ನವದೆಹಲಿ, ಸೆಪ್ಟೆಂಬರ್ 13: ಸೆಬಿ ಮುಖ್ಯಸ್ಥೆಯಾಗಿ ಬೇರೆ ಸಂಸ್ಥೆಗಳಿಂದ ಇನ್ನೂ ಆದಾಯ ಪಡೆಯುವ ಮೂಲಕ ಭ್ರಷ್ಟಾಚಾರ ಮತ್ತು ಹಿತಾಸಕ್ತಿ ಘರ್ಷಣೆ ಮಾಡುತ್ತಿದ್ದಾರೆ ಎಂದು ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳನ್ನು ಮಾಧವಿ ಪುರಿ ಬುಚ್ ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಈ ಆರೋಪಗಳ ಬಗ್ಗೆ ಬಹಳ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಅದರ ಹೆಸರೆತ್ತದೆಯೇ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಆರೋಪದಲ್ಲಿ ಯಾವ ಹುರುಳಿಲ್ಲ. ಉದ್ದೇಶಪೂರ್ವಕವಾಗಿ ಸುಳ್ಳು ಅಭಿಪ್ರಾಯ ಸೃಷ್ಟಿಸಲು ಈ ಆರೋಪಗಳನ್ನು ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಕಾನೂನು ಕ್ರಮ ಬೇಕಾದರೂ ಜರುಗಿಸುತ್ತೇವೆ ಎಂದು ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಳ್ ಬುಚ್ ಹೇಳಿದ್ದಾರೆ.
ಮಾಧವಿ ಪುರಿ ಬುಚ್ ಮತ್ತು ಪತಿ ಧವಳ್ ಬುಚ್ ಅವರಿಗೆ ಸೇರಿದ ಅಗೋರಾ ಅಡ್ವೈಸರಿ ಎಂಬ ಕನ್ಸಲ್ಟಿಂಗ್ ಏಜೆನ್ಸಿ ಹೊಂದಿದ್ದಾರೆ. ಮಾಧವಿ ಅವರು ಸೆಬಿ ಸದಸ್ಯೆಯಾಗುವ ಮುನ್ನ ಐಸಿಐಸಿಐ ಸಂಸ್ಥೆಯಲ್ಲಿದ್ದರು. ಸೆಬಿ ಸದಸ್ಯೆಯಾದ ಬಳಿಕವೂ ಅವರಿಗೆ ಐಸಿಐಸಿಐ ಗ್ರೂಪ್ನಿಂದ ಸಂಭಾವನೆ ಬರುತ್ತಿದೆ. ಅಗೋರಾ ಅಡ್ವೈಸರಿ ಸಂಸ್ಥೆ ಮೂಲಕ ಬೇರೆ ಬೇರೆ ಸಂಸ್ಥೆಗಳಿಂದಲೂ ಆದಾಯ ಬರುತ್ತಿದೆ ಎಂಬ ಆರೋಪ ಇತ್ತೀಚೆಗೆ ಕೇಳಿಬಂದಿದೆ. ವಿಪಕ್ಷವಾದ ಕಾಂಗ್ರೆಸ್ ಈ ವಿಚಾರ ಇಟ್ಟುಕೊಂಡು ಭಾರತದ ಷೇರು ಮಾರುಕಟ್ಟೆಯಲ್ಲಿ ಅತಿದೊಡ್ಡ ಸ್ಕ್ಯಾಮ್ ಆಗುತ್ತಿದೆ. ಸೆಬಿ ಮುಖ್ಯಸ್ಥೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿದೆ.
ಇದನ್ನೂ ಓದಿ: ಕ್ರೀಮ್ ಬನ್ ಮೂಲಕ ಹಣಕಾಸು ಸಚಿವೆಗೆ ಜಿಎಸ್ಟಿ ಟಾಂಟ್ ಕೊಟ್ಟ ಹೋಟೆಲ್ ಉದ್ಯಮಿ; ನಿರ್ಮಲಾ ಕೊಟ್ಟ ಉತ್ತರ ಇದು
2017ರಲ್ಲಿ ಸೆಬಿಗೆ ಪೂರ್ಣಾವಧಿ ಸದಸ್ಯೆಯಾಗಿ ನೇಮಕವಾದಾಗಿನಿಂದಲೂ ತಮ್ಮ ಕನ್ಸಲ್ಟೆನ್ಸಿ ಸಂಸ್ಥೆ, ಆಸ್ತಿ, ಆದಾಯ ಇವೆಲ್ಲಾ ವಿವರಗಳನ್ನು ಸೆಬಿಗೆ ಸಲ್ಲಿಸುತ್ತಾ ಬಂದಿರುವುದಾಗಿ ಮಾಧವಿ ಪುರಿ ಬುಚ್ ಅವರು ಹೇಳುತ್ತಿದ್ದಾರೆ. ಅಲ್ಲದೇ, ತಮ್ಮ ಅವಧಿಯಲ್ಲಿ ಐಸಿಐಸಿಐ ಗ್ರೂಪ್ ಕಂಪನಿಗಳಿಗೆ ಸಂಬಂಧಿಸಿದ ಯಾವುದೇ ಫೈಲ್ಗಳ ವಿಲೇವಾರಿ ಮಾಡಿಲ್ಲ ಎಂದೂ ಸೆಬಿ ಮುಖ್ಯಸ್ಥೆ ಸ್ಪಷ್ಟಪಡಿಸಿದ್ದಾರೆ.
ಅದಾನಿ ಪ್ರತಿನಿಧಿಸುವ ವ್ಯಕ್ತಿಯೊಬ್ಬರು ರಹಸ್ಯ ನಿಧಿಗಳಲ್ಲಿ ಹೂಡಿಕೆ ಮಾಡಿದ್ಧಾರೆ. ಆ ಫಂಡ್ಗಳು ಅದಾನಿ ಗ್ರೂಪ್ನ ಷೇರುಗಳನ್ನು ಹೊಂದಿವೆ ಎಂದು ಸ್ವಿಟ್ಜರ್ಲ್ಯಾಂಡ್ನ ಗೋಥಾಮ್ ಸಿಟಿ ಎನ್ನುವ ಪತ್ರಿಕೆಯೊಂದರಲ್ಲಿ ವರದಿ ಮಾಡಲಾಗಿದೆ. ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಈ ವಿಚಾರವನ್ನು ತನ್ನ ಎಕ್ಸ್ ಪೋಸ್ಟ್ನಲ್ಲಿ ಹೇಳಿದೆ.
ಇದನ್ನೂ ಓದಿ: ನವರತ್ನದಿಂದ ಮಹಾರತ್ನ ಸ್ಥಾನಮಾನ ಪಡೆಯಲಿರುವ ಬೆಂಗಳೂರಿನ ಎಚ್ಎಎಲ್
ಅದಾನಿ ಗ್ರೂಪ್ ಈ ಬೆಳವಣಿಗೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅದೇ ಸಂಚುಕೋರರು ಒಟ್ಟಾಗಿ ಸೇರಿ ಅದಾನಿ ಗ್ರೂಪ್ನ ಘನತೆ ಕುಂದಿಸಲು ಮತ್ತು ಮಾರುಕಟ್ಟೆ ಮೌಲ್ಯ ಕುಸಿಯುವಂತೆ ಮಾಡಲು ಪಿತೂರಿ ನಡೆಸಿದ್ದಾರೆ ಎಂದು ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