Sovereign Gold Bonds V: ಸವರನ್ ಗೋಲ್ಡ್​ ಬಾಂಡ್​ V ಇಂದಿನಿಂದ ಸಬ್​ಸ್ಕ್ರಿಪ್ಷನ್; ಗ್ರಾಮ್​ಗೆ 4740 ರೂ. ನಿಗದಿ

| Updated By: Srinivas Mata

Updated on: Aug 09, 2021 | 11:21 AM

ಸವರನ್ ಗೋಲ್ಡ್ ಬಾಂಡ್ಸ್ ಐದನೇ ಕಂತಿನ ಸಬ್​ಸ್ಕ್ರಿಪ್ಷನ್ ಇಂದಿನಿಂದ (ಆಗಸ್ಟ್ 9, 2021) ಆರಂಭವಾಗಲಿದೆ. ಇದರ ಬಗ್ಗೆ ವಿವರಣೆ ಇಲ್ಲಿದೆ.

Sovereign Gold Bonds V: ಸವರನ್ ಗೋಲ್ಡ್​ ಬಾಂಡ್​ V ಇಂದಿನಿಂದ ಸಬ್​ಸ್ಕ್ರಿಪ್ಷನ್; ಗ್ರಾಮ್​ಗೆ 4740 ರೂ. ನಿಗದಿ
ಸಾಂದರ್ಭಿಕ ಚಿತ್ರ
Follow us on

ಪ್ರಸಕ್ತ ಹಣಕಾಸು ವರ್ಷದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (Reserve Bank Of India) ಐದನೇ ಕಂತಿನ ಸವರನ್ ಗೋಲ್ಡ್ ಬಾಂಡ್ಸ್ (SGBs) ಆಗಸ್ಟ್ 9, 2021ರ ಸೋಮವಾರದಿಂದ ಸಬ್​ಸ್ಕ್ರಿಪ್ಷನ್ ಆರಂಭವಾಗಿದೆ. ಪ್ರತಿ ಬಾಂಡ್​ಗೆ 4790 ರೂಪಾಯಿಯಂತೆ ಸವರನ್ ಗೋಲ್ಡ್ ಬಾಂಡ್​ಗಳನ್ನು ವಿತರಿಸಲಾಗುತ್ತದೆ. ಪ್ರತಿ ಬಾಂಡ್​ ಒಂದು ಗ್ರಾಮ್​ ಚಿನ್ನದ ದರಕ್ಕೆ ಸಮವಾಗಿರುತ್ತದೆ. ಡಿಜಿಟಲ್ ಪಾವತಿ ವಿಧಾನವನ್ನು ಬಳಸಿದಲ್ಲಿ ರೂ. 50 ರಿಯಾಯಿತಿ ದೊರೆಯುತ್ತದೆ. ಆಗ ಹೂಡಿಕೆದಾರರಿಗೆ ಪ್ರತಿ ಬಾಂಡ್​​ಗೆ 4740 ರೂಪಾಯಿಗೆ ದೊರೆಯುತ್ತದೆ. ಹೂಡಿಕೆದಾರರಿಗೆ ಶೇ 2.5ರ ಬಡ್ಡಿಯು ಅರ್ಧ ವಾರ್ಷಿಕವಾಗಿ ದೊರೆಯುತ್ತದೆ. ಈ ಬಾಂಡ್​ಗಳು ಸ್ಟಾಕ್​ ಎಕ್ಸ್​ಚೇಂಜ್​ನಲ್ಲಿ ಲಿಸ್ಟಿಂಗ್ ಆಗುತ್ತದೆ. ಮೆಚ್ಯೂರಿಟಿ ಅವಧಿಯಲ್ಲಿ ಚಿನ್ನದ ಮೌಲ್ಯ ಎಷ್ಟಿರುತ್ತದೋ ಅದನ್ನೋ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನೀಡಲಾಗುತ್ತದೆ.

