
ನವದೆಹಲಿ: 10 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿನ ಉಳಿತಾಯದ ಮೇಲಿನ ಬಡ್ಡಿ (Interest Rate) ದರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮಂಗಳವಾರ ಶೇಕಡಾ 0.30ರಷ್ಟು ಹೆಚ್ಚಿಸಿದೆ. 10 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಉಳಿತಾಯದ ಮೇಲೆ ಈಗಿರುವ ಶೇಕಡಾ 2.70 ಬಡ್ಡಿ ದರ ಮುಂದುವರಿಯಲಿದೆ ಎಂದು ಬ್ಯಾಂಕ್ ತಿಳಿಸಿದೆ. ಪರಿಷ್ಕೃತ ಬಡ್ಡಿ ದರ ಅಕ್ಟೋಬರ್ 15ರಿಂದಲೇ ಪೂರ್ವಾನ್ವಯವಾಗಲಿದೆ ಎಂದು ಬ್ಯಾಂಕ್ ತಿಳಿಸಿರುವುದಾಗಿ ‘ಎಎನ್ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.
ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು ಎಸ್ಬಿಐ ಸೋಮವಾರವಷ್ಟೇ 25 ಮೂಲಾಂಶಗಳಷ್ಟು ಹೆಚ್ಚಿಸಿತ್ತು. ಇದೂ ಕೂಡ ಅಕ್ಟೋಬರ್ 15ರಿಂದಲೇ ಪೂರ್ವಾನ್ವಯವಾಗಲಿದೆ. ಎಲ್ಲ ಅವಧಿಯ ಸಾಲಗಳಿಗೆ ಅನ್ವಯವಾಗಲಿದೆ ಎಂದು ಬ್ಯಾಂಕ್ ತಿಳಿಸಿತ್ತು. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳ (ಎಫ್ಡಿ) ಬಡ್ಡಿ ದರವನ್ನು ಅಕ್ಟೋಬರ್ 15ರಂದು ಎಸ್ಬಿಐ 20 ಮೂಲಾಂಶಗಳ ವರೆಗೆ ಹೆಚ್ಚಿಸಿತ್ತು.
ಇದನ್ನೂ ಓದಿ: SBI Interest Rate on FD: ಎಫ್ಡಿ ಬಡ್ಡಿ ಹೆಚ್ಚಿಸಿದ ಎಸ್ಬಿಐ, ಇಲ್ಲಿದೆ ಪರಿಷ್ಕೃತ ಬಡ್ಡಿ ದರ ಮಾಹಿತಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ರೆಪೊ ದರ ಹೆಚ್ಚಿಸಿದಾಗಲೆಲ್ಲ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳು ಬಡ್ಡಿ ದರ ಪರಿಷ್ಕರಿಸುವ ಮೂಲಕ ಅದನ್ನು ಗ್ರಾಹಕರಿಗೆ ವರ್ಗಾಯಿಸುವುದು ಸಾಮಾನ್ಯ. ಅದೇ ರೀತಿ ಎಸ್ಬಿಐ ಬಡ್ಡಿ ದರ ಪರಿಷ್ಕರಣೆ ಮಾಡಿದೆ. ಸೆಪ್ಟೆಂಬರ್ 30ರಂದು ಆರ್ಬಿಐ ರೆಪೊ ದರವನ್ನು ಶೇಕಡಾ 0.50 ಹೆಚ್ಚಿಸಿ, 5.9ಕ್ಕೆ ನಿಗದಿಪಡಿಸಿತ್ತು. ಇದಕ್ಕೂ ಮುನ್ನ ಸತತ 3 ಬಾರಿ ಆರ್ಬಿಐ ರೆಪೊ ದರ ಹೆಚ್ಚಳ ಮಾಡಿತ್ತು. ಆವಾಗಲೂ ಪ್ರಮುಖ ಬ್ಯಾಂಕ್ಗಳು ಬಡ್ಡಿ ದರವನ್ನು ಹೆಚ್ಚಿಸಿದ್ದವು.
Published On - 2:07 pm, Tue, 18 October 22