
ನವದೆಹಲಿ, ಸೆಪ್ಟೆಂಬರ್ 15: ಪ್ರಧಾನಿ ನರೇಂದ್ರ ಮೋದಿ ಅವರು ನಾಳಿದ್ದು ಸೆಪ್ಟೆಂಬರ್ 17ರಂದು ಸೆಮಿಕಾನ್ ಇಂಡಿಯಾ 2026 ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM), ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ಜಾಗತಿಕ ಸೆಮಿಕಂಡಕ್ಟರ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಉದ್ಯಮ ಪ್ರತಿನಿಧಿಸುವ ಸೆಮಿ (SEMI) ಸಂಘಟನೆ ಈ ಐದನೇ ಆವೃತ್ತಿಯ ಸೆಮಿಕಾನ್ ಇಂಡಿಯಾ ಕಾರ್ಯಕ್ರಮ (Semicon India 2026) ಆಯೋಜಿಸಿವೆ. ಸೆಪ್ಟೆಂಬರ್ 17ರಿಂದ 19ರವರೆಗೂ ಮೂರು ದಿನಗಳ ಕಾಲ ದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಅಂಡ್ ಎಕ್ಸ್ಪೋ ಸೆಂಟರ್ನಲ್ಲಿ (ಯಶೋಭೂಮಿ) ಸೆಮಿಕಾನ್ ಕಾರ್ಯಕ್ರಮಗಳು ನಡೆಯಲಿವೆ.
15,000 ಚದರ ಮೀಟರ್ಗಳಷ್ಟು ವಿಸ್ತೀರ್ಣದ ಈ ಪ್ರದರ್ಶನ ಜಾಗದಲ್ಲಿ ಆರು ದೇಶಗಳ ಪೆವಿಲಿಯನ್ಗಳು, 12 ರಾಜ್ಯ ಸರ್ಕಾರಗಳ ಪೆವಿಲಿಯನ್ಗಳನ್ನು ನಿರ್ಮಿಸಲಾಗಿದೆ. 600ಕ್ಕೂ ಅಧಿಕ ಪ್ರದರ್ಶಕರು ಪಾಲ್ಗೊಳ್ಳಲಿದ್ದಾರೆ. ಮೂರು ದಿನಗಳು ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಸೆಕ್ಟರ್ ಕುರಿತು ಚರ್ಚೆಗಳು, ಪ್ರದರ್ಶನಗಳು ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.
ಮೋದಿ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಹಾಗೂ ‘ಸೆಮಿಕಂಡಕ್ಟರ್ ಮಿಷನ್’ ಯೋಜನೆಗಳು ಭಾರತದಲ್ಲಿ ಜಾಗತಿಕ ಮಟ್ಟದ ಚಿಪ್ ತಯಾರಿಕಾ ವಾತಾವರಣವನ್ನು ಯಶಸ್ವಿಯಾಗಿ ನಿರ್ಮಿಸುತ್ತಿವೆ. ಕೇವಲ ಇಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಜೋಡಿಸುವುದರಿಂದ ಹಿಡಿದು, ಅವುಗಳ ಒಳಗಿರುವ ಸಂಕೀರ್ಣ ಚಿಪ್‌ಗಳನ್ನು ತಯಾರಿಸುವ ಹಂತಕ್ಕೆ ಭಾರತ ತಲುಪಿದೆ.
ಇದನ್ನೂ ಓದಿ: ರೀಟೇಲ್ ಹಣದುಬ್ಬರ 37 ಮೂಲಾಂಕಗಳಷ್ಟು ಏರಿಕೆ; ಆಗಸ್ಟ್ನಲ್ಲಿ ಚಿಲ್ಲರೆ ಹಣದುಬ್ಬರ ದರ ಶೇ. 4.82 ದಾಖಲು
ಸೆ. 17, ಗುರುವಾರ ಆರಂಭವಾಗುವ ಸೆಮಿಕಂಡಕ್ಟರ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿಯವರ ಭಾಷಣವು ದೇಶದ ಮುಂದಿನ ತಂತ್ರಜ್ಞಾನ ದೃಷ್ಟಿಕೋನಕ್ಕೆ ಹೊಸ ದಿಕ್ಸೂಚಿ ನೀಡಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