ಸವರನ್ ಗೋಲ್ಡ್ ಬಾಂಡ್ಸ್ ದೀರ್ಘಾವಧಿಯ ಹೂಡಿಕೆಗೆ ಅತ್ಯುತ್ತಮ. ಹೂಡಿಕೆಗೆ ಬಡ್ಡಿ ಹಾಗೂ ಮೆಚ್ಯೂರಿಟಿ ತನಕ ಉಳಿಸಿಕೊಂಡಲ್ಲಿ ಕ್ಯಾಪಿಟಲ್ ಗೇಯ್ನ್ಸ್​ ಮೇಲೆ ತೆರಿಗೆ ಕೂಡ ಇಲ್ಲ ಎನ್ನುತ್ತಾರೆ ತಜ್ಞರು. ಸವರನ್ ಗೋಲ್ಡ್ ಬಾಂಡ್​ಗಳ ಅವಧಿ 8 ವರ್ಷ. 5 ವರ್ಷಗಳ ಅವಧಿ ನಂತರ, ಪ್ರತಿ ಬಡ್ಡಿ ಪಾವತಿ ದಿನಾಂಕದ ಸಂದರ್ಭದಲ್ಲಿ ಈ ಹೂಡಿಕೆಯಿಂದ ಹೊರಗೆ ಬರಬಹುದು. ಗೋಲ್ಡ್​ ಎಕ್ಸ್​ಚೇಂಜ್​ ಟ್ರೇಡೆಡ್ ಫಂಡ್​ (ಇಟಿಎಫ್) ಹಾಗೈ ಗೋಲ್ಡ್ ಫಂಡ್ ಆಫ್ ಫಂಡ್ ಮೂಲಕವೂ ಖರೀದಿ ಮಾಡಬಹುದು. ಆದರೆ ಈ ಎರಡೂ ಹೂಡಿಕೆಗೆ ಅರ್ಧ ಪರ್ಸೆಂಟ್​ನಷ್ಟು​ ವೆಚ್ಚವನ್ನು ವಿಧಿಸಲಾಗುತ್ತದೆ.

ಸವರನ್ ಗೋಲ್ಡ್​ ಬಾಂಡ್​ಗಳಿಗೆ ಯಾವುದೇ ವೆಚ್ಚ ಇರುವುದಿಲ್ಲ. ದೀರ್ಘಾವಧಿ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್​ಗಿಂತ ಚಿನ್ನ ಹೆಚ್ಚು ಆಕರ್ಷಕ. ಒಂದು ವೇಳೆ ಸವರನ್ ಗೋಲ್ಡ್​ ಬಾಂಡ್ಸ್​ಗಳನ್ನು ಮೆಚ್ಯೂರಿಟಿ ತನಕ ಇಟ್ಟುಕೊಂಡಿದ್ದಲ್ಲಿ ಎಲ್ಲ ಲಾಭಕ್ಕೂ ಕ್ಯಾಪಿಟಲ್ ಗೇಯ್ನ್ಸ್​​ ತೆರಿಗೆಯಿಂದ ವಿನಾಯಿತಿ ಇದೆ. ಬಡ್ಡಿಯನ್ನು ಆದಾಯಕ್ಕೆ ಸೇರ್ಪಡೆ ಮಾಡಲಾಗುತ್ತದೆ ಮತ್ತು ಯಾವ ಸ್ಲ್ಯಾಬ್​ ದರ ಬರುತ್ತದೋ ಅದಕ್ಕೆ ತಕ್ಕಂತೆ ವಿಧಿಸಲಾಗುತ್ತದೆ.

ಈ ಬಾಂಡ್​ಗಳು ಲಿಕ್ವಿಡ್​ ಅಲ್ಲ (ಸುಲಭವಾದ ನಗದೀಕರಣ ಸಾಧ್ಯ ಇಲ್ಲ). ಬಾಂಡ್​ ಸರಣಿಯಲ್ಲಿ ಕೆಲವು ಒಂದೋ ನಿರಂತರವಾಗಿ ವಹಿವಾಟು ನಡೆಸಲ್ಲ ಅಥವಾ ಸ್ಟಾಕ್​ ಎಕ್ಸ್​ಚೇಂಜ್​ಗಳಲ್ಲಿ ಸ್ಪಾಟ್​ ದರಕ್ಕಿಂತ ರಿಯಾಯಿತಿಯಲ್ಲಿ ವಹಿವಾಟು ಮಾಡುತ್ತದೆ. ಸ್ಟಾಕ್​ ಎಕ್ಸ್​ಚೇಂಜ್​ಗಳಲ್ಲಿ ಸರಾಸರಿ ವ್ಯಾಲ್ಯೂಮ್​ ಕ್ರಮೇಣವಾಗಿ ಹೆಚ್ಚುತ್ತಾ ಬರುತ್ತಿದೆ. ಈಚೆಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೆಲವು ಪ್ರಕರಣಗಳಲ್ಲಿ ಎಸ್​ಜಿಬಿಗಳು ಸ್ವಲ್ಪ ಮಟ್ಟಿಗೆ ಸ್ಪಾಟ್​ ದರದಲ್ಲಿ ಸ್ವಲ್ಪ ಮಟ್ಟಿಗೆ ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತದೆ.

ಇದನ್ನೂ ಓದಿ: Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?