು ಸಂಸ್ಥೆ ಸಾಲ ನೀಡಲು ಒಪ್ಪಿಕೊಂಡಿತ್ತು. ಡ್ರಾ ಆಗುವ ದಿನಾಂಕಕ್ಕೆ ಒಂದು ದಿನ ಮೊದಲಷ್ಟೇ, ಅಂದರೆ ಶನಿವಾರವಷ್ಟೇ ಇಲ್ಲಿನ ಶ್ರೀವರಾಹಂ ಮೂಲದ ಅನೂಪ್ ಬಹುಮಾನ ಗೆದ್ದ ಲಾಟರಿ ಟಿಕೆಟ್ ಖರೀದಿಸಿದ್ದರು.
ಟಿಕೆಟ್ಗಾಗಿ ಹಣ ಕೊಟ್ಟ ಅವರಿಗೆ ಮೊದಲು ಬೇರೊಂದು ಟಿಕೆಟ್ ನೀಡಲಾಗಿತ್ತು. ಆದರೆ ಅದೇನನ್ನಿಸಿತೋ ಏನೋ ಅವರು ‘ಇದು ಬೇಡ, ಮತ್ತೊಂದು ಟಿಕೆಟ್ ಕೊಡಿ’ ಎಂದು ಪಡೆದುಕೊಂಡರು ಎಂದು ಅವರಿಗೆ ಟಿಕೆಟ್ ಮಾರಿದ ಲಾಟರಿ ಏಜೆನ್ಸಿ ಪ್ರತಿನಿಧಿಗಳು ಹೇಳಿದರು.
ಸಾಲ ಮತ್ತು ಅವರ ಮಲೇಷ್ಯಾ ಪ್ರವಾಸದ ಬಗ್ಗೆ ಮಾತನಾಡಿದ ಅನೂಪ್, ‘ಸಾಲಕ್ಕೆ ಸಂಬಂಧಿಸಿದಂತೆ ಬ್ಯಾಂಕ್ಗೆ ಇಂದು ಕರೆ ಮಾಡಿದ್ದೆ. ಮುಂದೆ ನನಗೆ ಸಾಲದ ಅಗತ್ಯವಿಲ್ಲ ಎಂದು ಹೇಳಿದೆ. ನಾನು ಮಲೇಷ್ಯಾಕ್ಕೂ ಹೋಗುವುದಿಲ್ಲ’ ಎಂದರು. ಕಳೆದ 22 ವರ್ಷಗಳಿಂದ ಅನೂಪ್ ಲಾಟರಿ ಟಿಕೆಟ್ಗಳನ್ನು ಖರೀದಿಸುತ್ತಿದ್ದಾರೆ. ಈ ಹಿಂದೆಯೂ ಹಲವು ಬಾರಿ ನೂರಿನ್ನೂರು ರೂಪಾಯಿ ಗೆದ್ದಿದ್ದರು. ಒಮ್ಮೆ ಮಾತ್ರ ಗರಿಷ್ಠ ₹ 5,000 ವರೆಗಿನ ಮೊತ್ತ ಬಂದಿತ್ತು ಎಂದು ಅನೂಪ್ ಹೇಳಿದರು.
‘ನಾನು ಗೆಲ್ಲುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ನಾನು ಲಾಟರಿ ಫಲಿತಾಂಶಗಳನ್ನು ಟಿವಿಯಲ್ಲಿ ನೋಡುತ್ತಿರಲಿಲ್ಲ. ಒಮ್ಮೆ ಎಸ್ಎಂಎಸ್ ಪರಿಶೀಲಿಸಿದಾಗ ಪರಿಶೀಲಿಸಿದಾಗ ನನಗೆ ಲಾಟರಿ ಬಂದಿತ್ತು ಎಂಬುದು ತಿಳಿಯಿತು. ನನಗೆ ಅದನ್ನು ನಂಬಲು ಸಾಧ್ಯವಾಗಲಿಲ್ಲ. ನನ್ನ ಹೆಂಡತಿಗೆ ತೋರಿಸಿದೆ. ಇದು ಗೆಲುವಿನ ಸಂಖ್ಯೆ ಎಂದು ಅವರು ದೃಢಪಡಿಸಿದರು’ ಎಂದು ಅನೂಪ್ ಖುಷಿಯ ಕ್ಷಣವನ್ನು ವಿವರಿಸಿದರು. ನನಗೆ ಇನ್ನೂ ಅನುಮಾನ ಪರಿಹಾರವಾಗಲಿಲ್ಲ. ನಾನು ಲಾಟರಿ ಟಿಕೆಟ್ ಮಾರುವ ನನಗೆ ತಿಳಿದಿರುವ ಮಹಿಳೆಗೆ ನನ್ನ ಟಿಕೆಟ್ನ ಚಿತ್ರ ಕಳುಹಿಸಿದೆ. ಇದು ಗೆಲುವಿನ ಸಂಖ್ಯೆ ಎಂದು ಅವರು ಖಚಿತಪಡಿಸಿದರು’ ಎಂದು ಅನೂಪ್ ಹೇಳಿದರು.
