Interest Rates: ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪರಿಷ್ಕರಿಸಿದ ಸರ್ಕಾರ; ಸುಕನ್ಯಾ ಸಮೃದ್ಧಿ, ಪೋಸ್ಟ್ ಆಫೀಸ್​ನ ಠೇವಣಿ ದರ ಹೆಚ್ಚಳ

|

Updated on: Dec 29, 2023 | 6:57 PM

Small Savings Schemes Interest Rate: ಕೊನೆಯ ಕ್ವಾರ್ಟರ್​ಗೆ ಸರ್ಕಾರ ತನ್ನ ವಿವಿಧ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪರಿಷ್ಕರಣೆ ಮಾಡಿದೆ. ಅಂಚೆ ಕಚೇರಿಯ 3 ವರ್ಷದ ಟರ್ಮ್ ಡೆಪಾಸಿಟ್​ನ ಬಡ್ಡಿದರ ಶೇ. 7ರಿಂದ ಶೇ. 7.1ಕ್ಕೆ ಹೆಚ್ಚಾಗಿದೆ. ಕಳೆದ ಬಾರಿ ಅಂಚೆ ಕಚೇರಿಯ 5 ವರ್ಷದ ಆರ್​ಡಿ ಯೋಜನೆ ಹೊರತಪಡಿಸಿ ಉಳಿದ ಸ್ಕೀಮ್​ಗಳಿಗೆ ಬಡ್ಡಿದರ ವ್ಯತ್ಯಯವಾಗಿರಲಿಲ್ಲ.

Interest Rates: ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪರಿಷ್ಕರಿಸಿದ ಸರ್ಕಾರ; ಸುಕನ್ಯಾ ಸಮೃದ್ಧಿ, ಪೋಸ್ಟ್ ಆಫೀಸ್​ನ ಠೇವಣಿ ದರ ಹೆಚ್ಚಳ
ಠೇವಣಿ ಯೋಜನೆಗೆ ಬಡ್ಡಿ
Follow us on

ನವದೆಹಲಿ, ಡಿಸೆಂಬರ್ 29: ಈ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್ ಅವಧಿಗೆ (2024ರ ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ) ಸಣ್ಣ ಉಳಿತಾಯ ಯೋಜನೆಗಳಿಗೆ (small savings scheme) ಸರ್ಕಾರ ಬಡ್ಡಿದರ ಪರಿಷ್ಕರಣೆ ಮಾಡಿದೆ. ಅಂಚೆ ಕಚೇರಿಯ 3 ವರ್ಷದ ಅವಧಿ ಠೇವಣಿಗೆ 10 ಬೇಸಿಸ್ ಅಂಕಗಳಷ್ಟು ಬಡ್ಡಿ ಹೆಚ್ಚಿಸಿದೆ. ಸುಕನ್ಯಾ ಸಮೃದ್ಧಿ ಯೋಜನೆಯ ದರವನ್ನು ಶೇ. 8ರಿಂದ ಶೇ. 8.2ಕ್ಕೆ ಹೆಚ್ಚಿಸಲಾಗಿದೆ. ಇದು ಬಿಟ್ಟರೆ ಉಳಿದ ಎಲ್ಲಾ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳ ದರದಲ್ಲಿ ಯಥಾಸ್ಥಿತಿ ಉಳಿಸಲಾಗಿದೆ. ಅಂದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಕಿಸಾನ್ ವಿಕಾಸ್ ಪತ್ರ, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳ ದರ ಮೊದಲಿದ್ದಂತೆಯೇ ಇರುತ್ತದೆ.

‘2023-24ರ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್ ಆದ ಜನವರಿ 1ರಿಂದ ಮಾರ್ಚ್ 31ರವರೆಗಿನ ಅವಧಿಗೆ ವಿವಿಧ ಸಣ್ಣ ಉಳಿತಾಯ ಯೋಜನೆಗಳಿಗೆ ದರ ಪರಿಷ್ಕರಿಸಲಾಗಿದೆ’ ಎಂದು ಹಣಕಾಸು ಸಚಿವಾಲಯ ಶುಕ್ರವಾರ (ಡಿ. 29) ಹೇಳಿಕೆಯಲ್ಲಿ ತಿಳಿಸಿದೆ. ಅಂಚೆ ಕಚೇರಿಯ ಟರ್ಮ್ ಡೆಪಾಸಿಟ್​ಗಳ ಪೈಕಿ ಎರಡು ಮತ್ತು ಮೂರು ವರ್ಷದ ಅವಧಿ ಠೇವಣಿಗಳಿಗೆ ಏಕ ರೀತಿಯ ಬಡ್ಡಿದರ ಇತ್ತು. ಈಗ 3 ವರ್ಷದ ಠೇವಣಿಗೆ 10 ಮೂಲಾಂಕಗಳಷ್ಟು ಬಡ್ಡಿ ಹೆಚ್ಚಿಸಲಾಗಿದೆ.

ಹಿಂದಿನ ತ್ರೈಮಾಸಿಕ ಅವಧಿಯಲ್ಲಿ, ಅಂದರೆ 2023ರ ಅಕ್ಟೋಬರ್​ನಿಂದ ಡಿಸೆಂಬರ್ ಅವಧಿಯಲ್ಲಿ ನಡೆದ ಪರಿಷ್ಕರಣೆಯಲ್ಲಿ 5 ವರ್ಷದ ಅಂಚೆ ಕಚೇರಿ ಆರ್​ಡಿ ಸ್ಕೀಮ್​ನಲ್ಲಿ 20 ಮೂಲಾಂಗಳಷ್ಟು ಬಡ್ಡಿ ಹೆಚ್ಚಿಸಲಾಗಿತ್ತು. ಶೇ. 6.5 ಇದ್ದ ಬಡ್ಡಿದರ ಶೇ. 6.7ಕ್ಕೆ ಹೆಚ್ಚಾಗಿತ್ತು.

ಇದನ್ನೂ ಓದಿ: Reliance Focus: ಯುವಕರು, ಡಾಟಾ, ಎಐ: ರಿಲಾಯನ್ಸ್​ನ ಭವಿಷ್ಯದ ಆದ್ಯತೆಗಳ ಸುಳಿವು ಬಿಚ್ಚಿಟ್ಟ ಮುಕೇಶ್ ಅಂಬಾನಿ

2024ರ ಜನವರಿಯಿಂದ ಮಾರ್ಚ್​ವರೆಗಿನ ಅವಧಿಗೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ

  • ಪೋಸ್ಟ್ ಆಫೀಸ್ ಸೇವಿಂಗ್ಸ್ ಡೆಪಾಸಿಟ್: ಶೇ. 4
  • ಅಂಚೆ ಕಚೇರಿ 1 ವರ್ಷದ ಅವಧಿ ಠೇವಣಿ: ಶೇ. 6.9
  • ಅಂಚೆ ಕಚೇರಿ 2 ವರ್ಷದ ಅವಧಿ ಠೇವಣಿ: ಶೇ. 7
  • ಅಂಚೆ ಕಚೇರಿ 3 ವರ್ಷದ ಅವಧಿ ಠೇವಣಿ: ಶೇ. 7.1 (ಹಿಂದಿನದ್ದು 7%)
  • ಅಂಚೆ ಕಚೇರಿ 5 ವರ್ಷದ ಅವಧಿ ಠೇವಣಿ: ಶೇ. 7.5
  • ಅಂಚೆ ಕಚೇರಿ 5 ವರ್ಷದ ಆರ್​ಡಿ: ಶೇ. 6.7
  • ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್​ಎಸ್​ಸಿ): ಶೇ. 7.7
  • ಕಿಸಾನ್ ವಿಕಾಸ್ ಪತ್ರ: ಶೇ. 7.5
  • ಪಬ್ಲಿಕ್ ಪ್ರಾವಿಡೆಂಟ್ ಫಂಡ್: ಶೇ. 7.1
  • ಸುಕನ್ಯ ಸಮೃದ್ಧಿ ಯೋಜನೆ: ಶೇ. 8.2 (ಹಿಂದಿನದ್ದು ಶೇ. 8)
  • ಹಿರಿಯ ನಾಗರಿಕ ಉಳಿತಾಯ ಯೋಜನೆ: ಶೇ. 8.2
  • ಮಾಸಿಕ ಆದಾಯ ಖಾತೆ: ಶೇ. 7.4

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:02 pm, Fri, 29 December 23