ತೆರಿಗೆ ಕಡಿತಗೊಳಿಸಿದ ನಂತರ, ಅನೂಪ್ ಬಹುಶಃ ಸುಮಾರು ₹ 15 ಕೋಟಿ ಬಹುಮಾನ ಸಿಗಬಹುದು. ಇಷ್ಟೊಂದು ಹಣ ಏನು ಮಾಡ್ತೀರಿ ಎಂದು ಕೇಳಿದಾಗ, ‘ಒಂದು ಮನೆ ಕಟ್ಟಿಕೊಳ್ಳಬೇಕು, ಹಳೆಯ ಸಾಲ ತೀರಿಸಿಕೊಳ್ಳಬೇಕು. ಅದು ನನ್ನ ಆದ್ಯತೆ’ ಎಂದು ತಿಳಿಸಿದರು. ಇದಲ್ಲದೆ, ಅನೂಪ್ ತನ್ನ ಸಂಬಂಧಿಕರಿಗೆ ಸಹಾಯ ಮಾಡುತ್ತೇನೆ, ಕೆಲವು ಚಾರಿಟಿ ಕೆಲಸಗಳನ್ನು ಮಾಡುತ್ತೇನೆ ಮತ್ತು ಕೇರಳದಲ್ಲಿ ಹೊಟೆಲ್ ಆರಂಭಿಸುತ್ತೇನೆ ಎಂದರು.
ಏಜೆನ್ಸಿಯಲ್ಲಿ ಅವರೊಂದಿಗೆ ಹಾಜರಿದ್ದ ಅವರ ಪತ್ನಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅವರು ಹಲವಾರು ವರ್ಷಗಳಿಂದ ಟಿಕೆಟ್ ಖರೀದಿಸುತ್ತಿದ್ದಾರೆ ಎಂದು ಹೇಳಿದರು. ‘ಗೆಲುವಿನ ಬಗ್ಗೆ ತಿಳಿದ ಹಲವರು ಕರೆ ಮಾಡಿ ಅಭಿನಂದಿಸಿದರು’ ಎಂದು ಖುಷಿ ಹಂಚಿಕೊಂಡರು.
Thiruvananthapuram, Kerala | Auto driver wins Rs 25 cr in Onam bumper lottery. Of this money, Anoop (the winner) will get Rs 15.75 cr after tax deduction.
— ANI (@ANI) September 18, 2022
ಕಾಕತಾಳೀಯವೆಂಬಂತೆ, ಕಳೆದ ವರ್ಷದ ಓಣಂ ಬಂಪರ್ ಲಾಟರಿಯೂ ಆಟೊ ರಿಕ್ಷಾ ಚಾಲಕರಿಗೆ ಒಲಿದಿತ್ತು. ₹ 12 ಕೋಟಿ ಮೊತ್ತವನ್ನು ಕೊಚ್ಚಿ ಸಮೀಪದ ಮರಡುವಿನ ಆಟೊ ಚಾಲಕ ಪಿ.ಆರ್.ಜಯಪಾಲನ್ ಕಳೆದ ವರ್ಷ ಲಾಟರಿ ಗೆದ್ದಿದ್ದರು.
ಈ ವರ್ಷದ ಎರಡನೇ ಬಹುಮಾನ ₹ 5 ಕೋಟಿಯಾಗಿದೆ. ಇತರ 10 ಜನರು ತಲಾ ₹ 1 ಕೋಟಿ ಬಹುಮಾನವನ್ನು ಗೆದ್ದಿದ್ದಾರೆ. ಇದಕ್ಕೂ ಮುನ್ನ ಇಲ್ಲಿನ ಗೋರ್ಕಿ ಭವನದಲ್ಲಿ ನಡೆದ ಲಕ್ಕಿ ಡ್ರಾ ಸಮಾರಂಭದಲ್ಲಿ ಕೇರಳದ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಅವರು ವಿಜೇತ ಸಂಖ್ಯೆಯನ್ನು ಆಯ್ಕೆ ಮಾಡಿದರು.
Published On - 6:58 am, Mon, 19 September 22